ಕಾಂಗ್ರೆಸ್ ಪಕ್ಷ ಸೈನಿಕರ ಭದ್ರತೆಗೆ ಅಪಾಯವೊಡ್ಡುತ್ತಿದೆ ಎಂದ ಮೋದಿ

Update: 2019-04-18 07:33 GMT

ಹಿಮ್ಮತ್ ನಗರ್, ಎ.18: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯಬೇಕು ಎಂದು ಮತದಾರರಿಗೆ ಕರೆ ನೀಡಿದ ಪ್ರಧಾನಿ ಮೋದಿ, ಮತದಾರರು ‘ತಪ್ಪಿ’  ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೂ ಅದು `ಪಾಪ'ವಾಗುತ್ತದೆ ಎಂದಿದ್ದಾರೆ.

ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮಾತನಾಡುತ್ತಿದ್ದರು. “2004ರಿಂದ 2014ರ ತನಕ ರಿಮೋಟ್-ಕಂಟ್ರೋಲ್ ಸರಕಾರವಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಗುಜರಾತ್ ನಲ್ಲಿ ಅನ್ಯಾಯವಾಗಿತ್ತು. ತಪ್ಪಾದ ಕಾರಣಗಳಿಗಾಗಿ ಹಲವು ಪೊಲೀಸ್ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಯಿತು,. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನೂ ಜೈಲಿಗಟ್ಟಲಾಗಿತ್ತು'' ಎಂದು ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿ ಪ್ರಧಾನಿ ಹೇಳಿದರು.

“ಕಾಂಗ್ರೆಸ್ ಪಕ್ಷ ನಮ್ಮ ಸೈನಿಕರ ಭದ್ರತೆಗೆ ಅಪಾಯವೊಡ್ಡುತ್ತಿದೆ. ಆ ಪಕ್ಷಕ್ಕೆ ನೀವು ಗುಂಡಿ ಒತ್ತಿದರೆ ಅದು ಪಾಪ ಆಗುತ್ತದೆ. ನೀವು ಅವರಿಗೆ ಮತ ನೀಡಿದರೆ ಈ ದೇಶವನ್ನು ನಾಶಗೈಯ್ಯುವ ಯಾವುದೇ ಅವಕಾಶವನ್ನು ಅವರು ಬಿಡುವುದಿಲ್ಲ” ಎಂದು ಮೋದಿ ಆರೋಪಿಸಿದರು.

ಅಭಿವೃದ್ಧಿಗಾಗಿ ಮತ ನೀಡುವಂತೆ ಕರೆ ನೀಡಿದ ಪ್ರಧಾನಿ, ಈ ದೇಶವನ್ನು ‘ರಾಷ್ಟ್ರೀಯವಾದಿಗಳು’ ಯಾ ‘ದೇಶ-ವಿರೋಧಿ’ಗಳನ್ನು ಬೆಂಬಲಿಸುವವರು ಆಳುತ್ತಾರೆಯೇ ಎಂಬುದನ್ನು ಈ ಲೋಕಸಭಾ ಚುನಾವಣೆ ನಿರ್ಧರಿಸಲಿದೆ ಎಂದರು.

“2014ರಲ್ಲಿ ನೀವು ನನ್ನನ್ನು ಬೃಹತ್ ಅಂತರದಿಂದ ಗೆಲ್ಲಿಸಿದ್ದೀರಿ. ಈ ಬಾರಿ ಕೂಡ ನನ್ನನ್ನೇ ಆರಿಸಿ'' ಎಂದು ಮೋದಿ ಮತದಾರರಿಗೆ ಕರೆ ನೀಡಿದರು.

ಗುಜರಾತ್ ರಾಜ್ಯದಲ್ಲಿನ ಎಲ್ಲಾ 26 ಲೋಕಸಭಾ ಕ್ಷೇತ್ರಗಳಿಗೆ ಏಕ ಹಂತದ ಚುನಾವಣೆ ಎಪ್ರಿಲ್ 23ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News