ಮನುಸ್ಮೃತಿ ಕುರಿತು ಬ್ರಾಹ್ಮಣರಲ್ಲೇ ಅಸಮಾಧಾನ ಇದೆ: ಕವಿ ಸಿದ್ದಲಿಂಗಯ್ಯ

Update: 2019-04-16 18:26 GMT

ಬೆಂಗಳೂರು, ಎ.16: ಸಮಾನತೆ ಹಾಗೂ ಮಾನವೀಯತೆಯ ವಿರೋಧಿಯಾದ ಮನುಸ್ಮೃತಿಯನ್ನು ಸುಟ್ಟು ಹಾಕಬೇಕೆಂಬುದರ ಬಗ್ಗೆ ಮೊದಲು ಚಿಂತನೆ ನಡೆಸಿದ್ದು ಬ್ರಾಹ್ಮಣರೇ ಹೊರತು ಡಾ.ಬಿ.ಆರ್.ಅಂಬೇಡ್ಕರ್ ಅಲ್ಲವೆಂದು ಹಿರಿಯ ಕವಿ ಸಿದ್ಧಲಿಂಗಯ್ಯ ತಿಳಿಸಿದರು.

ಮಂಗಳವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಆಯೋಜಿಸಿದ್ದ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 128ನೇ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

1927ರ ಡಿಸೆಂಬರ್‌ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮನುಸ್ಮೃತಿಯನ್ನು ಬಹಿರಂಗವಾಗಿಯೆ ಸುಟ್ಟರು. ಆದರೆ, ಇದಕ್ಕೂ ಮೊದಲೇ ಸಹಸ್ರ ಬುದ್ದೇ ಎಂಬ ಬ್ರಾಹ್ಮಣ, ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡದ ಮನುಸ್ಮೃತಿಯನ್ನು ಸುಟ್ಟು ಹಾಕಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದ. ಇದು ಬ್ರಾಹ್ಮಣರಲ್ಲಿಯೆ ಮನುಸ್ಮೃತಿ ಕುರಿತು ಒಳ್ಳೆಯ ಅಭಿಪ್ರಾಯ ಇರಲಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟ 20ವರ್ಷದ ನಂತರ ಭಾರತಕ್ಕೆ ಯೋಗ್ಯವಾದ, ಎಲ್ಲರನ್ನು ಒಗ್ಗೂಡಿಸುವಂತಹ ಸಂವಿಧಾನವನ್ನು ರಚಿಸಿದರು. ಇವರು ರೂಪಿಸಿದ ಸಂವಿಧಾನದ ಪ್ರತಿಫಲವಾಗಿ ಇವತ್ತು ದೇಶವು ಅಭಿವೃದ್ದಿಯ ಪಥದತ್ತ ಸಾಗಿದೆ. ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ನೆಲೆಸಲು ಕಾರಣವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಜಾಫೆಟ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ. ಜಾಗತಿಕ ಮಟ್ಟದಲ್ಲಿ ಅವರ ಹುಟ್ಟಿದ ದಿನವನ್ನು ಜ್ಞಾನದ ದಿನವನ್ನಾಗಿ ಆಚರಿಸಲಾಗುತ್ತಿದೆ. ಜಗತ್ತಿನ ಹಲವು ವಿಶ್ವವಿದ್ಯಾಲಯಗಳಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ಅವರ ಕುರಿತು ಅಧ್ಯಯನಗಳು ನಡೆಯುತ್ತಿವೆ ಎಂದು ತಿಳಿಸಿದರು.

1980ರ ಕಾಲಘಟ್ಟದಲ್ಲಿ ಪ್ರತಿ ವಿದ್ಯಾರ್ಥಿಗಳು ದಲಿತ, ರೈತ, ಕಾರ್ಮಿಕ ಇಲ್ಲವೆ ವಿದ್ಯಾರ್ಥಿ ಚಳುವಳಿಯ ಭಾಗವಾಗುತ್ತಿದ್ದರು. ಆದರೆ, ಇಂದಿನ ವಿದ್ಯಾರ್ಥಿಗಳು ರಾಜಕೀಯ, ಸಾಮಾಜಿಕ ಪ್ರಕ್ರಿಯೆಯಲ್ಲಿ ತೊಡಗಲು ನಿರಾಸಕ್ತಿ ವಹಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯ ಲಕ್ಷಣವಲ್ಲವೆಂದು ಅವರು ಹೇಳಿದರು.

ಬರಹಗಾರ್ತಿ ಅನಸೂಯಾ ಕಾಂಬ್ಳೆ ಮಾತನಾಡಿ, ದೇಶದಲ್ಲಿ ಮಹಿಳೆಯರ ಕುರಿತ ಅಧ್ಯಯನವೆ ಭಾರತದ ಚರಿತ್ರೆಯ ನಿಜವಾದ ಅಧ್ಯಯನವಾಗಿದೆ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ಬಲವಾಗಿ ನಂಬಿದ್ದರು. ಹೀಗಾಗಿಯೆ ಅವರ ಎಲ್ಲ ಚಿಂತನೆಗಳನ್ನು ಮಹಿಳಾ ಸಮುದಾಯದ ಹಿನ್ನೆಲೆಯನ್ನಿಟ್ಟು ಅಧ್ಯಯನ ಮಾಡಿದ್ದಾರೆ ಎಂದರು.

ಸ್ವಜಾತಿಯ ವಿವಾಹದಿಂದಾಗಿಯೆ ಜಾತಿ ಪದ್ಧತಿ ಉಗಮವಾಗಿದೆ. ಈ ಜಾತಿ ಪದ್ಧತಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಬಾಲ್ಯವಿವಾಹವನ್ನು ಜಾರಿಗೆ ತರಲಾಯಿತು. ಆ ಮೂಲಕ ಸಮಾನತೆ, ಸ್ವಾತಂತ್ರ ಹಾಗೂ ಭ್ರಾತೃತ್ವವನ್ನು ಶಾಶ್ವತವಾಗಿ ಇಲ್ಲವಾಗಿಸುವ ಕೃತ್ಯವನ್ನು ಮನುವಾದಿಗಳು ವ್ಯವಸ್ಥಿತವಾಗಿ ಮಾಡಿದ್ದಾರೆ. ಇದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಂ.ರಾಮಚಂದ್ರಗೌಡ, ಮೌಲ್ಯಮಾಪನದ ಕುಲಸಚಿವ ಪ್ರೊ.ಎನ್.ಚಂದ್ರಪ್ಪ, ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಕಿರಣ್ ಗಾಜನೂರು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News