ಸಮಾಜವನ್ನು ಕಟ್ಟಬೇಕೇ ಹೊರತು ಒಡೆದು ಆಳಬಾರದು: ಸಿದ್ದರಾಮಯ್ಯ

Update: 2019-04-18 18:37 GMT

ಬೆಂಗಳೂರು, ಎ.18: ಸರ್ವ ಜನಾಂಗದ ಶಾಂತಿಯ ತೋಟವಾಗಿ ಸಮಾಜವನ್ನು ಕಟ್ಟಬೇಕೇ ಹೊರತು ಒಡೆದು ಆಳಬಾರದು. ನಾವು ಸಮಾಜವನ್ನು ಒಡೆಯುವವರಲ್ಲ, ಕಟ್ಟುವವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆದ ಹಿನ್ನೆಲೆಯಲ್ಲಿ ನಿರಂತರವಾಗಿ ಟ್ವೀಟ್ ಮಾಡಿರುವ ಅವರು, ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಅಭಿವೃದ್ಧಿ, ಸುರಕ್ಷತೆ ಮತ್ತು ಸೌಹಾರ್ದತೆಯ ಮಂತ್ರದಿಂದ ಭಾರತವನ್ನು ಕಟ್ಟಿದೆ ಎಂದು ತಿಳಿಸಿದ್ದಾರೆ.

ಕಳೆದ ಚುನಾವಣೆಯ ಕಾಲದಲ್ಲಿ ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿದ್ದಾರೆಯೇ ಎನ್ನುವುದನ್ನು ತಾವೆಲ್ಲ ಕುಳಿತು ಯೋಚನೆ ಮಾಡಬೇಕು. ನಾನು ಮುಖ್ಯಮಂತ್ರಿಯಾಗುವ ಮೊದಲು ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷ 165 ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಿತ್ತು. ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವುದು ನನ್ನ ರಾಜಕೀಯ ಧರ್ಮ ಎಂದು ತಿಳಿದುಕೊಂಡು ಆ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ನಾವು ವಚನ ಪಾಲಕರು, ವಚನ ಭ್ರಷ್ಟರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಪ್ರಣಾಳಿಕೆಯಲ್ಲಿ ಹಲವಾರು ಭರವಸೆಗಳನ್ನು ನೀಡಿತ್ತು. ಅವುಗಳನ್ನು ಆ ಪಕ್ಷ ಈಡೇರಿಸಲು ವಿಫಲವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡಿದ್ದರು.

ದೇಶದಲ್ಲಿ ಇಂದು ನಿರಾಶದಾಯಕ, ಅಷ್ಟೇ ಆತಂಕಕಾರಿಯಾದ ವಾತಾವರಣ ಇದೆ. ಉದ್ಯೋಗ ಇಲ್ಲದೆ ಯುವಜನರು, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ದಿವಾಳಿಯಾಗಿರುವ ರೈತರು, ನೋಟು ರದ್ದತಿ, ಕಿರುಕುಳದ ಜಿಎಸ್‌ಟಿಯಿಂದಾಗಿ ಸಣ್ಣ- ಮಧ್ಯಮ ವರ್ಗದ ವ್ಯಾಪಾರಿಗಳು ಕಷ್ಟಕ್ಕೆ ಸಿಲುಕಿದ್ದಾರೆ.

ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾತರು ಸುರಕ್ಷತೆ ಇಲ್ಲದೆ ಭಯಭೀತರಾಗಿದ್ದಾರೆ. ಹೀಗೆ ಸಮಾಜದ ಬಹುಭಾಗ ತೀವ್ರವಾದ ಕಷ್ಟ- ನಷ್ಟದಲ್ಲಿದೆ ಮತ್ತು ಅನ್ಯಾಯಕ್ಕೊಳಗಾಗಿದೆ. ಅನ್ಯಾಯಕ್ಕೀಡಾದವರಿಗೆ ನ್ಯಾಯ ಕೊಡುವ ಭರವಸೆಯೊಂದಿಗೆ ನಮ್ಮ ಪಕ್ಷ ನಿಮ್ಮೆದುರು ಮತಯಾಚನೆಗಾಗಿ ಬೊಗಸೆಯೊಡ್ಡಿ ನಿಂತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಭಯ ಮುಕ್ತ ಭಾರತ ಕಾಂಗ್ರೆಸ್ ಗುರಿ: ಪ್ರತಿ ಬಡ ಕುಟುಂಬದ ಮಹಿಳೆಯ ಖಾತೆಗೆ ಪ್ರತಿ ವರ್ಷ 72,000 ರೂಪಾಯಿ ಜಮೆ, ಕೇಂದ್ರ ಸರಕಾರದ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ, ಪ್ರತಿ ವರ್ಷ ಕೃಷಿ ಬಜೆಟ್, ಋಣಮುಕ್ತ ರೈತ, ಸರಳ ಮತ್ತು ಜನಹಿತದ ಜಿಎಸ್‌ಟಿ ಇವು ನಮ್ಮ ಪ್ರಮುಖ ಘೋಷಣೆಗಳಾಗಿವೆ. ಮಾತ್ರವಲ್ಲ ಎಲ್ಲ ಮಕ್ಕಳಿಗೆ 1ರಿಂದ 12ನೇ ತರಗತಿ ವರೆಗೆ ಉಚಿತ ಶಿಕ್ಷಣ, ನರೇಗಾದಲ್ಲಿ ಕೆಲಸದ ದಿನಗಳನ್ನು 100ರಿಂದ 150ಕ್ಕೆ ಏರಿಕೆ, ಯುವಜನರಿಗೆ ಉದ್ಯೋಗ, ಭಯ ಮುಕ್ತ ಭಾರತ. ಇವುಗಳು ನಮ್ಮ ಪ್ರಮುಖ ಭರವಸೆಗಳು. ಇವುಗಳಲ್ಲಿ ಒಂದನ್ನೂ ತಪ್ಪದೆ ಎಲ್ಲವನ್ನೂ ಈಡೇರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಚುನಾವಣಾ ಸಮಯದಲ್ಲಿ ಪ್ರಮುಖವಾಗಿ ಪಕ್ಷ ಮತ್ತು ಅಭ್ಯರ್ಥಿಗಳ ವಚನಪಾಲನೆಯ ಚರ್ಚೆ ನಡೆಯಬೇಕೇ ಹೊರತು ಜಾತಿ, ಧರ್ಮ ಇಲ್ಲವೇ ಇತರ ಭಾವನಾತ್ಮಕ ವಿಷಯಗಳ ಬಗ್ಗೆ ಅಲ್ಲ.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News