ಅನುಮತಿಯಿಲ್ಲದೆ ಖಾಸಗಿ ವಾಹನಗಳ ಸಂಚಾರ: ಸಾರಿಗೆ ಇಲಾಖೆ ಮೌನ ?

Update: 2019-04-20 17:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.20: ಪ್ರತಿದಿನ ನಗರದಲ್ಲಿ ಅನುಮತಿಯಿಲ್ಲದೆ ಸಂಚಾರ ಮಾಡುವ ನೂರಾರು ಖಾಸಗಿ ವಾಹನಗಳು ಎಲ್ಲೆಂದರಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದ್ದರೂ, ಅವುಗಳ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ. ನಗರದಲ್ಲಿ ಸರಕಾರಿ ಬಸ್‌ಗಳು ಹೆಚ್ಚು ಹೊಗೆ ಉಗುಳಿದರೆ ಸಾರಿಗೆ ಅಧಿಕಾರಿಗಳು ಸಾವಿರಾರು ರೂ.ಗಳ ದಂಡ ವಿಧಿಸುತ್ತಾರೆ. ಇದೇ ಸಂದರ್ಭದಲ್ಲಿ ಖಾಸಗಿ ವಾಹನಗಳ ಮೇಲೆ ನಿಯಂತ್ರಣ ಸಾಧಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರಿನಿಂದ ದೇವನಹಳ್ಳಿ ಮೂಲಕ ಶಿಡ್ಲಘಟ್ಟ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕೋಲಾರ, ಮುಳಬಾಗಿಲು ಸೇರಿದಂತೆ ವಿವಿಧ ಕಡೆಗಳಿಗೆ ಪ್ರತಿದಿನ ಸುಮಾರು 50 ಕ್ಕೂ ಅಧಿಕ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ದಿನದಲ್ಲಿ ಕಡಿಮೆ ಅಂದರೆ 300 ಟ್ರಿಪ್‌ಗಳು ಮಾಡುತ್ತಿದ್ದು, ಅಂದಾಜು 6-7 ಲಕ್ಷ ರೂ.ಗಳಿಸುತ್ತವೆ. ಅದರಲ್ಲಿ ಸಾರಿಗೆ ಇಲಾಖೆಯ ಅನುಮತಿ ಇರುವ ಬಸ್‌ಗಳು ಎಷ್ಟು ಎನ್ನುವುದು ಪ್ರಯಾಣಿಕರ ಪ್ರಶ್ನೆಯಾಗಿದೆ. ಅಲ್ಲದೆ, ಟಿನ್ ಫ್ಯಾಕ್ಟರಿ ಸುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಉದ್ಯೋಗಿಗಳನ್ನು ತಂದುಬಿಡುವ ಖಾಸಗಿ ವಾಹನಗಳು, ನಂತರದ ಅವಧಿಯಲ್ಲಿ ಅದೇ ಫ್ಯಾಕ್ಟರಿಯಿಂದ ಬನಶಂಕರಿ ನಡುವೆ ಕಾರ್ಯಾಚರಣೆ ಮಾಡುತ್ತವೆ. ಇಂತಹ 25ರಿಂದ 30 ವಾಹನಗಳು ದಿನಕ್ಕೆ ನೂರಾರು ಟ್ರಿಪ್ ಪೂರೈಸುತ್ತವೆ. ಅವುಗಳಲ್ಲಿ ಯಾವ ವಾಹನವೂ ಸರಿಯಾದ ಪರ್ಮಿಟ್ ಪಡೆದಿಲ್ಲ.

