ರಿಲಾಕ್ಸ್ ಮೂಡ್‌ನಲ್ಲಿ ಅಭ್ಯರ್ಥಿಗಳು: ಉತ್ತರದತ್ತ ಮುಖ ಮಾಡಿದ ರಾಜಕೀಯ ಮುಖಂಡರು

Update: 2019-04-19 15:08 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.19: ಮೊದಲ ಹಂತದ ಚುನಾವಣೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ನಿರಾಳರಾಗಿ ಕುಟುಂಬದ ಸದಸ್ಯರೊಂದಿಗೆ ವಿಶ್ರಾಂತಿಗೆ ಶರಣಾಗಿದ್ದರೆ, ರಾಜಕೀಯ ಪಕ್ಷಗಳ ಮುಖಂಡರು ರಾಜ್ಯದ ಎರಡನೆ ಹಂತದ ಚುನಾವಣಾ ಪ್ರಚಾರಕ್ಕೆ ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಹದಿನೈದು-ಇಪ್ಪತ್ತು ದಿನಗಳಿಂದ ಹಗಲು-ರಾತ್ರಿಗಳ ಪರಿವೆ ಮರೆತು ಚುನಾವಣಾ ಪ್ರಚಾರ ಭರಾಟೆಯಲ್ಲಿ ತೊಡಗಿದ್ದ ಅಭ್ಯರ್ಥಿಗಳು ಮತದಾನ ಮುಕ್ತಾಯಗೊಂಡಿದ್ದರಿಂದ ಕೊಂಚ ನಿರಾಳರಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ತೀವ್ರ ಜಿದ್ದಾಜಿದ್ದಿನ ಕಣವಾದ ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಪರ ಹೆಚ್ಚು ಪ್ರಚಾರ ನಡೆಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಸೇರಿದಂತೆ ಪ್ರಮುಖ ನಾಯಕರು ಮುಂಬೈ ಕರ್ನಾಟಕ, ಹೈ.ಕ. ಮತ್ತು ಉ.ಕ.ಕ್ಷೇತ್ರಗಳಿಗೆ ಪ್ರಚಾರಕ್ಕೆ ತೆರಳಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಸಚಿವ ಕೃಷ್ಣಭೈರೇಗೌಡ ಕುಟುಂಬದ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ಈ ವೇಳೆ ಮಾತನಾಡಿದ ಅವರು, ಚುನಾವಣೆ ಮುಗಿದಿದೆ. ಜನರಿಗೆ ಉತ್ತಮ ಸ್ಪಂದನೆ ಸಿಕ್ಕಿದ್ದು ಗೆಲ್ಲುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಕುಟುಂಬಕ್ಕೆ ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಕಾರ್ಯಕರ್ತರನ್ನ ಭೇಟಿ ಮಾಡಬೇಕಿದೆ. ನಾಳೆಯಿಂದ ಅಧಿಕೃತ ಕೆಲಸ ಪ್ರಾರಂಭಿಸುತ್ತೇನೆ. ಕ್ಷೇತ್ರದ ಜನರ ಮೇಲೆ ವಿಶ್ವಾಸವಿದೆ ಎಂದ ಅವರು, ಕುಟುಂಬಕ್ಕಿಂತ ಕ್ಷೇತ್ರದ ಜನರ ಸೇವೆ ಮುಖ್ಯ ಎಂದು ಅವರು ತಿಳಿಸಿದರು.

ಪ್ರಚಾರಕ್ಕೆ ತೆರಳುವೆ: ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದೆ. ಮಕ್ಕಳ ಜತೆ ಇಂದು ಕಾಲ ಕಳೆದಿದ್ದೇನೆ. ಕಾರ್ಯಕರ್ತರೊಂದಿಗೆ ಚರ್ಚಿಸಬೇಕಿದ್ದು, ಸಭೆ ನಡೆಸಿದ್ದೇನೆ. ಫಲಿತಾಂಶದ ನಿರೀಕ್ಷೆಯಲ್ಲಿದ್ದು, ಉತ್ತರ ಕರ್ನಾಟಕದ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳುವೆ ಎಂದು ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ರಿಝ್ವನ್ ಅರ್ಶದ್ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬೆಂ.ಕೇಂದ್ರ ಕ್ಷೇತ್ರದಲ್ಲಿ ಈ ಬಾರಿ ಯುವಕನನ್ನು ಜನ ಕೈಬಿಡುವುದಿಲ್ಲ. ಸುಲಭವಾಗಿ ಗೆಲ್ಲುವ ವಿಶ್ವಾಸವಿದೆ. ಆದಾಯ ತೆರಿಗೆ ಇಲಾಖೆ ದಾಳಿ ಮೂಲಕ ನಮ್ಮ ಧ್ವನಿ ಅಡಗಿಸಲು ಯತ್ನಿಸಿದರೂ ವಿಚಲಿತನಾಗದೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

‘ಜನತೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಚುನಾವಣಾ ಪ್ರಚಾರದ ಮಧ್ಯೆಯೇ ಅವರು ಕುಟುಂಬಕ್ಕೂ ಸಮಯ ಮೀಸಲಿಟ್ಟಿದ್ದಾರೆ. ಆದರೆ, ಅವರಿಗೆ ಮೊದಲಿನಿಂದ ಜನರ ಮೇಲೆ ಪ್ರೀತಿ ಹೆಚ್ಚು. ಇಂದು ಅವರು ಕಾರ್ಯಕರ್ತರೊಂದಿಗೆ ಇದ್ದಾರೆ. ಪತಿಯ ಗೆಲ್ಲುವು-ಸೋಲಿನ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಆದರೆ, ಉತ್ತಮ ಫಲಿತಾಂಶದ ನಿರೀಕ್ಷೆ ಇದೆ’

-ಮೀನಾಕ್ಷಿ ಕೃಷ್ಣಭೈರೇಗೌಡ, ಬೆಂಗಳೂರ ಉತ್ತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪತ್ನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News