ಚುನಾವಣಾ ಆಯೋಗ ತನ್ನ ವಿಶ್ವಾಸಾರ್ಹತೆ ಉಳಿಸಿಕೊಳ್ಳಲಿ

Update: 2019-04-17 05:11 GMT

ಮೊದಲ ಹಂತದ ಚುನಾವಣೆ ನಡೆದ ಬೆನ್ನಿಗೇ ಇವಿಎಂ ಕುರಿತಂತೆ ವ್ಯಾಪಕ ವಿರೋಧ ಗಳು ವ್ಯಕ್ತವಾಗುತ್ತಿವೆ. ಚುನಾವಣೆಯ ಸಂದರ್ಭದಲ್ಲಿ ಹಲವಾರು ಕಡೆ ಇವಿಎಂ ಕೈ ಕೊಟ್ಟಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಹಿರಂಗವಾಗಿ ಇವಿಎಂ ವಿರುದ್ಧ ಮಾತನಾಡುತ್ತಿದ್ದಾರೆ. ಪ್ರತಿಪಕ್ಷಗಳು ಒಂದಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮುಂದಾಗಿವೆ. ಹಲವು ನಾಯಕರು ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಲು ಒತ್ತಾಯಿಸುತ್ತಿದ್ದಾರೆ. ಬ್ಯಾಲೆಟ್ ಪೇಪರ್ ಸದ್ಯದ ಸಂದರ್ಭದಲ್ಲಿ ನಡೆಯದ ಮಾತು. ಆದರೆ ಶೇ. 50 ರಷ್ಟು ಇವಿಎಂ-ವಿವಿಪ್ಯಾಟ್ ತಾಳೆ ಹಾಕುವುದು ಚುನಾವಣಾ ಆಯೋಗಕ್ಕೆ ಸಾಧ್ಯವಿದೆ. ಆ ಮೂಲಕ ಚುನಾವಣೆಯನ್ನು ಅತ್ಯಂತ ವಿಶ್ವಾಸಾರ್ಹಗೊಳಿಸುವ ಅವಕಾಶ ಆಯೋಗಕ್ಕಿದೆ. ಅದು ಆಯೋಗದ ವೈಯಕ್ತಿಕ ಅಗತ್ಯವೂ ಕೂಡ. ಆದರೆ ಕ್ಷುಲ್ಲಕ ಕಾರಣವನ್ನು ಮುಂದೊಡ್ಡಿ ಇವಿಎಂ ವಿವಿ ಪ್ಯಾಟ್ ತಾಳೆಯನ್ನು ಶೇ. 50ಕ್ಕೇರಿಸಲು ಆಯೋಗ ಅಡ್ಡಿ ಪಡಿಸುತ್ತಿದೆ. ಚುನಾವಣಾ ಆಯೋಗದ ಈ ವರ್ತನೆ ಇವಿಎಂ ಯಂತ್ರ ಮಾತ್ರವಲ್ಲ, ಚುನಾವಣಾ ಆಯೋಗದ ಕುರಿತ ವಿಶ್ವಾಸಾರ್ಹತೆಯನ್ನೇ ಸಂಶಯದಿಂದ ನೋಡುವಂತೆ ಮಾಡಿದೆ.

