ಹತ್ತು ಜಿಲ್ಲೆಗಳಲ್ಲಿ ‘ಕ್ಯಾನ್ಸರ್ ಪತ್ತೆ’ ಘಟಕ ಸ್ಥಾಪನೆ

Update: 2019-04-19 18:20 GMT

ಬೆಂಗಳೂರು, ಎ.19: ಮಾರಣಾಂತಿಕ ಕ್ಯಾನ್ಸರ್ ಕಾಯಿಲೆ ಪತ್ತೆ ಮಾಡಲು ರಾಜ್ಯದ ಹತ್ತು ಜಿಲ್ಲೆಗಳಲ್ಲಿ ‘ಕ್ಯಾನ್ಸರ್ ಪತ್ತೆ ಘಟಕ’ ಆರಂಭಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಝಾವೇದ್ ಅಕ್ತರ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಹೊಸೂರು ರಸ್ತೆಯ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ‘ರೋಬೋಟಿಕ್ ತಂತ್ರಜ್ಞಾನದ ಮೂಲಕ ಗ್ರಂಥಿ ಶಸ್ತ್ರಚಿಕಿತ್ಸೆ’ಯ ಕುರಿತ ಅಂತರ್‌ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಯಾನ್ಸರ್ ರೋಗಾಣುಗಳನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಮಾಡಿ, ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡರೆ, ಮಾರಣಾಂತಿಕ ಕಾಯಿಲೆಯಿಂದ ಸಂಪೂರ್ಣ ಗುಣಮುಖರಾಗಬಹುದು. ಆದರೆ, ಈ ಕಾಯಿಲೆ ಬಗ್ಗೆ ಸರಿಯಾದ ಅರಿವು ಇಲ್ಲದೇ ಹಲವು ರೋಗಿಗಳು ಕೊನೆ ಹಂತದಲ್ಲಿ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ. ಇದನ್ನು ತಪ್ಪಿಸಲು ತಲಾ ಒಂದು ಘಟಕಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ರೋಗ ಪತ್ತೆ ಘಟಕಗಳನ್ನು ಆರಂಭಿಸಲಾಗುವುದು. ಈ ಸಂಬಂಧ ಹಣವನ್ನು ಸರಕಾರ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ಸಿ.ರಾಮಚಂದ್ರ ಮಾತನಾಡಿ, ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿ ವಾಹನ ನಿಲ್ದಾಣ ವ್ಯವಸ್ಥೆ, ಇ-ಆಸ್ಪತ್ರೆ ಸೇವೆ ಆರಂಭಿಸಲಾಗುತ್ತಿದೆ. 50 ಕೋಟಿ ರೂ.ವೆಚ್ಚದಲ್ಲಿ ಆರು ಅಂತಸ್ತಿನ ಸುಸಜ್ಜಿತ ಒಪಿಡಿ ಬ್ಲಾಕ್, ಮೂರು ಕೋಟಿ ವೆಚ್ಚದಲ್ಲಿ ಕಟ್ಟಿದ ಧರ್ಮಶಾಲಾ ಕಟ್ಟಡ ನಿರ್ಮಿಸುತ್ತಿದ್ದೇವೆ. ಅಲ್ಲದೆ, ಖಾಸಗಿಯವರು ಸಹಭಾಗಿತ್ವದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿರುವುದಾಗಿ ಎಂದು ಹೇಳಿದರು. ಕಾರ್ಯಾಗಾರದಲ್ಲಿ ಕೊರಿಯಾದ ವೈದ್ಯರಾದ ಡಾ. ಎನ್.ಎಂ.ಕಿಮ್ ಮತ್ತು ಡಾ.ಎಸ್.ಡಬ್ಲೂ. ಕಿಮ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News