241 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರ: ಮೇ 23ಕ್ಕೆ ಮತ ಎಣಿಕೆ

Update: 2019-04-19 14:13 GMT

ಬೆಂಗಳೂರು, ಎ.19: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದು, 14 ಲೋಕಸಭಾ ಕ್ಷೇತ್ರಗಳ ಕಣದಲ್ಲಿರುವ 241 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಎಲ್ಲ ಮತಯಂತ್ರಗಳನ್ನು ಆಯಾ ಜಿಲ್ಲೆಗಳಲ್ಲಿರುವ ಸ್ಟ್ರಾಂಗ್ ರೂಂಗಳನ್ನು ಸೇರಿವೆ.

ಎ.23 ರಂದು ಮತಎಣಿಕೆ ಪ್ರಕ್ರಿಯೆ ನಡೆದು, ಅಂದೇ ಫಲಿತಾಂಶ ಹೊರಬೀಳಲಿದೆ. ಅಲ್ಲಿಯವರೆಗೂ ಸುಮಾರು ಒಂದು ತಿಂಗಳುಗಳ ಕಾಲ ಮತಯಂತ್ರಗಳನ್ನು ಸುಭದ್ರವಾಗಿ ಕಾಪಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಯಾ ಕ್ಷೇತ್ರಗಳ ನಿಗದಿತ ಮತ ಎಣಿಕೆ ಕೇಂದ್ರಗಳ ಸ್ಟ್ರಾಂಗ್ ರೂಂಗಳಲ್ಲಿ ಇವಿಎಂಗಳನ್ನು ಭದ್ರವಾಗಿಡಲಾಗಿದೆ.

ಮತದಾನದ ವೇಳೆ ವಿದ್ಯುತ್ ವ್ಯತ್ಯಯ, ತಾಂತ್ರಿಕ ಕಾರಣ ಸೇರಿದಂತೆ ಹಲವಾರು ಕಾರಣಗಳಿಂದ ಗುರುವಾರ ಮಧ್ಯರಾತ್ರಿವರೆಗೂ ಮತಯಂತ್ರಗಳನ್ನು ಚುನಾವಣಾ ಸಿಬ್ಬಂದಿ ಆಯಾ ಮತ ಎಣಿಕೆ ಕೇಂದ್ರಗಳಿಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ಎಲ್ಲ ಕ್ಷೇತ್ರಗಳ ವ್ಯಾಪ್ತಿಯ ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಜತೆಯಲ್ಲಿ ಭದ್ರತಾ ಕೊಠಡಿಗೆ ತಲುಪಿಸಲಾಗಿದ್ದು, ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ಭದ್ರವಾಗಿಡಲಾಗಿದೆ.

ಮತ ಎಣಿಕೆಗೆ ಇನ್ನೂ ಒಂದು ತಿಂಗಳಿದ್ದು, ಹೀಗಾಗಿ ಎಲ್ಲ ಕೇಂದ್ರಗಳ ಸುತ್ತಮುತ್ತಲೂ ಕಠಿಣವಾದ ಬಂದೋಬಸ್ತ್ ಏರ್ಪಡಿಸಲಾಗಿದೆ. ಮತಗಟ್ಟೆಗಳನ್ನು ಇಟ್ಟಿರುವ ಎಲ್ಲ ಸ್ಟ್ರಾಂಗ್‌ರೂಂಗಳಿಗೆ ಇರುವ ಬಾಗಿಲು, ಕಿಟಕಿಗಳನ್ನು ತೆಗೆಯದಂತೆ ಭದ್ರಗೊಳಿಸಲಾಗಿದೆ. ಅಲ್ಲದೆ, ಎಲ್ಲ ಬಾಗಿಲುಗಳಿಗೂ ಸೀಲ್‌ಗಳ ಸಮೇತ ಬೀಗಗಳನ್ನು ಹಾಕಲಾಗಿದ್ದು, ಯಾರೂ ಒಳ ಪ್ರವೇಶಕ್ಕೆ ಅನುಕೂಲವಾಗದಂತೆ ಭದ್ರಗೊಳಿಸಲಾಗಿದೆ.

ಸಿಸಿಟಿವಿ ಹಾಗೂ ಭದ್ರತೆ: ಭದ್ರತಾ ಕೊಠಡಿಗಳ ಸುತ್ತಮುತ್ತಲೂ ಯಾರೂ ಸಂಚಾರ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ. ದಿನದ 24 ಗಂಟೆಗಳ ಕಾಲವೂ ಪೊಲೀಸರ ಸುತ್ತಾಟವನ್ನಿಡಲಾಗಿದೆ. ಸ್ಟ್ರಾಂಗ್ ರೂಂಗಳ ಒಳಗೆ ಮತ್ತು ಹೊರಭಾಗಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದು, ಕ್ಷಣಕ್ಷಣಕ್ಕೂ ಅದನ್ನು ಪರಿಶೀಲನೆ ಮಾಡಲಾಗುತ್ತಿದೆ.

