ಬೆಂಗಳೂರು: ಸಿಎಂ ಕುಮಾರಸ್ವಾಮಿ ಸಹಿತ ಗಣ್ಯರಿಂದ ಮತದಾನ

Update: 2019-04-18 16:26 GMT

ಬೆಂಗಳೂರು, ಎ. 18: ‘ಪ್ರಜಾಪ್ರಭುತ್ವದ ಹಬ್ಬ’ ಎಂದು ಪರಿಗಣಿಸಲಾಗಿರುವ ಲೋಕಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಸೇರಿದಂತೆ ಹಲವು ಗಣ್ಯರು ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಗುರುವಾರ ಬೆಳಗ್ಗೆ ರಾಮನಗರ ಜಿಲ್ಲೆಯ ಕೇತಿಗಾನಹಳ್ಳಿಯ ಮತಗಟ್ಟೆ ಸಂಖ್ಯೆ 235ರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ಮಂಡ್ಯ ಕ್ಷೇತ್ರದ ಅಭ್ಯರ್ಥಿ ನಿಖಿಲ್‌ಕುಮಾರ್ ಅವರೊಂದಿಗೆ ತಮ್ಮ ಹಕ್ಕು ಚಲಾವಣೆ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಜತೆ ಸ್ವಗ್ರಾಮ ಮೈಸೂರಿನ ಸಿದ್ದರಾಮನಹುಂಡಿ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಚಲಾಯಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಮ್ಮ ಪತ್ನಿ ಚೆನ್ನಮ್ಮ ಅವರೊಂದಿಗೆ ತವರು ಗ್ರಾಮ ಪಡವಲಹಿಪ್ಪೆಯಲ್ಲಿ ಹಕ್ಕು ಚಲಾಯಿಸಿದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಜಯನಗರದ ಬಿಇಎಸ್ ಕಾಲೇಜಿನಲ್ಲಿ, ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಭೂಪಸಂದ್ರದ ಮತಗಟ್ಟೆ ಸಂಖ್ಯೆ 56ರಲ್ಲಿ ಪತ್ನಿ ಮತ್ತು ಕುಟುಂಬದೊಂದಿಗೆ ಮತಹಾಕಿದರು.

ಉದ್ಯಮಿ ಇನ್‌ಫೋಸಿಸ್ ನಾರಾಯಣ ಮೂರ್ತಿ, ಲೇಖಕಿ ಸುಧಾಮೂರ್ತಿ ತಮ್ಮ ಹಕ್ಕು ಚಲಾಯಿಸಿದರು. ಶತಾಯುಷಿ/ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಇಂಟರ್ ನ್ಯಾಷನಲ್ ಅಕಾಡೆಮಿ ಬೂತ್‌ನಲ್ಲಿ ಮತ ಹಾಕಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತುಮಕೂರಿನ ಸಿದಾರ್ಥ ನಗರದ ಸರಕಾರಿ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಪತ್ನಿಯೊಂದಿಗೆ ತೆರಳಿ ಮತ ಚಲಾಯಿಸಿದರು. ರಾಜ್ಯದ ಗಮನ ಸೆಳೆದಿರುವ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಜನ ಸಾಮಾನ್ಯರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಮತ ಚಲಾವಣೆ ಮಾಡಿದರು.

ರಿಕ್ಷಾದಲ್ಲಿ ರಿಝ್ವಾನ್: ಬೆಂಗಳೂರು ಕೇಂದ್ರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಝ್ವಿನ್ ಅರ್ಶದ್ ತಮ್ಮ ಪತ್ನಿಯೊಂದಿಗೆ ರಿಕ್ಷಾದಲ್ಲಿ ತೆರಳಿ ಮತ ಚಲಾಯಿಸಿದ್ದು ಎಲ್ಲರ ಗಮನ ಸೆಳೆಯಿತು. ಖ್ಯಾತ ಕ್ರಿಕೆಟ್ ಪಟು ಅನಿಲ್ ಕುಂಬ್ಳೆ ಇಲ್ಲಿನ ಬನಶಂಕರಿಯ ಕಿಮ್ಸ್ ಕಾಲೇಜಿನ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ಚಿಕ್ಕಬಳ್ಳಾಪುರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಎಂ.ವೀರಪ್ಪಮೊಯ್ಲಿ ಪತ್ನಿ ಮಾಲತಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಚಿಕ್ಕಬಳ್ಳಾಪುರದ ಮತಗಟ್ಟೆ ಸಂಖ್ಯೆ 162ರಲ್ಲಿ ಸಾರ್ವಜನಿಕರೊಂದಿಗೆ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಇದೇ ವೇಳೆ ಮುರುಘಮಠದ ಡಾ.ಶಿವಮೂರ್ತಿ ಮುರುಘ ಶರಣರು ಚಿತ್ರದುರ್ಗ ನಗರದ ಮಠದಕುರುಬರಹಟ್ಟಿಯಲ್ಲಿ ಮತದಾನ ಮಾಡಿದರು.

ಅಲ್ಲಿ ಅಭ್ಯರ್ಥಿ-ಇಲ್ಲಿ ಮತದಾನ: ಮಾಜಿ ಪ್ರಧಾನಿ ದೇವೇಗೌಡ ತುಮಕೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದು, ಹೊಳೆನರಸೀಪುರ ಕ್ಷೇತ್ರದ ಪಡುವಲಹಿಪ್ಪೆಯಲ್ಲಿ ಮತ ಹಾಕಿದರು. ಅದೇ ರೀತಿ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ರಾಮನಗರ ಜಿಲ್ಲೆಯಲ್ಲಿ ಮತದಾನ ಮಾಡಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಬೆಂಗಳೂರಿನ ಹೆಬ್ಬಾಳ ಕ್ಷೇತ್ರದಲ್ಲಿ, ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಆನೇಕಲ್‌ನಲ್ಲಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಬೆಂಗಳೂರು ಉತ್ತರ ಕ್ಷೇತ್ರದ ಮಲ್ಲೇಶ್ವರಂನಲ್ಲಿ ಮತ ಚಲಾಯಿಸಿದರು.

ವಾಟ್ಸ್ ಆ್ಯಪ್ ಸ್ಟೇಟಸ್ಸ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತಚಲಾಯಿಸಿದ ಬಹುತೇಕ ಗಣ್ಯರು ಮತ್ತು ಸಾರ್ವಜನಿಕರು ತಮ್ಮ ವಾಟ್ಸ್ ಆ್ಯಪ್ ಸ್ಟೇಟಸ್ಸ್‌ನಲ್ಲಿ ಎಡಗೈ ತೋರು ಬೆರಳಿಗೆ ಶಾಹಿ ಹಾಕಿರುವ ಗುರುತಿನ ಚಿತ್ರ ಪ್ರದರ್ಶಿಸುವ ಮೂಲಕ ‘ನಾನು ಮತ ಹಾಕಿದೆ, ನೀವೂ ಮತ ಚಲಾಯಿಸಿ’ ಎಂದು ಜಾಗೃತಿ ಮೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News