ಭಕ್ತಿ ಚಳವಳಿ, ಮೆಕಾಲೆ ಶಿಕ್ಷಣ ಪದ್ಧತಿಯಿಂದ ಕ್ರಾಂತಿಕಾರಕ ಬದಲಾವಣೆ: ಡಾ.ಚಂದ್ರಶೇಖರ ಕಂಬಾರ

Update: 2019-04-21 13:08 GMT

ಬೆಂಗಳೂರು, ಎ.21: ದೇಶದಲ್ಲಿ 7, 8ನೆ ಶತಮಾನದಲ್ಲಿ ಪ್ರಾರಂಭಗೊಂಡ ಭಕ್ತಿ ಚಳವಳಿ ಹಾಗೂ ಮೆಕಾಲೆಯ ಶಿಕ್ಷಣ ಪದ್ಧತಿಯಿಂದಾಗಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಯಿತು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಿಸಿದರು.

 ರವಿವಾರ ಅಂಬಾ ಪ್ರಕಾಶನ ನಗರದ ನ್ಯಾಷನಲ್ ಕಾಲೇಜಿನ ಮಲ್ಟಿ ಮೀಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಹಿಂದಿ ಲೇಖಕ ಅಗ್ನಿಶೇಖರ್‌ರವರ ‘ಜೀವನರಾಗ’ ಅನುವಾದಿದ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇವರನ್ನು ಕಾಣಲು ಪುರೋಹಿತರಾಗಲಿ, ಸಂಸ್ಕೃತ ಭಾಷೆಯ ಅಗತ್ಯವಿಲ್ಲವೆಂದು ಜನಸಾಮಾನ್ಯರ ಅರಿವಿಗೆ ತಂದವರು ಭಕ್ತಿ ಚಳವಳಿಕಾರರು. ಪಶ್ಚಿಮ ಬಂಗಾಳದ ಚೈತನ್ಯಮಹಾಪ್ರಭು ಎಂಬ ಸಂತ ಭಕ್ತಿಯ ಹಾಡುಗಳ ಮೂಲಕವೆ ದೇವರು ಕಾಣುವ ಮಾರ್ಗಗಳನ್ನು ತೋರಿಸುವ ಮೂಲಕ ಸಾಮಾಜಿಕ ಕ್ರಾಂತಿಗೆ ದೊಡ್ಡಕೊಡುಗೆ ನೀಡಿದ್ದರು. ಇದೇ ಮಾದರಿಯಲ್ಲಿ ದೇಶದ ಎಲ್ಲ ರಾಜ್ಯಗಳಲ್ಲೂ ತಮ್ಮದೆ ಆದ ಭಕ್ತಿ ಪಂಥಗಳು ರೂಪತಾಳಿದವು ಎಂದು ಅವರು ಹೇಳಿದರು.

ಮೆಕಾಲೆಯ ಶಿಕ್ಷಣ ಪದ್ಧತಿಯು ಭಾರತದ ಇತಿಹಾಸ ಕಲ್ಪನೆಯನ್ನೆ ಬದಲಿಸಿತು. ಅಲ್ಲಿಯವರೆಗೂ ದೇಶದಲ್ಲಿ ಒಂದು ನಿರ್ಧಿಷ್ಟವಾದ ಕಾಲಮಾನವನ್ನು ಒಳಗೊಂಡ ಇತಿಹಾಸ ಎನ್ನುವುದು ಇರಲಿಲ್ಲ. ಮಹಾಭಾರತ, ರಾಮಾಯಣದ ಮಹಾಕಾವ್ಯ, ಪುರಾಣಗಳನ್ನೆ ಇತಿಹಾಸವಾಗಿ ನೆಲೆಗೊಂಡಿತ್ತು. ಮೆಕಾಲೆಯ ಇಂಗ್ಲಿಷ್ ಶಿಕ್ಷಣ ಪದ್ಧತಿಯಿಂದಾಗಿ ರವೀಂದ್ರನಾಥ ಠಾಗೂರು ಸೇರಿದಂತೆ ದೇಶದೆಲ್ಲೆಡೆ ಸಾಹಿತಿಗಳು, ಲೇಖಕರು ತನ್ನ ಪೂರ್ವಿಕರ ಹಾಗೂ ತಮ್ಮ ಅನುಭವಗಳನ್ನು ಸಾಹಿತ್ಯದ ಮೂಲಕ ದಾಖಲಿಸಲು ಮುಂದಾದರು ಎಂದು ಅವರು ಹೇಳಿದರು.

