ಹೆರಿಗೆ ಕೊಠಡಿಯಲ್ಲಿ ಜಾತಿ ಹೆಸರಿನಲ್ಲಿ ಮಾನವ ಹಕ್ಕು ಉಲ್ಲಂಘನೆ: ಲಿಂಡ್ಸೆ ಬರ್ನ್ಸ್

Update: 2019-04-19 16:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.18: ಸರಕಾರಿ ಆಸ್ಪತ್ರೆಗಳ ಹೆರಿಗೆ ಕೊಠಡಿಯಲ್ಲಿ ಜಾತಿ, ಧರ್ಮ, ಬಣ್ಣದ ಕಾರಣಗಳಿಂದಾಗಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಲಿಂಡ್ಸೆ ಬರ್ನ್ಸ್ ಆತಂಕ ವ್ಯಕ್ತಪಡಿಸಿದ್ದಾರೆ. 

ಶುಕ್ರವಾರ ನಗರದ ಸ್ವರಾಜ್, ಕರ್ನಾಟಕ ಮಹಿಳಾ ಜನಾಂದೋಲನ, ಮಹಿಳಾ ಮುನ್ನಡೆ ಸೇರಿದಂತೆ ಹಲವು ಮಹಿಳಾ ಸಂಘಟನೆಗಳು ಜಂಟಿಯಾಗಿ ನಗರದ ಎಸ್ಸಿಎಂ ಹೌಸ್‌ನಲ್ಲಿ ಹೆರಿಗೆ ಕೊಠಡಿಯಲ್ಲಿ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ಸರಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ದಲಿತ ಹಾಗೂ ಅಲ್ಪಸಂಖ್ಯಾತ ಮಹಿಳೆಯರೆ ಹೆಚ್ಚಾಗಿ ದಾಖಲಾಗುತ್ತಾರೆ. ಇವರ ಬಗ್ಗೆ ವೈದ್ಯರಿಗೆ ಸಾಮಾನ್ಯವಾಗಿ ತಾತ್ಸಾರ ಮನೋಭಾವನೆ ಇರುತ್ತದೆ. ಇಂತಹ ಗರ್ಭಿಣಿ ಮಹಿಳೆಯನ್ನು ಮುಟ್ಟಲು, ಮಾತನಾಡಿಸಲು ವೈದ್ಯರು ಇಷ್ಟ ಪಡುತ್ತಿಲ್ಲ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿರುವ ಜಾತಿ ಶ್ರೇಣೀಕರಣಗಳು ವೈದ್ಯ ಕ್ಷೇತ್ರದಲ್ಲೂ ಬೇರು ಬಿಟ್ಟಿರುವುದೆ ಇದಕ್ಕೆ ಪ್ರಮುಖ ಕಾರಣವೆಂದು ಅವರು ವಿಷಾದಿಸಿದರು.

ಬಹುತೇಕ ಹೆರಿಗೆಗಳನ್ನು ಶಸ್ತ್ರಚಿಕಿತ್ಸೆಯಿಲ್ಲದೆ ನಡೆಸಬಹುದು. ಕೇವಲ ಶೇ.10ರಿಂದ 15ರಷ್ಟು ಗರ್ಭಿಣಿಯರಿಗೆ ಮಾತ್ರ ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸುವ ಸಂದರ್ಭ ಬರಬಹುದು. ಆದರೆ, ನಮ್ಮ ವೈದ್ಯರು ಹಣದ ಆಸೆಗಾಗಿ ಶೇ.50ರಷ್ಟು ಸಾಮಾನ್ಯ ಆರೈಕೆಯಿಂದ ನಡೆಸಬಹುದಾದ ಹೆರಿಗೆಯನ್ನು ಶಸ್ತ್ರಚಿಕಿತ್ಸೆ ಮೂಲಕ ನಡೆಸಲಾಗುತ್ತದೆ. ಇದು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾದದ್ದೆಂದು ಅವರು ಹೇಳಿದರು.

ಉಚಿತ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ಫಿನ್‌ಲ್ಯಾಂಡ್, ಹಾಲೆಂಡ್, ಸ್ವೀಡನ್‌ನಂತಹ ದೇಶಗಳಲ್ಲಿ ಸುಸಜ್ಜಿತವಾದ ಆರೋಗ್ಯ ಕೇಂದ್ರಗಳು ಇದ್ದರೂ ಆ ದೇಶದ ಗರ್ಭಿಣಿಯರು ಸಾಮಾನ್ಯ ಹೆರಿಗೆಗಳನ್ನು ಮಾಡಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಆದರೆ, ಭಾರತದಂತಹ ಮಧ್ಯಮ ಹಾಗೂ ಬಡತನ ಹೆಚ್ಚಿರುವ ದೇಶದಲ್ಲಿ ದುಬಾರಿ ವೆಚ್ಚದಲ್ಲಿ ಹೆರಿಗೆಗಳು ನಡೆಯುತ್ತಿರುವ ಹುನ್ನಾರವನ್ನು ಅರಿಯಬೇಕಿದೆ ಎಂದು ಅವರು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಓಬಳೇಶ್ ಮಾತನಾಡಿ, ರಾಜ್ಯದ ಕೋಲಾರ, ಮಂಡ್ಯ, ಬೆಂಗಳೂರು ಸೇರಿದಂತೆ ನಾನಾ ಭಾಗಗಳಲ್ಲಿ ಸುಮಾರು 264 ಬಾಣಂತಿಯರೊಂದಿಗೆ ಹೆರಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಈ ವೇಳೆ ಬಾಣಂತಿಯರು ತಾವು ಅನುಭವಿಸಿದ ಜಾತಿ, ಬಣ್ಣ, ಧರ್ಮದ ಆಧಾರದಲ್ಲಿ ನಡೆದ ಶೋಷಣೆಗಳ ಕುರಿತು ವಿವರಿಸಿದರು. ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾನವ ಹಕ್ಕು ಉಲ್ಲಂಘನೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದರು.

ವೈದ್ಯೆ ಶೋಯಿಬಾ ಮಾತನಾಡಿ, ಸರಕಾರಿ ಆಸ್ಪತ್ರೆಗಳಲ್ಲಿ ಶೋಷಣೆಗಳು ನಡೆಯುವುದು ಸಾಮಾನ್ಯವಾಗಿದೆ. ವೈದ್ಯರಿಗೆ ನಮ್ಮ ಸಾಮಾಜಿಕ ವ್ಯವಸ್ಥೆಯ ಅರಿವು ಇರುವುದು ಕಡಿಮೆ ಎನ್ನುವಷ್ಟರ ಮಟ್ಟಿಗೆ ವರ್ತಿಸುತ್ತಾರೆ. ಗರ್ಭಿಣಿಯರು ಸೇರಿದಂತೆ ರೋಗಿಗಳ ಬಳಿ ಹೇಗೆ ವರ್ತಿಸಬೇಕೆಂದು ಚಿಂತಿಸುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಮಹಿಳಾ ಮುನ್ನಡೆಯ ಮಲ್ಲಿಗೆ ಸಿರಿಮನೆ, ಮನೋಹರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News