ಶಂಕಿತ ಉಗ್ರರ ಜೊತೆಗೆ ಸಂಬಂಧ ಬೆಸೆದ ಬಿಜೆಪಿ

Update: 2019-04-19 04:29 GMT

ಉಗ್ರರನ್ನು ಮಟ್ಟ ಹಾಕಿ ಎಂದು ಪದೇಪದೇ ಪಾಕಿಸ್ತಾನಕ್ಕೆ ‘ಆದೇಶ’ ನೀಡುತ್ತಿರುವ ಬಿಜೆಪಿ ನೇತೃತ್ವದ ಸರಕಾರ, ಭಾರತದೊಳಗಿರುವ ಉಗ್ರರ ಕುರಿತಂತೆ ತಳೆದಿರುವ ನಿಲುವೇನು? ದೇಶದೊಳಗೆ ಪರೋಕ್ಷವಾಗಿ ಶಂಕಿತ ಉಗ್ರರ ಜೊತೆಗೆ ಕೈ ಜೋಡಿಸುತ್ತಾ ಅಥವಾ ಉಗ್ರವಾದಕ್ಕೆ ಗುಟ್ಟಾಗಿ ಹಾಲುಣಿಸುತ್ತಾ ಪಕ್ಕದ ದೇಶಕ್ಕೆ ಉಗ್ರವಾದಿಗಳ ಕುರಿತಂತೆ ಉಪದೇಶಗಳನ್ನು ನೀಡಿದರೆ ಅದು ಪರಿಣಾಮ ಬೀರೀತೇ? ಶಂಕಿತ ಉಗ್ರವಾದಿ ಪ್ರಜ್ಞಾಸಿಂಗ್ ಠಾಕೂರ್ ಎಂಬಾಕೆಯನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಬಿಜೆಪಿ ನಡೆಯಿಂದಾಗಿ ಮೇಲಿನ ಪ್ರಶ್ನೆಗಳು ಮಹತ್ವವನ್ನು ಪಡೆದುಕೊಂಡಿವೆ. ಈ ದೇಶದಲ್ಲಿ ಸಾಂಸ್ಕೃತಿಕ ವೇಷದಲ್ಲಿ ಅಡಗಿ ಕುಳಿತಿರುವ ಕೇಸರಿ ಉಗ್ರವಾದಿಗಳನ್ನು ಮೊತ್ತ ಮೊದಲು ಹೊರಗೆ ತಂದವರು ಅಂದಿನ ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕರೆ ಮತ್ತು ಅವರ ತಂಡ. ಬಳಿಕ ಕರ್ಕರೆ ಮತ್ತು ಜೊತೆಗಿರುವ ಎಲ್ಲ ಮುಖ್ಯ ಅಧಿಕಾರಿಗಳು ನಿಗೂಢವಾಗಿ ಕೊಲೆಗೀಡಾದರು. ಈ ತಂಡದ ತನಿಖೆಯ ಫಲಿತಾಂಶವಾಗಿ ಮಾಲೆಗಾಂವ್ ಸ್ಫೋಟದಲ್ಲಿ ಭಾಗಿಯಾಗಿರುವ ಪ್ರಜ್ಞಾಸಿಂಗ್ ಠಾಕೂರ್ ಎಂಬಾಕೆಯ ಹೆಸರು ಬಹಿರಂಗವಾಯಿತು.

