ವೋಟರ್ ಐಡಿ ಐಇಡಿ ಸ್ಫೋಟಕಗಳಿಗಿಂತಲೂ ಪ್ರಬಲ: ಮತ ಚಲಾಯಿಸಿ ಪ್ರಧಾನಿ ಮೋದಿ

Update: 2019-04-23 08:24 GMT

ಹೊಸದಿಲ್ಲಿ, ಎ.23: ಮತದಾರರ ಗುರುತು ಪತ್ರ-ವೋಟರ್ ಐಡಿಯ ಶಕ್ತಿ ಉಗ್ರರು ಬಳಸುವ ಐಇಡಿಗಿಂತಲೂ ಪ್ರಬಲವಾಗಿದೆ ಎಂದು ಮಂಗಳವಾರ ಬೆಳಿಗ್ಗೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ತಮ್ಮ ಮತ ಚಲಾಯಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

“ಪ್ರಜಾಪ್ರಭುತ್ವದ ಈ ಅತಿ ದೊಡ್ಡ ಹಬ್ಬದಲ್ಲಿ ನನ್ನ ಮತ ಚಲಾಯಿಸಿ ನಾನು ಪುನೀತನಾದೆ'' ಎಂದು ಹೇಳಿದ ಪ್ರಧಾನಿ ಜನರು ಈ ಚುನಾವಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ಕರೆ ನೀಡಿದರು.

ಅಹ್ಮದಾಬಾದ್ ನಗರದ ರಾನಿಪ್ ಪ್ರದೇಶದಲ್ಲಿರುವ ನಿಶಾನ್ ಹೈಸ್ಕೂಲ್ ನಲ್ಲಿನ ಮತಗಟ್ಟೆಗೆ ಬೆಳಿಗ್ಗೆ ತೆರೆದ ಜೀಪಿನಲ್ಲಿ ಮೋದಿ ಆಗಮಿಸಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.

ನಂತರ ಮತಗಟ್ಟೆಯ ