ಮಾಲೆಗಾಂವ್ ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್ ಸ್ಪರ್ಧೆ ಸಮರ್ಥಿಸಿಕೊಂಡ ಮೋದಿ

Update: 2019-04-20 05:15 GMT

ಹೊಸದಿಲ್ಲಿ, ಎ.20: ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್‌ರನ್ನು ಕಣಕ್ಕಿಳಿಸುತ್ತಿರುವ ಬಿಜೆಪಿಯ ನಿರ್ಧಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ.

 ಹಿಂದೂ ನಾಗರಿಕತ್ವಕ್ಕೆ ತಪ್ಪಾಗಿ ‘‘ಭಯೋತ್ಪಾದಕ’’ಹಣೆ ಪಟ್ಟಿ ಕಟ್ಟಿರುವ ಎಲ್ಲರಿಗೂ ಪ್ರಜ್ಞಾ ಸಿಂಗ್ ಸ್ಪರ್ಧೆಯು ಸಾಂಕೇತಿಕ ಉತ್ತರವಾಗಿದೆ. ಪ್ರಜ್ಞಾ ಸಿಂಗ್ ಕಾಂಗ್ರೆಸ್‌ಗೆ ತೀವ್ರ ಸ್ಪರ್ಧೆಯೊಡ್ಡಲಿದ್ದಾರೆ. ಅವರ ಸ್ಪರ್ಧೆ ಆ ಪಕ್ಷಕ್ಕೆ ದುಬಾರಿಯಾಗಲಿದೆ. ಕಾಂಗ್ರೆಸ್ ಪಕ್ಷ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಹಾಗೂ ನ್ಯಾಯಾಧೀಶ ಬಿ.ಎಚ್. ಲೋಯಾ ಸಾವಿನ ಘಟನೆಯನ್ನು ತಪ್ಪಾಗಿ ನಿರೂಪಿಸುವ ಮೂಲಕ ನಿರ್ದಿಷ್ಟ ಕಾರ್ಯಯೋಜನೆಯೊಂದಿಗೆ ಕಾರ್ಯ ನಿರ್ವಹಿಸುತ್ತ್ತಿದೆ ಆರೋಪಿಸಿದರು.

ಸ್ಫೋಟ ಪ್ರಕರಣದಲ್ಲಿ ಜಾಮೀನು ಪಡೆದಿರುವ ಪ್ರಜ್ಞಾ ಸಿಂಗ್ ಸ್ಪರ್ಧೆಯನ್ನು ಸಮರ್ಥಿಸಿಕೊಂಡ ಮೋದಿ,‘‘ಅಮೇಠಿಯಲ್ಲಿ ಸ್ಪರ್ಧಿಸುತ್ತಿರುವ ಪಕ್ಷದ(ಕಾಂಗ್ರೆಸ್)ಅಭ್ಯರ್ಥಿ(ರಾಹುಲ್ ಗಾಂಧಿ)ಜಾಮೀನಿನಲ್ಲಿದ್ದಾರೆ. ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ(ಸೋನಿಯಾ ಗಾಂಧಿ) ಕೂಡ ಜಾಮೀನಿನಲ್ಲಿದ್ದಾರೆ. ಆದರೆ,ಆ ಕುರಿತು ಯಾರೂ ಚರ್ಚಿಸುತ್ತಿಲ್ಲ. ಭೋಪಾಲ್ ಅಭ್ಯರ್ಥಿ ಜಾಮೀನಿನ ಮೇಲೆ ಹೊರಬಂದಿರುವುದನ್ನು ಎಲ್ಲರೂ ಪ್ರಶ್ನಿಸುತ್ತಿದ್ದಾರೆ ಎಂದರು.

ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿರುವ ಪ್ರಜ್ಞಾ ಸಿಂಗ್‌ರನ್ನು ಭೋಪಾಲ್ ಕ್ಷೇತ್ರದಿಂದ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಕೇಂದ್ರ ನಾಯಕರು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News