ಕರಗ ಉತ್ಸವ ಕಣ್ತುಂಬಿಕೊಂಡ ಸಾವಿರಾರು ಜನತೆ

Update: 2019-04-20 17:52 GMT

ಬೆಂಗಳೂರು, ಎ.20: ಪ್ರತಿ ವರ್ಷ ಚೈತ್ರ ಹುಣ್ಣಿಮೆಯ ದಿನದಂದು ನಡೆಯುವ ಬೆಂಗಳೂರು ಕರಗ ಮಹೋತ್ಸವ ಶನಿವಾರ ಅದ್ಧೂರಿಯಾಗಿ, ವೈಭವಯುತವಾಗಿ ನೆರವೇರಿದ್ದು, ರಾಜ್ಯದ ವಿವಿಧ ಕಡೆಗಳಿಂದ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಕರಗ ಉತ್ಸವವನ್ನು ಕಣ್ತುಂಬಿಕೊಂಡರು.

ಚೈತ್ರ ಹುಣ್ಣಿಮೆಯ ದಿನ ಬೆಂಗಳೂರು ನಗರದಲ್ಲಿ ನಡೆಯುವ ಸಾಂಪ್ರದಾಯಿಕ ಕರಗ ಉತ್ಸವಕ್ಕೆ ಅದ್ಧೂರಿಯಾಗಿ ತೆರೆ ಕಂಡಿತು. ಶುಕ್ರವಾರ ಮಧ್ಯರಾತ್ರಿವರೆಗೂ ವಿವಿಧ ರೀತಿಯ ಶಾಸ್ತ್ರೋಕ್ತವಾಗಿ ಪೂಜೆಗಳು ನಡೆಸಲಾಯಿತು. ಅನಂತರ ಸರಿಸುಮಾರು ಮುಂಜಾನೆ 3-30 ಗಂಟೆ ಸಮಯದಲ್ಲಿ ಅರ್ಚಕ ಮನು ಕರಗವನ್ನು ಹೊತ್ತು ಹೊರಬರುತ್ತಿದ್ದಂತೆ ಸಾವಿರಾರು ಜನರು ಜೈಕಾರ ಕೂಗುವ ಮೂಲಕ ಉತ್ಸವವನ್ನು ಕಣ್ತುಂಬಿಕೊಂಡರು.

ದೀಪಾಲಂಕಾರ: ದೇವಸ್ಥಾನದ ಗೋಪುರ ಹಾಗೂ ಸುತ್ತಮುತ್ತಲಿನ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸುತ್ತಲೂ ವಿದ್ಯುತ್ ದೀಪಗಳಿಂದ ಬಣ್ಣ ಬಣ್ಣವಾಗಿ, ಆಕರ್ಷಿತವಾಗಿ ಅಲಂಕಾರ ಮಾಡಿದ್ದರು. ಇನ್ನು ಕರಗ ವೀಕ್ಷಿಸಲು ಕೋಲಾರ, ಬೆಂಗಳೂರು ಗ್ರಾಮಾಂತರ, ತಮಿಳುನಾಡಿನ ಹೊಸೂರು, ದೊಡ್ಡಬಳ್ಳಾಪುರ, ಧರ್ಮಪುರಿ, ಸೇಲಂ ಸೇರಿದಂತೆ ಹಲವು ಕಡೆಗಳಲ್ಲಿ ಜನರು ಆಗಮಿಸಿದ್ದರು.

