ಲೈಂಗಿಕ ಕಿರುಕುಳ ಆರೋಪ : ಗೃಹಕಚೇರಿಯಲ್ಲಿ ಪುರುಷ ಸಿಬ್ಬಂದಿಗೆ ನ್ಯಾಯಮೂರ್ತಿಗಳ ಒಲವು

Update: 2019-04-23 03:52 GMT

ಹೊಸದಿಲ್ಲಿ, ಎ. 23: ಭಾರತದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧವೇ ವಜಾಗೊಂಡ ಮಹಿಳಾ ಸಿಬ್ಬಂದಿಯೊಬ್ಬರಿಂದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಹಲವು ಮಂದಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಗೃಹ ಕಚೇರಿಗಳಲ್ಲಿ ಪುರುಷ ಸಿಬ್ಬಂದಿಯನ್ನೇ ನೇಮಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಸೋಮವಾರ ನಡೆದ ನ್ಯಾಯಮೂರ್ತಿಗಳ ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಈ ಆರೋಪವನ್ನು ವ್ಯವಸ್ಥಿತ ಪಿತೂರಿ ಹಾಗೂ ದುರುದ್ದೇಶಪೂರಿತ ಎಂದು ಬಣ್ಣಿಸಿದ್ದು, ಹಲವು ಮಂದಿ ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಆರೋಪದ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಸಂಭಾವ್ಯ ಆರೋಪಗಳಿಗೆ ತುತ್ತಾಗದಂತೆ ಗೃಹ ಕಚೇರಿಗಳಿಗೆ ಪುರುಷ ಸಿಬ್ಬಂದಿಯನ್ನೇ ನೇಮಿಸುವಂತೆ ಹಲವು ಮಂದಿ ನ್ಯಾಯಮೂರ್ತಿಗಳಿಂದ ಮನವಿ ಬಂದಿದೆ ಎಂದು ಸುಮಾರು 20 ನಿಮಿಷ ನಡೆದ ಈ ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.

ಆದರೆ ಸುಪ್ರೀಂಕೋರ್ಟ್‌ನಲ್ಲಿ ಇರುವ ಸಿಬ್ಬಂದಿಯ ಪೈಕಿ ಶೇಕಡ 60ರಷ್ಟು ಮಂದಿ ಮಹಿಳಾ ಸಿಬ್ಬಂದಿಯಾಗಿರುವುದರಿಂದ ಈ ಬೇಡಿಕೆ ಈಡೇರಿಸುವುದು ಕಷ್ಟಸಾಧ್ಯ ಎಂದು ಅವರು ಹೇಳಿದರು. ಆದರೂ ಮುಖ್ಯನ್ಯಾಯಮೂರ್ತಿ ಹಾಗೂ ಇತರ ನ್ಯಾಯಮೂರ್ತಿಗಳ ವಿರುದ್ಧ ಭವಿಷ್ಯದಲ್ಲಿ ನಡೆಯಬಹುದಾದ ಸಂಭಾವ್ಯ ದಾಳಿಗಳಿಂದ ಸೂಕ್ತ ರಕ್ಷಣೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಆರೋಪ ಮಾಡಿದ ಮಹಿಳೆ ಹಾಗೂ ಆಕೆಯ ಪತಿಯನ್ನು ಮುಖ್ಯ ನ್ಯಾಯಮೂರ್ತಿಗಳು ತಮ್ಮ ನಿವಾಸಕ್ಕೆ ಔತಣಕೂಟಕ್ಕೆ ಆಹ್ವಾನಿಸಿರುವುದರಲ್ಲಿ ಕೂಡಾ ಯಾವ ವಿಶೇಷತೆಯೂ ಇಲ್ಲ. ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ ಸಂಭ್ರಮಾಚರಣೆಗೆ ಎಲ್ಲ ಸಿಬ್ಬಂದಿಯನ್ನೂ ಆಹ್ವಾನಿಸಲಾಗಿತ್ತು ಎಂದು ಹಲವು ಮಂದಿ ನ್ಯಾಯಮೂರ್ತಿಗಳು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News