ಮರು ಮತದಾನಕ್ಕೆ ಅವಕಾಶ ನೀಡುವಂತೆ ಬಿ.ಎಸ್.ಸತ್ಯನಾರಾಯಣ ಆಗ್ರಹ

Update: 2019-04-19 16:44 GMT

ಬೆಂಗಳೂರು, ಎ.19: ಚುನಾವಣಾ ಆಯೋಗದ ತಪ್ಪಿನಿಂದಾಗಿ ಮತದಾರರ ಹೆಸರು ಕೈ ತಪ್ಪಿಹೋಗಿದ್ದು, ಅಂತಹ ಮತದಾರರಿಗೆ ವಿಧಾನಸಭಾ ಕ್ಷೇತ್ರವಾರು ಮರು ಮತದಾನಕ್ಕೆ ಅವಕಾಶ ನೀಡಬೇಕೆಂದು ಮಾಜಿ ಮೇಯರ್ ಬಿ.ಎಸ್. ಸತ್ಯನಾರಾಯಣ (ಕಟ್ಟೆ ಸತ್ಯ) ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಆಯೋಗದ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಮತದಾರರ ಹೆಸರು ಕೈ ತಪ್ಪಿಹೋಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಹೆಚ್ಚಿನ ಮತದಾರರು ಮತ ಚಲಾಯಿಸಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಸಂದರ್ಭಗಳಲ್ಲಿ ಮತ ಯಂತ್ರ ದೋಷ ಕಂಡು ಬಂದರೆ, ಮತದಾನ ಸಮಯದಲ್ಲಿ ಘರ್ಷಣೆ ಉಂಟಾದರೆ ಮತ್ತು ಅಭ್ಯರ್ಥಿ ಮರಣ ಹೊಂದಿದ್ದರೆ ಮರು ಮತದಾನಕ್ಕಾಗಿ ದಿನಾಂಕ ನಿಗದಿ ಪಡಿಸುವ ಚುನಾವಣಾ ಆಯೋಗ ದಾಖಲೆಗಳಲ್ಲಿ ದೋಷ ಕಂಡು ಬಂದ ವೇಳೆ ಮತದಾನ ಮಾಡಲು ಸಾಧ್ಯವಾಗದ ಮತದಾರರಿಗೂ ಆಯಾ ವಿಧಾನ ಸಭಾ ವ್ಯಾಪ್ತಿಯಲ್ಲಿ ಮರು ಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಕಳೆದ ವಿಧಾನಸಭೆಯಲ್ಲಿ ಮತದಾನ ಮಾಡಿರುವ ಮತದಾರರ ಬಳಿ ಗುರುತಿನ ಚೀಟಿ ಇದೆ. ಒಂದು ವೇಳೆ ಗುರುತಿನ ಚೀಟಿ ಇಲ್ಲದಿದ್ದ ಸಂದರ್ಭದಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ಚಾಲನಾ ಪರವಾನಿಗೆ, ಪಾನ್ ಕಾರ್ಡ್ ಹಾಗೂ ವಾಸ ದೃಢೀಕರಣ ಪತ್ರ ತೋರಿಸುವ ಮೂಲಕ ಮತದಾನ ಮಾಡಬಹುದೆಂದು ಚುನಾವಣಾ ಆಯೋಗ ಜಾಹೀರಾತುಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿದೆ ಎಂದು ಹೇಳಿದರು.

ಚುನಾವಣಾ ಆಯೋಗದ ವೆಬ್ ಸೈಟ್‌ಗಳಲ್ಲೂ ಅನೇಕ ದೋಷಗಳಿರುವುದರಿಂದ ಆಯೋಗ ಗಂಭೀರವಾಗಿ ಪರಿಗಣಿಸಿ ಸರಿಪಡಿಸಬೇಕು. ಚುನಾವಣೆಗೆ ಒಂದು ತಿಂಗಳು ಮೊದಲೇ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಚುನಾವಣೆ ದಿನಾಂಕದಂದೇ ಮತಪಟ್ಟಿಯಲ್ಲಿ ಮತದಾರರ ಹೆಸರು ಹೇಗೆ ನಾಪತ್ತೆಯಾಗಿದೆ ಎಂದು ಆಯೋಗವನ್ನು ಅವರು ಪ್ರಶ್ನಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಮತಪಟ್ಟಿಯಲ್ಲಿ ಮತದಾರರ ಹೆಸರು ಬಿಟ್ಟು ಹೋಗಿರುವುದು ಅಥವಾ ಡಿಲೀಟ್ ಆಗುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳು ನಡೆಯುವುದಿಲ್ಲ. ನಗರ ಪ್ರದೇಶದಲ್ಲಿ ಇಂತಹ ಕಾರಣಗಳಿಂದ ಮತದಾರರು ಮತದಾನದಿಂದ ವಂಚಿತರಾಗುವುದಕ್ಕೆ ಆಯೋಗ ಸೂಕ್ತ ಕಾರಣ ನೀಡಬೇಕೆಂದು ಒತ್ತಾಯಿಸಿದರು.

ಲೋಕಸಭಾ ಚುನಾವಣೆ ಮುಗಿದ ನಂತರ ಸಮ್ಮಿಶ್ರ ಸರಕಾರ ಸಿದ್ದರಾಮಯ್ಯ ಅವರಿಂದಲೇ ಪತನಗೊಳ್ಳುತ್ತದೆ. ಇದಕ್ಕೆ ಅವರು ಮುಹೂರ್ತ (ಟೈಮ್ ಬಾಂಬ್) ಫಿಕ್ಸ್ ಮಾಡಿದ್ದಾರೆ.

-ಆರ್.ಅಶೋಕ್, ಬಿಜೆಪಿ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News