ನಗರದಲ್ಲಿ ಹೀಗೆ ನಿತ್ಯ ನೂರಾರು ಖಾಸಗಿ ವಾಹನಗಳು ಪರ್ಮಿಟ್ ಇಲ್ಲದೆ ಓಡಾಡುತ್ತಿದ್ದರೂ, ಎಲ್ಲೆಂದರಲ್ಲಿ ಸಂಚಾರ ಮತ್ತು ನಿಲುಗಡೆ ಮಾಡುತ್ತಿದ್ದರೂ ಅವುಗಳ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ಅಷ್ಟರಮಟ್ಟಿಗೆ ಈ ಖಾಸಗಿ ವಾಹನಗಳ ಮಾಲಕರು ಹಣಬಲದ ಪ್ರಭಾವ ಹೊಂದಿದ್ದಾರೆಂಬ ದೂರು ಕೇಳಿಬರುತ್ತಿದೆ. ನಗರವನ್ನು ಪ್ರವೇಶಿಸುವ ಕೆ.ಆರ್.ಮಾರುಕಟ್ಟೆ, ಕೆ.ಆರ್.ಪುರ, ಹೆಬ್ಟಾಳ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಈ ವಾಹನಗಳ ಹಾವಳಿ ವಿಪರೀತವಾಗಿದೆ. ಕಾರು, ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ, ಈ ಖಾಸಗಿ ವಾಹನಗಳ ಸಂಖ್ಯೆ ತುಂಬಾ ಕಡಿಮೆ. ಆದರೆ, ಸಂಚಾರದಟ್ಟಣೆಯಲ್ಲಿ ಇವುಗಳ ಪಾತ್ರ ದೊಡ್ಡದು. ಕಲೆಕ್ಷನ್ ಇಲ್ಲದಿದ್ದರೆ ಇವು ಕಾಲುಕೀಳುವುದಿಲ್ಲ. ಅಲ್ಲಿಯವರೆಗೆ ಇವುಗಳ ಹಿಂದೆ ಬರುವ ವಾಹನ ಸವಾರರು ಸರದಿಯಲ್ಲಿ ಕಾಯಬೇಕು.

ಆರ್ಥಿಕ ಸಂಕಷ್ಟದಲ್ಲಿ ಬಿಎಂಟಿಸಿ: ನಗರದಲ್ಲಿ ಸುಮಾರು 400 ಕ್ಕೂ ಅಧಿಕ ಖಾಸಗಿ ವಾಹನಗಳು ಹೀಗೆ ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿವೆ ಎಂದು ಅಂದಾಜಿಸಲಾಗಿದೆ. ಅವುಗಳಲ್ಲಿ ಅರ್ಧದಷ್ಟು ವಾಹನಗಳಿಗೆ ಬ್ರೇಕ್ ಬಿದ್ದರೂ ಸಾಕು, ಬಿಎಂಟಿಸಿ ಆರ್ಥಿಕ ಸಂಕಷ್ಟದಿಂದ ಹೊರಬರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಅಧಿಕಾರಿಗಳು ಶಾಮೀಲು?: ಪ್ರತಿ ವರ್ಷ ಖಾಸಗಿ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿ, ಸಾರಿಗೆ ಇಲಾಖೆಯು ಲಕ್ಷಾಂತರ ರೂ. ದಂಡ ವಸೂಲು ಮಾಡುತ್ತದೆ. ಆದರೆ, ವ್ಯವಹಾರ ನಡೆಯುವುದು ಕೋಟ್ಯಂತರ ರೂ. ಆಗಿರುತ್ತದೆ. ಪರ್ಮಿಟ್ ಇಲ್ಲದೆ ಕಾರ್ಯಾಚರಣೆ ಮಾಡುವ ಈ ವಾಹನಗಳ ತಲಾ ಒಂದು ಟ್ರಿಪ್‌ಗೆ ಇಂತಿಷ್ಟು ಅಂತ ಅಧಿಕಾರಿಗಳಿಗೆ ಕಮೀಷನ್ ಹೋಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಖಾಸಗಿ ಟ್ರಾವೆಲ್ಸ್‌ನ ಮಾಲಕರೊಬ್ಬರು ಹೇಳಿದ್ದಾರೆ.

ಖಾಸಗಿ ವಾಹನಗಳಿಗೂ ಜಿಪಿಎಸ್ ಅಗತ್ಯ: ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್‌ಗಳ ಮಾದರಿಯಲ್ಲಿ ಖಾಸಗಿ ವಾಹನಗಳಿಗೂ ಜಿಪಿಎಸ್ ಅಳವಡಿಸಬೇಕು ಎಂದು ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಿಪಿಎಸ್ ಅಳವಡಿಕೆಯಿಂದ ಬಸ್‌ಗಳು ಯಾವ ಮಾರ್ಗಗಳಲ್ಲಿ ಹಾದುಹೋಗುತ್ತವೆ? ಎಷ್ಟು ಹೊತ್ತು ನಿಲುಗಡೆ ಆಗುತ್ತವೆ? ಪ್ರಯಾಣಿಕರ ಸುರಕ್ಷತೆಗೆ ಎಷ್ಟು ಪ್ರಾಮುಖ್ಯತೆ ಕೊಟ್ಟಿವೆ ಎಂಬುದೆಲ್ಲ ತಿಳಿಯಲಿದೆ. ಇದರ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಪಟ್ಟ ಇಲಾಖೆಯಲ್ಲಿ ಒಂದು ಸಣ್ಣ ಘಟಕ ಸ್ಥಾಪಿಸಬೇಕು ಎಂದು ಆಗ್ರಹಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News