ಪೇಪರ್ ಚೀಲಕ್ಕೆ ಗ್ರಾಹಕನಿಂದ 3 ರೂ. ಪಡೆದ ಬಾಟಾ ಕಂಪೆನಿಗೆ 9,000 ರೂ. ದಂಡ

Update: 2019-04-19 09:58 GMT

ಹೊಸದಿಲ್ಲಿ, ಎ.19: ಶೂ ಖರೀದಿಸಿದ್ದ ಗ್ರಾಹಕನಿಂದ ಪೇಪರ್ ಬ್ಯಾಗ್ ಗೆ 3 ರೂ. ವಸೂಲಿ ಮಾಡಿದ ಖ್ಯಾತ ಪಾದರಕ್ಷೆ ತಯಾರಿಕಾ ಕಂಪೆನಿ ಬಾಟಾ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ಚಂಡೀಗಢ ಗ್ರಾಹಕ ಆಯೋಗ 9,000 ರೂ. ದಂಡ ವಿಧಿಸಿದೆ.

ಈ ಆದೇಶ ಇಡೀ ದೇಶಕ್ಕೆ ಅನ್ವಯವಾಗುವುದು ಹಾಗೂ ಯಾವುದೇ ಮಳಿಗೆಯು ಗ್ರಾಹಕನೊಬ್ಬ ತನ್ನಲ್ಲಿ ಖರೀದಿಸಿದ್ದ  ಉತ್ಪನ್ನವನ್ನು ಕೊಂಡು ಹೋಗಲು ನೀಡುವ ಯಾವುದೇ ಚೀಲಕ್ಕೆ ಹೆಚ್ಚುವರಿ ದರ ವಿಧಿಸುವಂತಿಲ್ಲ ಎಂದು ಕಾನೂನು ತಜ್ಞರು ಹೇಳಿದ್ದಾರೆ.

ದಿನೇಶ್ ಪ್ರಸಾದ್ ರಟೂರಿ ಎಂಬ ಗ್ರಾಹಕರು ನೀಡಿದ್ದ ದೂರಿನ ಆಧಾರದಲ್ಲಿ ಗ್ರಾಹಕ ನ್ಯಾಯಾಲಯದ ತೀರ್ಪು ಬಂದಿದೆ. ತಾನು ಫೆಬ್ರವರಿ 5ರಂದು ಚಂಡೀಗಢದ ಸೆಕ್ಟರ್ 22ಡಿ ಪ್ರದೇಶದಲ್ಲಿರುವ ಬಾಟಾ ಮಳಿಗೆಯಿಂದ ಒಂದು ಜತೆ ಶೂ ಖರೀದಿಸಿದ್ದಾಗಿ ಹಾಗೂ  ಒಂದು ಚೀಲದ ವೆಚ್ಚ ಸೇರಿದಂತೆ ರೂ 402 ಬಿಲ್ ನೀಡಲಾಗಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ.

ಚೀಲದ ವೆಚ್ಚವನ್ನೂ ಬಿಲ್ ನಲ್ಲಿ ನಮೂದಿಸಿದ್ದನ್ನು ವಿರೋಧಿಸಿದ್ದಾಗಿ ಹಾಗೂ ಚೀಲದಲ್ಲೂ ಬಾಟಾ ಹೆಸರಿತ್ತು ಎಂದು ಹೇಳಿದ ಅವರು ಚೀಲ ನೀಡಿದ್ದಕ್ಕಾಗಿ ತನಗೆ ವಿಧಿಸಲಾಗಿದ್ದ ಹೆಚ್ಚುವರಿ ರೂ 3 ವಾಪಸ್  ನೀಡುವಂತೆ ಆಗ್ರಹಿಸಿದ್ದರು.

ಚೀಲಕ್ಕಾಗಿ ಹಣ ತೆರುವಂತೆ ಗ್ರಾಹಕನನ್ನು ಒತ್ತಾಯಿಸುವಂತಿಲ್ಲ, ಇದು ಕರ್ತವ್ಯಲೋಪಕ್ಕೆ ಸರಿ ಎಂದು ಗ್ರಾಹಕ ಆಯೋಗ ಹೇಳಿದೆಯಲ್ಲದೆ, ಗ್ರಾಹಕನೊಬ್ಬನಿಗೆ ತಾನು ಖರೀದಿಸಿದ್ದ ವಸ್ತುವನ್ನು ಕೊಂಡು ಹೋಗಲು ಚೀಲ ಒದಗಿಸುವುದು ಮಳಿಗೆಯ ಕರ್ತವ್ಯ ಎಂದು ತಿಳಿಸಿದೆ.

ಚೀಲಕ್ಕಾಗಿ ಗ್ರಾಹಕನಿಂದ ವಸೂಲಿ ಮಾಡಲಾದ 3 ರೂ. ವಾಪಸ್ ನೀಡುವುದರ ಜತೆಗೆ ನ್ಯಾಯಾಲಯ ವೆಚ್ಚವಾದ ರೂ 1,000 ಹಾಗೂ ರೂ 3,000 ಪರಿಹಾರವನ್ನು ಗ್ರಾಹಕನಿಗೆ ನೀಡುವಂತೆ  ಆಯೋಗ ಆದೇಶಿಸಿದೆ. ಇದರ ಹೊರತಾಗಿ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಕಾನೂನು ಸಹಾಯ ಖಾತೆಗೆ ರೂ 5,000 ಜಮೆ ಮಾಡುವಂತೆಯೂ  ಆಯೋಗವು ಬಾಟಾ ಕಂಪೆನಿಗೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News