ವೋಟ್ ಮಾಡಿದ ಮತದಾರರಿಗೆ ಕಾಫಿ-ಚಹಾ ಉಚಿತ !

Update: 2019-04-18 18:54 GMT

ಬೆಂಗಳೂರು, ಎ.18: ವೋಟ್ ಮಾಡಿದ್ದ ಮತದಾರರಿಗೆ ಆಹಾರದ ಬೆಲೆಯಲ್ಲಿ ರಿಯಾಯಿತಿಯನ್ನು ನೀಡುವ ಮೂಲಕ ಕೆಂಗೇರಿ ಉಪನಗರದ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಕೃಷ್ಣ ಗ್ರಾಂಡ್ ಹೊಟೇಲ್ ಮಾಲಕರು ಮತದಾನ ಪ್ರಮಾಣ ಹೆಚ್ಚಳಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಿದರು.

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದ್ದು, ವೋಟ್ ಮಾಡಿದ ಮತದಾರರು ಹೊಟೇಲ್‌ಗೆ ಬಂದು ಶಾಯಿಯ ಗುರುತು ತೋರಿಸಿದರೆ, ಕಾಫಿ, ಚಹಾ ಉಚಿತವಾಗಿ ನೀಡಲಾಯಿತು. ಅಲ್ಲದೆ, ತಿಂಡಿ, ಊಟದ ದರದಲ್ಲಿ ಶೇ.5ರಷ್ಟು ರಿಯಾಯಿತಿ ನೀಡುತ್ತಿರುವುದಾಗಿ ಹೊಟೇಲ್ ಮಾಲಕ ಪ್ರತಾಪ್ ಶೆಟ್ಟಿ ತಿಳಿಸಿದರು.

ಹೊಟೇಲ್ ಪ್ರಾರಂಭವಾದ ದಿನದಿಂದಲೂ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ವಿಕಲಚೇತನರಿಗೆ ಶೇ.5ರಷ್ಟು ಹಾಗೂ ಮಾಜಿ ಯೋಧರಿಗೆ ಶೇ.10ರಷ್ಟು ರಿಯಾಯಿತಿ ನೀಡುತ್ತಿರುವುದು ಶ್ರೀ ಕೃಷ್ಣ ಗ್ರಾಂಡ್ ಹೊಟೇಲ್‌ನ ವಿಶೇಷ.

ದೇಶವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ಸರಕಾರ ರಚನೆಗಾಗಿ ಮತದಾನದ ಹಕ್ಕು ಚಲಾಯಿಸಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಹೀಗಾಗಿ, ಮತದಾನ ಮಾಡಿದವರನ್ನು ಪೋತ್ಸಾಹಿಸಲು ಬೆಂಗಳೂರು ನಗರದ ಕೆಲ ಹೊಟೇಲ್‌ಗಳು ಕಾಫಿ, ಚಹಾ ಉಚಿತವಾಗಿ ಹಾಗೂ ರಿಯಾಯಿತಿ ದರದಲ್ಲಿ ನೀಡುತ್ತಿರುವ ದೃಶ್ಯ ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News