ಆಕೆಯನ್ನು ತಂಡ ಬಂಧಿಸಿತು ಮಾತ್ರವಲ್ಲ, ಈಕೆ ಸ್ಫೋಟದಲ್ಲಿ ಭಾಗಿಯಾಗಿರುವ ಕುರಿತ ಬಲವಾದ ಸಾಕ್ಷಗಳನ್ನು ಸಂಗ್ರಹಿಸಿತು. ಮಾಲೆಗಾಂವ್ ಸ್ಫೋಟದ ಜೊತೆಜೊತೆಗೆ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ, ಮಕ್ಕಾ ಮಸೀದಿ ಸ್ಫೋಟ, ಅಜ್ಮೀರ್ ಸ್ಫೋಟಗಳಲ್ಲಿ ಭಾಗಿಯಾದ ಕೇಸರಿ ಉಗ್ರರ ದೊಡ್ಡ ತಂಡವನ್ನೇ ತನಿಖಾಧಿಕಾರಿಗಳು ಹಂತಹಂತವಾಗಿ ಬಂಧಿಸತೊಡಗಿದರು. ಈ ಉಗ್ರರ ಬೇರು ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್‌ವರೆಗೂ ತಲುಪಿತು. ಆದರೆ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದದ್ದೇ, ಈ ಶಂಕಿತ ಉಗ್ರರನ್ನು ರಕ್ಷಿಸುವ ಕೆಲಸಕ್ಕೆ ಆದ್ಯತೆಯನ್ನು ನೀಡಿತು. ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಸಾಕ್ಷಗಳನ್ನು ನಾಶ ಪಡಿಸತೊಡಗಿತು. ಎನ್‌ಐಎ ಪರವಾಗಿ ವಾದಿಸಬೇಕಾಗಿದ್ದ ವಕೀಲೆಯ ಮೇಲೆಯೇ ಅಧಿಕಾರಿಗಳು ಒತ್ತಡವನ್ನು ಹೇರಿದರು. ಶಂಕಿತ ಉಗ್ರರ ವಿರುದ್ಧ ದುರ್ಬಲ ವಾದವನ್ನು ಮಂಡಿಸಲು ಅಧಿಕಾರಿಗಳು ಒತ್ತಾಯ ಮಾಡಿರುವುದನ್ನು ಸ್ವತಃ ವಕೀಲೆ ರೋಹಿಣಿ ಸಾಲ್ಯಾನ್ ಅವರೇ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಸಾಕ್ಷಗಳ ಕೊರತೆಯಿಂದಾಗಿ ಪ್ರಜ್ಞಾಸಿಂಗ್ ಸೇರಿದಂತೆ ಹಲವು ಶಂಕಿತ ಉಗ್ರರು ಕಾನೂನಿನ ಹಿಡಿತದಿಂದ ಪಾರಾದರು. ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಕ್ಕೆ ಸಂಬಂಧಿಸಿ ಅಸೀಮಾನಂದ ಪ್ರಕರಣವೂ ಇದೇ ದಾರಿಯಲ್ಲಿ ಸಾಗಿತು. ಈವರೆಗೆ ಸರಕಾರ ಶಂಕಿತ ಉಗ್ರರನ್ನು ಕಾಪಾಡುತ್ತಿದೆ ಎಂಬ ಆರೋಪ ಮಾತ್ರವಿತ್ತು.

ಇದೀಗ ಆ ಶಂಕಿತ ಉಗ್ರರ ಜೊತೆಗೆ ಬಿಜೆಪಿ ನೇರ ಸಂಬಂಧವನ್ನು ಬೆಳೆಸಲು ಮುಂದಾಗಿದೆ. ಈವರೆಗೆ ಸನಾತನ ಸಂಸ್ಥೆ, ಅಭಿನವಭಾರತ ಇವುಗಳ ಜೊತೆಗೆ ಸಂಬಂಧ ಹೊಂದಿರುವ ಶಂಕಿತರ ಜೊತೆಗೆ ಬಿಜೆಪಿ ಅಂತರವೊಂದನ್ನು ಕಾಯ್ದುಕೊಂಡಿತ್ತು. ಗೋಡ್ಸೆಯ ಪರವಾಗಿ ಘೋಷಣೆಗಳನ್ನು ಕೂಗಿದವರೊಂದಿಗೆ ಬಹಿರಂಗವಾಗಿ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಮಾಲೆಗಾಂವ್ ಸ್ಫೋಟ ಆರೋಪದಲ್ಲಿ ಬಂಧಿತಳಾಗಿದ್ದ ಪ್ರಜ್ಞಾಸಿಂಗ್ ಠಾಕೂರ್ ಎಂಬಾಕೆಯನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ. ಅಷ್ಟೇ ಅಲ್ಲ, ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಆಕೆಯನ್ನು ಸ್ಪರ್ಧೆಗಿಳಿಸಲು ಮುಂದಾಗಿದೆ. ಇಷ್ಟಕ್ಕೂ ಬಿಜೆಪಿಗೆ ಸೇರಲು, ಚುನಾವಣೆಯಲ್ಲಿ ಸ್ಪರ್ಧಿಸಲು ಆಕೆಗಿದ್ದ ಅರ್ಹತೆಯಾದರೂ ಏನು? ಈ ದೇಶದ ವಿರುದ್ಧ ಸಂಚು ಹೂಡಿದ್ದ, ಬಾಂಬ್ ಸ್ಫೋಟಿಸಿದ್ದ ಆರೋಪ ಬಿಜೆಪಿಯ ಪಾಲಿಗೆ ಅರ್ಹತೆಯಾಗಿ ಕಾಣುತ್ತಿದೆ. ಬಿಜೆಪಿಯ ಈ ನಡೆ ಒಂದನ್ನು ಸ್ಪಷ್ಟ ಪಡಿಸಿದೆ. ಮುಖ್ಯವಾಗಿ ವೈಯಕ್ತಿಕ ವರ್ಚಸ್ಸು, ವಿದ್ವತ್ತು, ಮುತ್ಸದ್ದಿತನಗಳಿರುವ ಗೆಲ್ಲುವ ಅಭ್ಯರ್ಥಿಗಳ ಕೊರತೆಯನ್ನು ಅದು ಎದುರಿಸುತ್ತಿದೆ.

ಯಾವ ದಾರಿಯಲ್ಲಾದರೂ ಸರಿ, ಕೇಂದ್ರದಲ್ಲಿ ಸರಕಾರ ರಚಿಸಲೇ ಬೇಕು ಎನ್ನುವ ಕಾರಣಕ್ಕಾಗಿ ಅದು ಪ್ರಜ್ಞಾಸಿಂಗ್‌ರಂತಹ ಶಂಕಿತ ಉಗ್ರರನ್ನು ಪಕ್ಷಕ್ಕೆ ಸೇರಿಸಿಕೊಂಡು, ಜನರಲ್ಲಿ ಹಿಂಸಾ ಉನ್ಮಾದ ತುಂಬಲು ಯತ್ನಿಸುತ್ತಿದೆ. ಆ ಹಿಂಸೆಯ ಉನ್ಮಾದದ ಬಲದಲ್ಲಿ ಗೆಲ್ಲಲು ಹೊರಟಿದೆ. ಈಗಾಗಲೇ ಬಿಜೆಪಿಯೊಳಗಿರುವ ಹಿರಿಯ ಮುತ್ಸದ್ದಿ ನಾಯಕರು ಮರೆಗೆ ಸರಿಯುತ್ತಿದ್ದ್ಜಾರೆ. ಅವರ ಸ್ಥಾನದಲ್ಲಿ ಹೊಡಿ, ಬಡಿ, ಕಡಿ ಎಂದು ಬಹಿರಂಗವಾಗಿ ಅರಚಾಡುವ ನಾಯಕರು ಬಂದು ಕೂರುತ್ತಿದ್ದಾರೆ. ಜನರನ್ನು ಉನ್ಮಾದಕ್ಕೆ ತಳ್ಳಿ ಮತಗಳನ್ನು ಸೆಳೆಯುವುದಕ್ಕೆ ಇವರೇ ತಕ್ಕುದಾದವರು ಎನ್ನುವುದನ್ನು ಬಿಜೆಪಿ ಬಲವಾಗಿ ನಂಬಿ ಬಿಟ್ಟಂತಿದೆ. ಆದುದರಿಂದಲೇ ಪ್ರಜ್ಞಾಸಿಂಗ್ ಠಾಕೂರ್ ಎಂಬಾಕೆಯ ‘ಉಗ್ರಗಾಮಿ’ ಹಿನ್ನೆಲೆಯನ್ನೇ ಬಿಜೆಪಿ ಮತಗಳಾಗಿ ಪರಿವರ್ತಿಸಲು ಹೊರಟಿದೆ. ಮುಂದೊಂದು ದಿನ ಬಿಜೆಪಿಯಿಂದ ಕಲಬುರ್ಗಿ ಕೊಲೆ ಆರೋಪಿಗಳು, ಗೌರಿ ಲಂಕೇಶರನ್ನು ಕೊಂದ ದುಷ್ಕರ್ಮಿಗಳು, ಅಸೀಮಾನಂದ ಮತ್ತು ಆತನ ಶಿಷ್ಯರು ಸ್ಪರ್ಧಿಸುವ ದಿನಗಳು ದೂರವಿಲ್ಲ. ಇದೇ ಸಂದರ್ಭದಲ್ಲಿ ಪಿಡಿಪಿಯ ಮೆಹಬೂಬ ಮುಫ್ತಿ ಒಂದು ಪ್ರಶ್ನೆಯನ್ನು ಎತ್ತಿದ್ದಾರೆ ‘‘ಪ್ರಜ್ಞಾಸಿಂಗ್ ಠಾಕೂರ್ ಬಿಜೆಪಿಗೆ ಸೇರ್ಪಡೆಯಾದಂತೆ, ಕಾಶ್ಮೀರದ ಪ್ರತ್ಯೇಕತಾ ವಾದಿಗಳು, ಉಗ್ರವಾದದ ಜೊತೆಗೆ ಗುರುತಿಸಿಕೊಂಡವರನ್ನು ನಮ್ಮ ಪಕ್ಷ ಸೇರ್ಪಡೆಗೊಳಿಸಿದ್ದಿದ್ದರೆ ಅದಕ್ಕೆ ಪ್ರತಿಕ್ರಿಯೆ ಹೇಗಿರುತ್ತಿತ್ತು?’’ ಇದು ನಿರ್ಲಕ್ಷಿಸುವ ಪ್ರಶ್ನೆಯಂತೂ ಖಂಡಿತಾ ಅಲ್ಲ.

