ನಾನು ಮೋದಿಯಂತೆ ಪ್ರತಿ ದಿನ ಮುಖಕ್ಕೆ ವ್ಯಾಕ್ಸಿಂಗ್ ಮಾಡುವುದಿಲ್ಲ: ಕುಮಾರಸ್ವಾಮಿ

Update: 2019-04-18 07:20 GMT

ಶಿವಮೊಗ್ಗ, ಎ.18:  “ನೀವು ನೂರು ಬಾರಿ ಮೈ ತೊಳೆದುಕೊಂಡರೂ ಬೆಳ್ಳಗಾಗೊಲ್ಲ, ಎಮ್ಮೆಯಂತೆ ಕಾಣುತ್ತೀರಿ'' ಎಂದು ತಮ್ಮ ಬಗ್ಗೆ ಮಾಜಿ ಬಿಜೆಪಿ ಶಾಸಕ ರಾಜು ಕಾಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತನಗೆ ಪ್ರಧಾನಿ ನರೇಂದ್ರ ಮೋದಿಯ ಹಾಗೆ ಪ್ರತಿ ದಿನ ಮುಖಕ್ಕೆ ‘ವ್ಯಾಕ್ಸಿಂಗ್’ ಮಾಡುವ ಅಭ್ಯಾಸವಿಲ್ಲ ಎಂದಿದ್ದಾರೆ.

“ಹೌದು, ನಾನು ದಿನಕ್ಕೆ ಹಲವು ಬಾರಿ ಸ್ನಾನ ಮಾಡಿದರೂ ನನ್ನ ಕಪ್ಪು ಎಮ್ಮೆ ಬಣ್ಣ ಹೋಗುವುದಿಲ್ಲ ಎಂದು ಈ ಜನರು (ಬಿಜೆಪಿ) ಹೇಳುತ್ತಿದ್ದಾರೆ.  ಪ್ರತಿ ದಿನ ಬೆಳಗ್ಗೆ ಮುಖಕ್ಕೆ ವ್ಯಾಕ್ಸಿಂಗ್ ಮಾಡಿಕೊಂಡು ಹೊರಬರುವ ನಿಮ್ಮ ಮೋದಿಯಂತೆ ನಾನಲ್ಲ. ನನಗೆ ಬಡ ಜನರ ಜತೆ ಇರಲು ಖುಷಿಯಿದೆ ಹಾಗೂ ನಾನು ಬಡವರನ್ನು ಮುಟ್ಟಿದ ನಂತರ ಕೈ ತೊಳೆದುಕೊಳ್ಳುವುದಿಲ್ಲ'' ಎಂದು ಇಲ್ಲಿ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಸಿಎಂ ಹೇಳಿದರು.

ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ``ಮೋದಿ ಯುವ ಜನತೆಗೇನು ನೀಡಿದ್ದಾರೆ ? ಉದ್ಯೋಗ..? ಅವರು ಗ್ರಾಮೀಣ ಜನತೆಗೇನು ನೀಡಿದ್ದಾರೆ ?, ನಮಗೆ ಪಾಕಿಸ್ತಾನದ ಜತೆ ಏಕೆ ಉತ್ತಮ ಸಂಬಂಧ ಹೊಂದಲು ಸಾಧ್ಯವಿಲ್ಲ ?, ಭಾರತವನು ಎಷ್ಟು ನಾಯಕರು ಆಳಿದ್ದಾರೆ ?, ಮೋದಿ ಮಾತ್ರವಲ್ಲ ಎಲ್ಲರೂ ದೇಶದ ರಕ್ಷಣೆ ಮಾಡಿದ್ದಾರೆ. ಮೋದಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ'' ಎಂದರು.

ಕುಮಾರಸ್ವಾಮಿಯನ್ನು ಇತ್ತೀಚೆಗೆ ಟೀಕಿಸಿದ್ದ ರಾಜು ಕಾಗೆ, ``ಪ್ರಧಾನಿ ಆಗಾಗ ಬಟ್ಟೆ ಬದಲಾಯಿಸುತ್ತಿರುತ್ತಾರೆ ಎಂದು ನೀವು ಹೇಳಿದ್ದೀರಿ. ಅರೆ, ಅವರು ಗೌರವರ್ಣ ಹೊಂದಿದ್ದಾರೆ ಹಾಗೂ ಸ್ಫುರದ್ರೂಪಿಯಾಗಿದ್ದಾರೆ. ಆದ ಕಾರಣ ಹಾಗೆ ಮಾಡುತ್ತಾರೆ. ಆದರೆ ನೀವು (ಕುಮಾರಸ್ವಾಮಿ) ನೂರು ಬಾರಿ ಸ್ನಾನ ಮಾಡಿದರೂ ಕಪ್ಪು ಎಮ್ಮೆಯಾಗಿಯೇ ಉಳಿಯುತ್ತೀರಿ'' ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News