  ಇವಿಎಂ ಮತಯಂತ್ರದ ಕುರಿತಂತೆ ಯಾವನೋ ಒಬ್ಬ ಅಭ್ಯರ್ಥಿ ಅಥವಾ ಯಾವುದೋ ಒಂದು ಪ್ರಾದೇಶಿಕ ಪಕ್ಷ ಅನುಮಾನ ವ್ಯಕ್ತಪಡಿಸಿದ್ದರೆ ಅಥವಾ ಒಂದು ಪ್ರಾದೇಶಿಕ ಪಕ್ಷ ಧ್ವನಿಯೆತ್ತಿದ್ದರೆ ಅದು ಬೇರೆ ಮಾತು. ಆದರೆ ಇಂದು ಯಂತ್ರದ ಕುರಿತಂತೆ ಆಡಳಿತ ನಡೆಸುವ ಪಕ್ಷಗಳ ಹೊರತಾಗಿ ಉಳಿದೆಲ್ಲ ರಾಷ್ಟ್ರೀಯ ಪಕ್ಷಗಳು ಪ್ರಶ್ನೆಗಳನ್ನೆತ್ತಿವೆ. ಅಂದರೆ ಇವಿಎಂ ಮೇಲೆ ನಂಬಿಕೆಯಿಲ್ಲ ಎನ್ನುವುದರ ಅರ್ಥ; ನಡೆಯುತ್ತಿರುವ ಚುನಾವಣೆ ಸಕ್ರಮವಾಗಿಲ್ಲ ಎಂದು ಧ್ವನಿಯನ್ನು ನೀಡುತ್ತದೆ. ಚುನಾವಣೆಗೆ ಮುನ್ನವೇ ಮತದಾನ ಪ್ರಕ್ರಿಯೆಯ ಕುರಿತಂತೆ ಪಕ್ಷಗಳು ತೀವ್ರ ಆಕ್ಷೇಪ ಎತ್ತಿರುವಾಗ ಬರುವ ಫಲಿತಾಂಶಗಳು ಪ್ರಜಾಸತ್ತೆಗೆ ಪೂರಕವಾಗಿರಲು ಹೇಗೆ ಸಾಧ್ಯ? ವಿಪಕ್ಷಗಳ ಅನುಮಾನಗಳಿಗೆ ಸ್ಪಷ್ಟವಾದ ಸಮಜಾಯಿಶಿ ನೀಡಿ ಅವರ ಬೇಡಿಕೆಗಳಿಗೆ ಸ್ಪಂದಿಸದೇ ಸರ್ವಾಧಿಕಾರವನ್ನು ಪ್ರದರ್ಶಿಸಿ ತನ್ನ ಮೂಗಿನ ನೇರಕ್ಕೆ ಚುನಾವಣೆ ನಡೆಸಿ, ಇವಿಎಂ ಸರಿಯಾಗಿ ಕಾರ್ಯನಿರ್ವಹಿಸಿದೆ ಎಂಬುದು ಚುನಾವಣಾ ಆಯೋಗ ಹೇಳಿಕೆ ನೀಡಿದರೆ ಚುನಾವಣೆ ಪ್ರಜಾಸತ್ತಾತ್ಮಕವಾಗಿ ನಡೆದಂತಾಗುತ್ತದೆಯೇ?

ಇವಿಎಂ ಮತಯಂತ್ರಗಳ ಕುರಿತಂತೆ ಅನುಮಾನ ಇಂದು ನಿನ್ನೆಯದೇನೂ ಅಲ್ಲ. ಇವಿಎಂ ವಿರುದ್ಧ ಮೊತ್ತ ಮೊದಲು ಅನುಮಾನ ವ್ಯಕ್ತಪಡಿಸಿದವರೇ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ. ಎನ್‌ಡಿಎಯ ‘ಭಾರತ ಪ್ರಕಾಶಿಸುತ್ತಿದೆ’ ಎನ್ನುವ ಘೋಷಣೆಯನ್ನು ಮಕಾಡೆ ಮಲಗಿಸಿ ಯುಪಿಎ ಅಧಿಕಾರ ಹಿಡಿದಾಗ, ಇವಿಎಂನ್ನು ತಿರುಚಲಾಗಿದೆ ಎಂದು ಅಡ್ವಾಣಿ ದೂರು ದಾಖಲಿಸಲು ಮುಂದಾಗಿದ್ದರು. ಕಳೆದ ಬಾರಿ ಮೋದಿ ಭಾರೀ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಕಾರಣ, ಮತಯಂತ್ರಗಳ ತಿರುಚುವಿಕೆ ಎನ್ನುವ ಆರೋಪ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬಂದಿತ್ತು. ಹಲವೆಡೆ ಕಾಂಗ್ರೆಸ್‌ಗೆ ಹಾಕಿದ ಮತ ಬಿಜೆಪಿಗೆ ಬಿದ್ದ ಕುರಿತಂತೆ ಮಾಧ್ಯಮಗಳಲ್ಲೂ ವರದಿಯಾಗಿದ್ದವು. ಹೀಗಿರುವಾಗ, ವಿಪಕ್ಷಗಳು ಆಗ್ರಹಿಸುವ ಮುನ್ನವೇ ಇವಿಎಂನ ವಿಶ್ವಾಸಾರ್ಹತೆಯನ್ನು ಮೇಲೆತ್ತುವುದು ಚುನಾವಣಾ ಆಯೋಗದ ಕರ್ತವ್ಯವಾಗಿತ್ತು. ಚುನಾವಣೆಯನ್ನು ಶಾಂತರೀತಿಯಲ್ಲಿ ನಡೆಸುವುದು, ಅತಿ ಹೆಚ್ಚು ಮತದಾನವಾಗುವಂತೆ ನೋಡಿಕೊಳ್ಳುವುದಷ್ಟೇ ಚುನಾವಣಾ ಆಯೋಗದ ಕರ್ತವ್ಯವಲ್ಲ. ಎಲ್ಲಕ್ಕಿಂತ ಮುಖ್ಯ ಹೊಣೆಗಾರಿಕೆ, ಮತದಾರನ ಮತ ದುರ್ಬಳಕೆಯಾಗಬಾರದು ಮತ್ತು ಅದನ್ನು ಇನ್ನೊಂದು ಪಕ್ಷ ಯಾವ ತಂತ್ರವನ್ನು ಪ್ರಯೋಗಿಸಿಯೂ ಅಪಹರಿಸಬಾರದು. ಈ ಹಿಂದೆ ಬ್ಯಾಲೆಟ್ ಪೇಪರ್ ಬಳಸುವ ಸಂದರ್ಭದಲ್ಲಿ ಮತ ಪೆಟ್ಟಿಗೆಯನ್ನು ಅಪಹರಿಸುವ ಪ್ರಕರಣಗಳು ನಡೆಯುತ್ತಿದ್ದವು. ಇವಿಎಂ ತಿರುಚುವುದೆಂದರೆ, ಮತಪೆಟ್ಟಿಗೆಯ ಅಪಹರಣದ ಇನ್ನೊಂದು ರೂಪವಾಗಿದೆ. ಚುನಾವಣೆಯ ಉದ್ದೇಶವೇ ಇದರಿಂದ ಬುಡಮೇಲಾಗುತ್ತದೆ. ಹೀಗಿರುವಾಗ, ಇವಿಎಂನ ವಿಶ್ವಾಸಾರ್ಹತೆ ಕೇವಲ ಚುನಾವಣಾ ಆಯೋಗಕ್ಕೆ ಮನವರಿಕೆಯಾದರೆ ಸಾಕಾಗುವುದಿಲ್ಲ. ರಾಜಕೀಯ ಪಕ್ಷಗಳಿಗೆ, ಮತದಾರರಿಗೆ ಅದನ್ನು ಮನವರಿಕೆ ಮಾಡಿಸಿಕೊಡುವುದು ಆಯೋಗದ ಕರ್ತವ್ಯವೇ ಆಗಿದೆ.

  ಇಷ್ಟಕ್ಕೂ ರಾಜಕೀಯ ಪಕ್ಷಗಳು ಇಂದು ಆಗ್ರಹಿಸುತ್ತಿರುವುದು ಬ್ಯಾಲೆಟ್ ಪೇಪರ್ ಮತದಾನವನ್ನಲ್ಲ. ತಾಳೆ ಹಾಕುವ ಇವಿಎಂ-ವಿವಿ ಪ್ಯಾಟ್‌ನ್ನು ಶೇ.50ಕ್ಕೆ ಏರಿಸಬೇಕು. ಅಂದರೆ ಶೇ. 50ರಷ್ಟು ಇವಿಎಂ ಯಂತ್ರಗಳ ಮತಗಳನ್ನು ವಿವಿ ಪ್ಯಾಟ್ ಸ್ಲಿಪ್‌ಗಳ ಜೊತೆಗೆ ತಾಳೆ ಹಾಕಬೇಕು. ಒಂದಿಷ್ಟು ದುಬಾರಿಯಾದರೂ, ಹೆಚ್ಚು ಸಮಯವನ್ನು ತೆಗೆದುಕೊಂಡರೂ, ಚುನಾವಣೆಯ ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿಯುವುದರ ಮುಂದೆ ಅದೇನೂ ಅಲ್ಲ. ಇಷ್ಟಕ್ಕೂ ವಿವಿಪ್ಯಾಟ್‌ಗೆ ಸಂಬಂಧಿಸಿ ಚುನಾವಣಾ ಆಯೋಗಕ್ಕೆ ಇರುವ ಸಮಸ್ಯೆಯಾದರೂ ಏನು? ಶೇ. 50ರಷ್ಟು ಹೆಚ್ಚಳ ಮಾಡಿದರೆ ಫಲಿತಾಂಶ ಪ್ರಕಟಿಸುವಾಗ ತಡವಾಗಬಹುದು ಎನ್ನುವುದು ಅದರ ವಾದ. ಚುನಾವಣಾ ಆಯೋಗದ ಕರ್ತವ್ಯ ಅತಿ ಬೇಗ ಫಲಿತಾಂಶವನ್ನು ಘೋಷಿಸುವುದಲ್ಲ. ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ನೋಡಿಕೊಳ್ಳುವುದು. ಇವಿಎಂ ಮೂಲಕ ಅಕ್ರಮ ನಡೆಯಬಹುದು ಎಂದು ಈ ದೇಶದ ಬಹುತೇಕ ಪಕ್ಷಗಳು ಅನುಮಾನಿಸುತ್ತಿವೆ ಎಂದಾದರೆ ಫಲಿತಾಂಶ ತಡವಾದರೂ ಸರಿ, ಅವರ ಅನುಮಾನಗಳನ್ನು ನಿವಾರಿಸುವುದಕ್ಕೆ ಪೂರಕವಾದ ವ್ಯವಸ್ಥೆ ಮಾಡುವುದು ಆಯೋಗದ ಕರ್ತವ್ಯ. ಯಾಕೆಂದರೆ ಈ ಫಲಿತಾಂಶ ಈ ದೇಶವನ್ನು ಯಾರು ಆಳಬೇಕು ಎನ್ನುವುದನ್ನು ನಿರ್ಧರಿಸುತ್ತದೆ.

