ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆಯದು ಎಂಬ ಇಮ್ರಾನ್ ಖಾನ್ ಹೇಳಿಕೆಗೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ

Update: 2019-04-17 08:26 GMT

ಹೊಸದಿಲ್ಲಿ, ಎ.17: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ಭಾರತದ ಜತೆ ಮಾತುಕತೆಗಳಿಗೆ ಉತ್ತಮ ಅವಕಾಶವಿರಲಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇತ್ತೀಚೆಗೆ ಹೇಳಿರುವುದು ಕಾಂಗ್ರೆಸ್ ಸಂಚಿನ ಭಾಗವಾಗಿರಬಹುದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

“ಇಂತಹ ಹೇಳಿಕೆಗಳು ಭಾರತದಲ್ಲಿ ಚುನಾವಣೆಯ ಅಸುಪಾಸಿನಲ್ಲಿಯೇ ಬರುತ್ತವೆ. ಪ್ರಧಾನಿ ನರೇಂದ್ರ ಮೋದಿಯನ್ನು  ಕೆಳಗಿಳಿಸಲು ಸಹಾಯ ಕೋರಿಕೊಂಡು ಕೆಲ ಪ್ರಮುಖ ಕಾಂಗ್ರೆಸ್ ನಾಯಕರೇ ಅಲ್ಲಿಗೆ ಹೋಗಿದ್ದಾರೆ'' ಎಂದು ಸುದ್ದಿ ಸಂಸ್ಥೆ ಎಎನ್‍ಐಗೆ ನೀಡಿರುವ ಸಂದರ್ಶನದಲ್ಲಿ ಸಚಿವೆ ಆರೋಪಿಸಿದ್ದಾರೆ.

“ಇದು ಕಾಂಗ್ರೆಸ್ ಸಂಚಿನ ಭಾಗವಾಗಿರಬಹುದು ಎಂದು ನಾನು ಯೋಚಿಸುತ್ತಿದ್ದೇನೆ. ಇದರ ಬಗ್ಗೆ ನಿಜವಾಗಿ ಏನು ಹೇಳಬೇಕೆಂಬುದೇ ತೋಚುತ್ತಿಲ್ಲ'' ಎಂದು ಅವರು ಹೇಳಿದರು.

ನಿಂದನಾತ್ಮಕ ಹೇಳಿಕೆಗಳನ್ನು ನೀಡುವುದಕ್ಕಿಂತ ಮೊದಲು ಚೆನ್ನಾಗಿ ಯೋಚಿಸಬೇಕು ಎಂದು ರಾಜಕಾರಣಿಗಳಿಗೆ ಸಲಹೆ ನೀಡಿದ ಸಚಿವೆ ರಾಜಕೀಯ ಟೀಕೆಗಳ ವಿಚಾರದಲ್ಲಿ ಗೆರೆ ಎಳೆಯುವ ಅಗತ್ಯವಿದೆಯೆಂದು ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಅವರು ಬಿಜೆಪಿ ಅಭ್ಯರ್ಥಿ ಜಯಪ್ರದಾ ಬಗ್ಗೆ ನೀಡಿರುವ ನಿಂದನಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

``ಇತರ ವಿಚಾರಗಳ ಬಗ್ಗೆ ಮಾತನಾಡುವಾಗ ಮಹಿಳೆಯರನ್ನು ಟಾರ್ಗೆಟ್ ಮಾಡುವುದು ಸುಲಭವಾಗಿದೆ'' ಎಂದು ಖೇದ ವ್ಯಕ್ತಪಡಿಸಿದ ಸಚಿವೆ ತಮ್ಮ ಸಲಹೆ ಎಲ್ಲಾ ಪಕ್ಷದ ನಾಯಕರಿಗೂ  ಅನ್ವಯಿಸುತ್ತದೆ ಎಂದರು.

`ಕಳ್ಳತನ'ವಾಗಿದೆಯೆಂದು ಹೇಳಲಾದ ರಫೇಲ್ ದಾಖಲೆಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಕೈಗೊಂಡಿರುವ ನಿರ್ಧಾರದಿಂದ ಕೇಂದ್ರ ಸರಕಾರಕ್ಕೆ ಹಿನ್ನಡೆಯಾಗಿದೆಯೇ ಎಂಬ ಪ್ರಶ್ನೆಗೆ ನಕಾರಾತ್ಮಕವಾಗಿ ಉತ್ತರಿಸಿದ ಸಚಿವೆ, ಈ ವಿಚಾರದಲ್ಲಿ ನಮ್ಮ ನಿಲುವು ಅಚಲವಾಗಿದೆ. ಗೌಪ್ಯ ದಾಖಲೆಗಳು ಬಹಿರಂಗಗೊಂಡಾಗ ಅವುಗಳನ್ನು ಕಳ್ಳತನಗೈದಂತೆ, ಈ ದಾಖಲೆಗಳು ಹೇಗೆ ಸೋರಿಕೆಯಾಗಿವೆ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಸಚಿವೆ ತಿಳಿಸಿದರು.

ಫೆಬ್ರವರಿ 26ರ ವಾಯುದಾಳಿಯ ಸಂದರ್ಭ ಭಾರತ ಗುರಿಯಾಗಿಸಿಲ್ಲದ ಮದರಸಾಗೆ ಪಾಕಿಸ್ತಾನವು ಪತ್ರಕರ್ತರನ್ನು ಕರೆದುಕೊಂಡು ಹೋಗಿ ತನ್ನನ್ನು ತಾನೇ ಅಪಹಾಸ್ಯಗೈದಿದೆ ಎಂದು ಸಚಿವೆ ಹೇಳಿದರು. “ದಾಳಿ ನಡೆದಿಲ್ಲ ಹಾಗೂ ಹಲವು ಮಂದಿ ಸತ್ತಿಲ್ಲ ಎಂಬುದನ್ನು ಸಾಬೀತುಪಡಿಸುವುದು ಪಾಕಿಸ್ತಾನಕ್ಕೆ ಬಿಟ್ಟಿದ್ದು'' ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News