ಮತದಾನ ಪ್ರಮಾಣ ಕಡಿಮೆಯಾದರೆ ಕಾಂಗ್ರೆಸ್ ಗೆಲ್ಲುತ್ತೆ ಎನ್ನುವುದು ಸತ್ಯಕ್ಕೆ ದೂರ: ಕೃಷ್ಣ ಭೈರೇಗೌಡ

Update: 2019-04-19 16:11 GMT

ಬೆಂಗಳೂರು, ಎ.19: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ತನ್ನದೇ ಆದ ಮತ ವರ್ಗ ಇದೆ. ಏಳು ಬಾರಿ ಚುನಾವಣೆಯಲ್ಲಿ ನಿಂತು ಐದು ಬಾರಿ ಗೆದ್ದಿದ್ದೇನೆ. ಈ ಬಾರಿಯೂ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರವೂ ಸರಕಾರ ಸದೃಢವಾಗಿರಲಿದೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಹೇಳಿದ್ದಾರೆ. 

ಶುಕ್ರವಾರ ಸಹಕಾರ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ತುಂಬಾ ಚೆನ್ನಾಗಿ ಆಗಿದೆ. ಮತದಾನ ಮಾಡಿದ ಎಲ್ಲರಿಗೂ ಅಭಿನಂದನೆ. ಫಲಿತಾಂಶದ ನಂತರವೂ ಮೈತ್ರಿ ಸರಕಾರ ಸದೃಢವಾಗಿರುತ್ತೆ. ಮೈತ್ರಿ ಸರಕಾರವನ್ನು ಬೀಳಿಸಲು ಬಿಜೆಪಿ ನಾಯಕರು ಮಾಡಿದ ಎಲ್ಲ ಪ್ರಯತ್ನ ವಿಫಲವಾಯಿತು. ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಶನಿವಾರದಿಂದ ಸಚಿವನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದ್ದಾರೆ. ಚುನಾವಣೆ ಮುಗಿಯಿತು ಎಂದು ರಿಲ್ಯಾಕ್ಸ್ ಮೂಡ್‌ನಲ್ಲಿ ಇಲ್ಲ. ಎರಡನೆ ಹಂತದ ಲೋಕಸಭೆ ಚುನಾವಣೆಗೆ ಪಕ್ಷ ಜವಾಬ್ದಾರಿ ವಹಿಸಿದೆ. ಉತ್ತರ ಕರ್ನಾಟಕಕ್ಕೆ ಹೋಗಿ ಪಕ್ಷ ಸಂಘಟನೆ ಮಾಡಬೇಕಿದೆ. ಇವತ್ತು ಸರಕಾರಿ ರಜೆ ಇರುವ ಹಿನ್ನೆಲೆಯಲ್ಲಿ ಮನೆಯಲ್ಲಿದ್ದೇನೆ. ಮತದಾನ ಪ್ರಮಾಣ ಕಡಿಮೆ ಆಗಿದೆ ಎನ್ನುವ ಮೂಲಕ ಕಾಂಗ್ರೆಸ್ ಗೆಲ್ಲುತ್ತೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದರು.

ಇಲ್ಲಿಯವರೆಗೂ ಪ್ರಚಾರದಲ್ಲಿ ತಲ್ಲೀನನಾಗಿದ್ದೆ. ಈಗ ಚುನಾವಣೆ ಮುಗಿದಿದ್ದು, ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಕುಟುಂಬಕ್ಕೆ ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಕುಟುಂಬಕ್ಕಿಂತ ಕ್ಷೇತ್ರದ ಜನತೆ ಮುಖ್ಯ ಕಾರ್ಯಕರ್ತರನ್ನು ಭೇಟಿ ಮಾಡಬೇಕಿದೆ. ಶನಿವಾರದಿಂದ ಅಧಿಕೃತ ಕೆಲಸ ಪ್ರಾರಂಭಿಸುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News