ಕರಗ ಹೊತ್ತಿದ್ದ ಮನುಗೆ ಹರಿಶಿಣ ಬಣ್ಣದ ಸೀರೆ ಉಡಿಸಿ, ಬಳೆ ತೊಡಿಸಿ ದ್ರೌಪದಿಯಂತೆ ಸಿಂಗಾರ ಮಾಡಲಾಗಿತ್ತು. ಕರಗಧಾರಿಯ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ ಬಿಡಿಸಿ ಬಣ್ಣಗಳನ್ನು ತುಂಬಿದ್ದು ಎಲ್ಲರ ಗಮನ ಸೆಳೆಯಿತು. ಅಲ್ಲದೆ ತಳಿರುತೋರಣಗಳಿಂದ ಅಲಂಕಾರ, ಸರ್ವಾಲಂಕಾರ ಭೂಷಿತರಾಗಿದ್ದ ಕರಗಧಾರಿ ಮನು ವೀರಕುಮಾರರೊಂದಿಗೆ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಬಂದು ಪೂಜೆ ಸಲ್ಲಿಸಿ ನಂತರ ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಂತ್ರ ದಂಡದೊಂದಿಗೆ ದೇವಾಲಯ ಗರ್ಭಗುಡಿಯಿಂದ ಹೊರಗೆ ಬರುತ್ತಿದ್ದಂತೆ ಜೈಕಾರ ಮೊಳಗಿತು.

ಖಡ್ಗ ಹಿಡಿದಿದ್ದ ನೂರಾರು ವೀರಕುಮಾರರು ಗೋವಿಂದಾ ಗೋವಿಂದಾ ಎಂದು ನಾಮಸ್ಮರಣೆ ಮಾಡುತ್ತಾ ಕರಗದೊಂದಿಗೆ ಹೆಜ್ಜೆ ಹಾಕಿ ನಂತರ ಹಲಸೂರು ಪೇಟೆ ಆಂಜನೇಯಸ್ವಾಮಿ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲ ಪೂಜೆ ಸ್ವೀಕರಿಸಿ ನಂತರ ಕರಗ ಮುಂದೆ ಸಾಗಿತು.

ನಗರ್ತಪೇಟೆಯ ವೇಣುಗೋಪಾಲಸ್ವಾಮಿ, ಸಿದ್ದಣ್ಣ ಗಲ್ಲಿಯ ಭೈರೇದೇವರ ದೇವಸ್ಥಾನ, ಕಬ್ಬನ್‌ಪೇಟೆಯ ರಾಮಸೇನಾ ಮಂದಿರ, ಅರಳಪೇಟೆಯ ಮಸ್ತಾನ್ ಸಾಬ್ ದರ್ಗಾ, ಗಾಣಿಗರ ಪೇಟೆಯ ಚನ್ನರಾಯಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನದ ಮೂಲಕ ನಗರದ ನಾಲ್ಕು ದಿಕ್ಕುಗಳಲ್ಲಿಯೂ ಕರಗ ಸಂಚರಿಸಿತು.

ಅಕ್ಕಿಪೇಟೆ, ಅರಳೆಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆಗಳಲ್ಲಿ ಸಂಚರಿಸಿ ಕುಲಪುರೋಹಿತರ ಮನೆಯಲ್ಲಿ ಪೂಜೆ ಸ್ವೀಕರಿಸಿ ಸೂರ್ಯೋದಯದ ಹೊತ್ತಿಗೆ ಪುನಃ ಕರಗ ಧರ್ಮರಾಯಸ್ವಾಮಿ ದೇವಸ್ಥಾನ ಸೇರಿತು. ಈ ಸಂದರ್ಭದಲ್ಲಿ ಶಂಖ, ಜಾಗಟೆ ಸದ್ದು ಮೊಳಗಿತು. ಪಾರಂಪರಿಕವಾಗಿ ನಡೆಯುವ ಕರಗದ ಉತ್ಸವಕ್ಕೆ ಹತ್ತಾರು ಟನ್ ಮಲ್ಲಿಗೆ ಹೂಗಳನ್ನು ಬಳಸಿದ್ದರು. ಇದರಿಂದಾಗಿ ದೇವಸ್ಥಾನದ ಸುತ್ತಮುತ್ತಲೂ ಹೂವಿನ ವಾಸನೆ ಹರಡಿ, ಭಕ್ತರನ್ನು ಸೆಳೆಯುತ್ತಿತ್ತು.