ನಾವು ಹಲವಾರು ರಾಜ್ಯಗಳು ಸೇರಿ ಒಂದು ದೇಶವಾಗಿ ಜೀವಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಒಂದು ರಾಜ್ಯದ ವ್ಯಕ್ತಿ ಮತ್ತೊಂದು ರಾಜ್ಯದ ವ್ಯಕ್ತಿಯೊಂದಿಗೆ ಸಂವಹನ ನಡೆಸಬೇಕಾದರೆ ಇಂಗ್ಲಿಷ್ ಅಗತ್ಯವಾಗಿದೆ. ಹಾಗೂ ಇತರೆ ರಾಜ್ಯಗಳಲ್ಲಿ ನಡೆಯುತ್ತಿರುವ ಸಾಹಿತ್ಯ ಕೃತಿಗಳನ್ನು ಕೂಡ ಇಂಗ್ಲಿಷ್ ಸಾಹಿತ್ಯದ ಮೂಲಕವೆ ನೋಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಇಂಗ್ಲಿಷ್ ವ್ಯಾಪಿಸುತ್ತಿರುವ ಪರಿ ನೋಡಿದರೆ ಮುಂದೊಂದು ದಿನ ಇಂಗ್ಲಿಷ್ ರಾಷ್ಟ್ರಭಾಷೆಯಾಗಲಿದೆ ಎಂಬುದರಲ್ಲಿ ಯಾವುದೆ ಅಚ್ಚರಿಯಿಲ್ಲ. ಅಂತಹ ಪರಿಸ್ಥಿತಿ ಯಾವುದೆ ಕಾರಣಕ್ಕೂ ನಿರ್ಮಾಣ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಹೀಗಾಗಿ ದೇಶಿಯ ಭಾಷೆಗಳು ಪರಸ್ಪರ ಪೂರಕವಾಗಿ ಬೆಳೆಯುವಂತಹ ವಾತಾವರಣ ನಿರ್ಮಾಣ ಮಾಡಬೇಕೆಂದು ಎಂದು ಅವರು ಆಶಿಸಿದರು.

ಪದ್ಮಶ್ರೀ ಪುರಸ್ಕೃತ ಕವಿ ಡಾ.ದೊಡ್ಡರಂಗೇಗೌಡ ಮಾತನಾಡಿ, ಒಬ್ಬ ಸಂಕಲನಕಾರ, ವೈದ್ಯ, ಎಂಜಿನಿಯರ್‌ರನ್ನು ಸೃಷ್ಟಿಸಬಹುದು. ಆದರೆ, ಒಬ್ಬ ಕವಿ, ಸಾಹಿತಿ, ವಿಮರ್ಶಕರನ್ನು ತಯಾರಿ ಮಾಡುವುದಕ್ಕೆ ಸಾಧ್ಯವಿಲ್ಲ. ತನ್ನ ಅನುಭವಗಳನ್ನು ಅಂತರಾಳದ ಧ್ವನಿಯಾಗಿಸಿ ಯಾರು ಹೇಳದೆ ಇರುವುದನ್ನು ಸಮಾಜದ ಮುಂದೆ ತೆರೆದಿಡುವುದೆ ಕವಿಯ ಲಕ್ಷಣವೆಂದು ತಿಳಿಸಿದರು.

ಕವಿಯೊಬ್ಬ ನೋಡುವ ನೋಟ, ವಿಷಯವನ್ನು ಗ್ರಹಿಸಬೇಕಾದರೆ ದಾರ್ಶನೀಯ ಗುಣ ಇರುತ್ತದೆ. ಕವಿಯೊಬ್ಬ ತಾನು ಕಂಡುಂಡ ಅನುಭವಗಳನ್ನು ಯತಾವತ್ತಾಗಿ ದಾಖಲಿಸದೆ ರೂಪಕಗಳ ಮೂಲಕ ಒಳಗಿನ ಆಶಯವನ್ನು ಅನುಸಂಧಾನ ಮಾಡುತ್ತಾನೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಲೇಖಕ ಅಗ್ನಿಶೇಖರ್, ಅನುವಾದಕ ನರಸಿಂಹಮೂರ್ತಿ, ಉಷಾರಾಣಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News