ಬಿಬಿಎಂಪಿ: ಪೌರ ಕಾರ್ಮಿಕರಿಗೆ ರಜೆಯೂ ಇಲ್ಲ- ಕಸ ವಿಲೇವಾರಿಯೂ ಇಲ್ಲ

Update: 2019-04-19 18:24 GMT

ಬೆಂಗಳೂರು, ಎ.19: ರಾಜಧಾನಿಯನ್ನು ಪ್ರತಿನಿತ್ಯ ಸ್ವಚ್ಛವಾಗಿಡುವ ಪೌರ ಕಾರ್ಮಿಕರಿಗೆ ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಮಾಡಲು ರಜೆ ನೀಡಿಲ್ಲ. ಆದರೂ ಕಸ ಮಾತ್ರ ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಶಿಯಾಗಿರುವ ದೃಶ್ಯ ಸಾಮಾನ್ಯವಾಗಿದೆ.

ನಗರದಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿದೆ. ಕಳೆದ ಎರಡು ದಿನಗಳಿಂದ ತ್ಯಾಜ್ಯ ವಿಲೇವಾರಿಯಾಗದೆ ಗಲ್ಲಿ- ಗಲ್ಲಿಗಳು ಗಬ್ಬು ನಾರುತ್ತಿವೆ. ಕಸ ಸಾಗಾಣಿಕೆ ಲಾರಿಗಳು ನಿಂತಲ್ಲೇ ನಿಂತಿವೆ. ಶಿವಾನಂದ ವೃತ್ತ, ಮಲ್ಲೇಶ್ವರಂ, ಗಾಂಧಿನಗರ ಸೇರಿದಂತೆ ಇನ್ನೂ ಹಲವೆಡೆ ಮನೆಗಳಿಂದ ತಂದ ಕಸ ರಸ್ತೆಗಳ ಮಧ್ಯೆಯೇ ಇದೆ. ಗಲ್ಲಿ-ಗಲ್ಲಿಗಳು ಗಬ್ಬು ನಾರಲು ಶುರುವಾಗಿದೆ. ಕಸದ ಕಂಟಕ ಮತ್ತೆ ಬಿಬಿಎಂಪಿಯನ್ನು ಕಾಡತೊಡಗಿದೆ.

ಕಸದ ಅಸಮರ್ಪಕ ವಿಲೇವಾರಿಯಿಂದ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿ ಪಡೆದಿದ್ದ ಬಿಬಿಎಂಪಿ ಕಸದ ಸಮಸ್ಯೆ ನಿವಾರಣೆಗೆ 24 ಗಂಟೆಯೂ ಕೆಲಸ ಮಾಡಬೇಕಿತ್ತು. ಆದರೆ, ಸಮಸ್ಯೆ ಶುರುವಾಗಿ ಅದು ಉಲ್ಬಣಿಸಿ ಮೂರು ದಿನವಾಗಿದೆ. ತಕ್ಷಣವೇ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಸದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡು ನಗರದ ಮಾನ ಮತ್ತೊಮ್ಮೆ ಹರಾಜಾಗುವುದರಲ್ಲಿ ಅನುಮಾನವಿಲ್ಲ.

ವಾರ್ತಾಭಾರತಿಯೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕಸದ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಆದರೆ, ಕಸ ಸಾಗಾಣಿಕೆಯ ಲಾರಿಗಳು ನಿಂತಿರುವುದನ್ನು ಕಂಡಾಗ ಪಾಲಿಕೆ ಅಧಿಕಾರಿಗಳು ಕಸದ ವಿಲೇವಾರಿಯ ಯಾವುದೋ ಸಮಸ್ಯೆಯನ್ನು ಮುಚ್ಚಿಡುತ್ತಿರುವುದಾಗಿ ಮೇಲ್ನೋಟಕ್ಕೆ ಕಾಣುತ್ತಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News