ಕರಗ ಮಹೋತ್ಸವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಸಾವಿರಾರು ಸಂಖ್ಯೆಯಲ್ಲಿ ಶುಕ್ರವಾರ ಮಧ್ಯರಾತ್ರಿ 12 ಗಂಟೆಯಿಂದಲೇ ದೇವಸ್ಥಾನದ ಬಳಿ ನೆರೆದಿದ್ದರು. ಅಲ್ಲದೆ, ಇಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಜನರು ತಮ್ಮ ಮನೆಗಳ ಕಿಟಕಿಗಳ ಮೂಲಕ, ಮಹಡಿ ಮೇಲಿನಿಂದ ಕರಗವನ್ನು ನೋಡಲು ಕಾತುರರಾಗಿದ್ದರು. ಮಧ್ಯರಾತ್ರಿಗೆ ಕರಗ ಹೊರಬರುತ್ತದೆ ಎಂದು ತಿಳಿದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಬೇಗ ಹೊರಡದೇ ಇದ್ದುದರಿಂದ ಕೆಲವರಿಗೆ ನಿರಾಸೆಯನ್ನುಂಟು ಮಾಡಿತು.

ಅಗ್ನಿ ಅವಘಡ: ಧರ್ಮರಾಯಸ್ವಾಮಿ ದೇವಸ್ಥಾನದ ಬಳಿಯಿದ್ದ ಧ್ವನಿವರ್ಧಕ ಅಂಗಡಿಯೊಂದರಲ್ಲಿ ಆಕಸ್ಮಿಕ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಬೆಂಕಿಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತುಕೊಂಡು ಬೆಂಕಿಯನ್ನು ನಂದಿಸಿದ ಪರಿಣಾಮ ಯಾವುದೇ ಅಪಾಯವಾಗಲಿಲ್ಲ.

ಕರಗ ನಡೆಯುವ ತಿಳಗರಪೇಟೆ ಸುತ್ತಮುತ್ತಲಿನ ಎಲ್ಲ ರಸ್ತೆಗಳಲ್ಲಿ ಸಂಚಾರ ತಡೆ ಹಿಡಿಯಲಾಗಿತ್ತು. ಅಲ್ಲದೆ, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದ್ದು, ರಕ್ಷಣೆಗಾಗಿ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಯಾವುದೇ ಗದ್ಧಲವಿಲ್ಲದೆ ಶಾಂತಿಯುತವಾಗಿ ಕರಗ ಉತ್ಸವ ಅಂತ್ಯಗೊಂಡಿತು.

ಮಹಾರಥೋತ್ಸವ: ಉತ್ಸವದ ಅಂಗವಾಗಿ ಅರ್ಜುನದೇವ ಹಾಗೂ ದ್ರೌಪದಿದೇವಿಯ ಉತ್ಸವ ಮೂರ್ತಿಗಳನ್ನು ಮಹಾರಥದಲ್ಲಿಟ್ಟು ಸಿಂಗರಿಸಿ ಪೂಜೆ ಸಲ್ಲಿಸಿ, ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಇದೇ ವೇಳೆ ಮುತ್ಯಾಲಮ್ಮ ದೇವಿಯ ರಥೋತ್ಸವ ನಡೆಯಿತು. ಜತೆಗೆ ದೇವಳದ ಗರ್ಭಗುಡಿಯಲ್ಲಿನ ಪರಿವಾರ ದೇವತೆಗಳಾದ ಶ್ರೀಕೃಷ್ಣ, ಕುಂತಿದೇವಿ, ಧರ್ಮರಾಯ, ಭೀಮ, ನಕುಲ, ಅಭಿಮನ್ಯುಗಳ ಕಂಚಿನ ಉತ್ಸವಮೂರ್ತಿಗಳನ್ನು ಕುಲಸ್ಥರು ತಲೆಯ ಮೇಲೆ ಹೊತ್ತು ಮೆರವಣಿಯಲ್ಲಿ ಸಾಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News