ರಾಜ್ಯದ 14 ಸ್ಥಾನ ಸೇರಿ 95 ಕ್ಷೇತ್ರಗಳ ಮತದಾನ ಆರಂಭ

Update: 2019-04-18 03:55 GMT

ಬೆಂಗಳೂರು: ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳು ಸೇರಿದಂತೆ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 95 ಕ್ಷೇತ್ರಗಳಲ್ಲಿ ಮುಂಜಾನೆ 7ಕ್ಕೆ ಮತದಾನ ಆರಂಭವಾಗಿದೆ.

ವೇಳಾಪಟ್ಟಿಯಂತೆ ಈ ಹಂತದಲ್ಲಿ 97 ಕ್ಷೇತ್ರಗಳಲ್ಲಿ ಮತದಾನ ನಡೆಯಬೇಕಿತ್ತು. ಆದರೆ ಚುನಾವಣಾ ಆಯೋಗ ತಮಿಳುನಾಡಿನ ವೆಲ್ಲೂರು ಮತ್ತು ತ್ರಿಪುರಾದ ಪೂರ್ವ ತ್ರಿಪುರಾ ಕ್ಷೇತ್ರದ ಮತದಾನವನ್ನು ರದ್ದುಪಡಿಸಿದೆ.

ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಹಿರಿಯ ನಟ, ರಾಜಕಾರಣಿ ರಜನೀಕಾಂತ್ ಚೆನ್ನೈನ ಸ್ಟೆಲ್ಲಾ ಮೇರಿಸ್ ಕಾಲೇಜು ಮತಗಟ್ಟೆಯಲ್ಲಿ ಬೆಳಗ್ಗೆಯೇ ಮತ ಚಲಾಯಿಸಿದರು. ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಶಿವಗಂಗಾ ಕ್ಷೇತ್ರದ ಕರೈಕುಡಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

2014ರ ಚುನಾವಣೆಯಲ್ಲಿ ಈ 95 ಕ್ಷೇತ್ರಗಳ ಪೈಕಿ ಬಿಜೆಪಿ 27 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎನ್‌ಡಿಎ ಮಿತ್ರ ಪಕ್ಷಗಳು ಆರು ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದಿತ್ತು. ಇತರ ಮೂರು ಸ್ಥಾನಗಳನ್ನು ಯುಪಿಎ ಮಿತ್ರಪಕ್ಷಗಳು ಗೆದ್ದಿದ್ದವು. ಉಳಿದಂತೆ 47 ಸ್ಥಾನಗಳು ಯುಪಿಎ ಹಾಗೂ ಎನ್‌ಡಿಎ ಹೊರತುಪಡಿಸಿ ಇತರ ಪಕ್ಷಗಳ ಪಾಲಾಗಿದ್ದವು. ತಮಿಳುನಾಡಿನ 39 ಕ್ಷೇತ್ರಗಳ ಪೈಕಿ ಎಐಎಡಿಎಂಕೆ 37 ಸ್ಥಾನಗಳನ್ನು ಕಳೆದ ಚುನಾವಣೆಯಲ್ಲಿ ಗೆದ್ದಿತ್ತು.

15.8 ಕೋಟಿ ಮತದಾರರು ಇಂದು ಮತ ಚಲಾಯಿಸಲಿದ್ದು, 1600 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಂದು ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್‌ನ ರಾಜ ಬಬ್ಬರ್, ಬಿಜೆಪಿಯ ಹೇಮಮಾಲಿನಿ, ಡಿಎಂಕೆಯ ಕನಿಮೋಳಿ ಕೇತ್ರಗಳು ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News