ಚುನಾವಣೆಯಲ್ಲಿ ಗೆಲ್ಲಲು ಎಂತಹ ಹೀನ ಕಾರ್ಯಕ್ಕೆ ಇಳಿಯಲೂ ಸಿದ್ಧ ಎಂಬಂತೆ ಪಕ್ಷಗಳು ಪರಸ್ಪರ ಸ್ಪರ್ಧೆಗಿಳಿದಿರುವಾಗ, ಕೆಲವು ಶಕ್ತಿಗಳು ಇವಿಎಂನ್ನು ದುರ್ಬಳಕೆ ಮಾಡಬಾರದು ಎಂದಿಲ್ಲ. ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಮನವಿಗೆ ಚುನಾವಣಾ ಆಯೋಗ ಸ್ಪಂದಿಸಬೇಕು. ಶೇ. 50ರಷ್ಟು ವಿವಿಪ್ಯಾಟ್ ತಾಳೆಗೆ ಚುನಾವಣಾ ಆಯೋಗ ಹಿಂಜರಿದರೆ, ಇವಿಎಂ ಯಂತ್ರದ ಮೇಲಿದ್ದ ಅನುಮಾನ, ಶಂಕೆ ಚುನಾವಣಾ ಆಯೋಗದ ಮೇಲೆ ತಿರುಗಬಹುದು. ಈಗಾಗಲೇ ಚುನಾವಣಾ ಆಯೋಗ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಹಲವು ಗಣ್ಯರು ರಾಷ್ಟ್ರಪತಿಗೆ ದೂರು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗದ ಮೇಲೆ ಅನುಮಾನ ವ್ಯಕ್ತಪಡಿಸಿರುವುದರ ವಿರುದ್ಧವೂ ಆಕ್ಷೇಪಗಳು ಕೇಳಿ ಬಂದಿವೆ. ಒಂದನ್ನು ನಾವು ಗಮನಿಸಬೇಕು. ಮೋದಿ ನೇತೃತ್ವದ ಕೇಂದ್ರ ಸರಕಾರ, ಎಲ್ಲ ಸರಕಾರಿ ತನಿಖಾ ಸಂಸ್ಥೆಗಳ ಮೇಲೆ ಹಸ್ತಕ್ಷೇಪ ನಡೆಸಿ ಅದರ ವಿಶ್ವಾಸಾರ್ಹತೆಯನ್ನು ನಾಶ ಮಾಡಿದೆ. ಹೀಗಿರುವಾಗ ಅದು ಚುನಾವಣಾ ಆಯೋಗದಲ್ಲೂ ತನ್ನ ಹಸ್ತಕ್ಷೇಪ ನಡೆಸಿರುವ ಕುರಿತಂತೆ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿದರೆ ಅದಕ್ಕೆ ಹೊಣೆ ಯಾರು? ಇವಿಎಂ ಕುರಿತಂತೆ ಇರುವ ಅನುಮಾನಗಳನ್ನು ನಿವಾರಿಸುವ ಮೂಲಕ ತನ್ನ ಮೇಲೆ ದೇಶದ ಜನತೆ ಇಟ್ಟ ನಂಬಿಕೆಯನ್ನು ಚುನಾವಣಾ ಆಯೋಗ ಉಳಿಸಿಕೊಳ್ಳಲು ಮುಂದಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News