ಬಸ್‌ನಲ್ಲಿ ಬೆಂಕಿ: ಮೈಸೂರಿನ ಗೌಸಿಯಾ ನಗರದ ಗೌರಿಶಂಕರ ಸರಕಾರಿ ಶಾಲೆಯ ಮತಗಟ್ಟೆಯಿಂದ ಮತಯಂತ್ರ ಸಾಗಿಸುವ ಸಂದರ್ಭದಲ್ಲಿ ಅರ್ಧ ದಾರಿಯಲ್ಲಿ ತಾಂತ್ರಿಕ ಕಾರಣದಿಂದ ಬೆಂಕಿ ಕಾಣಿಸಿಕೊಂಡಿತು. ಹೀಗಾಗಿ, ಅದನ್ನು ಸರಿಪಡಿಸಿ ಮಧ್ಯರಾತ್ರಿ ವೇಳೆ ಮತಯಂತ್ರಗಳನ್ನು ಸ್ಟ್ರಾಂಗ್‌ರೂಂಗೆ ರವಾನಿಸಿದರು.

ಅವಧಿ ವಿಸ್ತರಣೆ: ಹಲವಾರು ಮತ ಕೇಂದ್ರಗಳಲ್ಲಿ ಮತಯಂತ್ರಗಳು ಕೈ ಕೊಟ್ಟಿದ್ದರಿಂದ ಸಮಯದಾನದ ಅವಧಿಯನ್ನು ವಿಸ್ತರಣೆ ಮಾಡಿದ್ದರಿಂದ ರಾತ್ರಿ 8 ಗಂಟೆವರೆಗೂ ಮತದಾನ ನಡೆದಿದ್ದು, ಆ ಬಳಿಕ ಮತಯಂತ್ರಗಳನ್ನು ಸ್ಟ್ರಾಂಗ್ ರೂಂಗಳಿಗೆ ತರಲಾಯಿತು. ಇನ್ನುಳಿದಂತೆ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಮತಯಂತ್ರಗಳನ್ನು ತರುವಲ್ಲಿ ವಿಳಂಬವಾಗಿರುವುದು ವರದಿಯಾಗಿದೆ.

ಎಲ್ಲೆಲ್ಲಿ ಮತ ಎಣಿಕೆ:

ಉಡುಪಿ-ಚಿಕ್ಕಮಗಳೂರು: ಉಡುಪಿಯ ವಿಜ್ಞಾನ ಸಿಸಿಲಿ ಕಾಲೇಜು

ಹಾಸನ: ಡೈರಿ ವೃತ್ತದಲ್ಲಿನ ಸರಕಾರಿ ಎಂಜಿನಿಯರಿಂಗ್ ಕಾಲೇಜು

ದಕ್ಷಿಣ ಕನ್ನಡ: ಸುರತ್ಕಲ್‌ನ ಎನ್‌ಐಟಿಕೆ ಕಾಲೇಜು

ಚಿತ್ರದುರ್ಗ: ದುರ್ಗದ ಸರಕಾರಿ ವಿಜ್ಞಾನ ಕಾಲೇಜು(ಹೊಸ ಕಟ್ಟಡ)

ತುಮಕೂರು: ತುಮಕೂರು ಸರಕಾರಿ ಪಾಲಿಟೆಕ್ನಿಕ್ ಹಾಗೂ ವಿವಿ ವಿಜ್ಞಾನ ಕಾಲೇಜು

ಮಂಡ್ಯ: ಸರಕಾರಿ ಬಾಲಕರ ಕಾಲೇಜು, ಮಂಡ್ಯ

ಮೈಸೂರು-ಕೊಡಗು: ಮಹಾರಾಣಿ ಕಾಲೇಜು, ಮೈಸೂರು

ಚಾಮರಾಜನಗರ: ಬೇಡರಪುರದ ಸರಕಾರಿ ಎಂಜಿಯರಿಂಗ್ ಕಾಲೇಜು

ಬೆಂಗಳೂರು ಗ್ರಾಮಾಂತರ: ಸರಕಾರಿ ಎಂಜಿನಿಯರಿಂಗ್ ಕಾಲೇಜು, ರಾಮನಗರ

ಬೆಂಗಳೂರು ಉತ್ತರ: ಸೇಂಟ್ ಜೋಸೆಫ್ ಇಂಡಿಯನ್ ಪ್ರೌಢಶಾಲೆ, ಮಲ್ಯ ರಸ್ತೆ

ಬೆಂಗಳೂರು ಕೇಂದ್ರ: ಮೌಂಟ್ ಕಾರ್ಮಲ್ ಮಹಿಳಾ ಪಿಯು ಕಾಲೇಜು, ವಸಂತನಗರ

ಬೆಂಗಳೂರು ದಕ್ಷಿಣ: ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜು, ಜಯನಗರ

ಚಿಕ್ಕಬಳ್ಳಾಪುರ: ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜು, ದೇವನಹಳ್ಳಿ ತಾಲೂಕು

ಕೋಲಾರ: ಸರಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು, ಕೋಲಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News