ಬಿಜೆಪಿಗೆ ಪ್ರಜ್ಞಾ ಸಿಂಗ್ ಠಾಕೂರ್, ಗೋಡ್ಸೆ, ಅಸೀಮಾನಂದ ಮೊದಲಾದ ದುಷ್ಕರ್ಮಿಗಳು ದೇಶಪ್ರೇಮಿಗಳಾಗಿ ಭಾಸವಾದರೆ, ಕಾಶ್ಮೀರದೊಳಗಿರುವ ಪಕ್ಷಗಳಿಗೆ ಅಲ್ಲಿನ ಶಂಕಿತ ಉಗ್ರರು ದೇಶಪ್ರೇಮಿಗಳೆನಿಸಿದರೆ ಅದನ್ನು ಪ್ರಶ್ನಿಸುವ ನೈತಿಕತೆ ನಮಗಿದೆಯೇ? ಗೋಡ್ಸೆಯನ್ನು ಬೆಂಬಲಿಸುವ ಪ್ರಜ್ಞಾಸಿಂಗ್ ಬಿಜೆಪಿಗೆ ಸಹ್ಯವಾದರೆ, ಅಫ್ಝಲ್‌ಗುರು ಸೇರಿದಂತೆ ಆತನ ಹಿಂಬಾಲಕರು ಕಾಶ್ಮೀರಿಗಳಿಗೆ ಸಹ್ಯವಾಗುವುದನ್ನು ನಾವು ಯಾವ ಮುಖದಲ್ಲಿ ಪ್ರಶ್ನಿಸಬೇಕು? ಇದೇ ಸಂದರ್ಭದಲ್ಲಿ ಪಂಜಾಬ್‌ನಲ್ಲಿ ಖಾಲಿಸ್ತಾನಿ ವಾದಿಗಳು ಬಿಂದ್ರನ್ ವಾಲೆಯನ್ನು ತಮ್ಮ ಆದರ್ಶವಾಗಿ ಘೋಷಿಸಿದರೆ ಅದಕ್ಕೆ ಹೊಣೆ ಯಾರು? ನಮ್ಮ ದೇಶದ ವಿರುದ್ಧ ಸಂಚು ನಡೆಸಿದ ಆರೋಪಿಗಳನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೇರಿಸಿಕೊಂಡಂತೆ ಪಾಕಿಸ್ತಾನದಲ್ಲಿ ಯಾವುದೇ ಪಕ್ಷಗಳು ಉಗ್ರರನ್ನು ಬಹಿರಂಗವಾಗಿ ತಮ್ಮ ಪಕ್ಷದೊಳಗೆ ಸೇರಿಸಿಕೊಂಡ ಉದಾಹರಣೆ ಇಲ್ಲ. ಬಹಿರಂಗವಾಗಿ ಪಾಕಿಸ್ತಾನ ಉಗ್ರರ ಜೊತೆಗೆ ಅಂತರ ಕಾಯ್ದುಕೊಂಡಿದೆ. ಭಾರತ ಈ ದೇಶವನ್ನು ಉಗ್ರರ ತಾಣವಾಗಿಸಲು ಪಾಕಿಸ್ತಾನಕ್ಕಿಂತಲೂ ಆತುರದಲ್ಲಿದೆ. ಉಗ್ರರ ಕುರಿತಂತೆ ನಮ್ಮ ಸರಕಾರದ ಈ ದ್ವಂದ್ವವನ್ನು ವಿಶ್ವ ಗಮನಿಸುತ್ತಿದೆ. ಮುಂದೊಂದು ದಿನ, ಭಾರತ ಇದಕ್ಕಾಗಿ ಭಾರೀ ಬೆಲೆಯನ್ನು ತೆರಬೇಕಾಗಿ ಬರಬಹುದು. ಅಧಿಕಾರವನ್ನು ಹೇಗಾದರೂ ಹಿಡಿಯಬೇಕು ಎನ್ನುವ ಕಾರಣಕ್ಕಾಗಿ ಉಗ್ರರಿಗೆ ನೀರೆರೆಯುತ್ತ್ಜಿರುವ ಬಿಜೆಪಿ ಮತ್ತು ಸಂಘಪರಿವಾರ ಈ ದೇಶವನ್ನು ವಿನಾಶದಂಚಿಗೆ ಕೊಂಡೊಯ್ಯುತ್ತಿದೆ. ಈ ದೇಶದ ಪ್ರಜಾಸತ್ತೆಯನ್ನು ಬಿಜೆಪಿ ಅಪಾಯದೆಡೆಗೆ ತಳ್ಳುತ್ತಿದೆ ಮತ್ತು ದೇಶವನ್ನು ಇನ್ನೊಂದು ಸಿರಿಯಾ ಮಾಡಲು ಅತ್ಯುತ್ಸಾಹ ತಾಳಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News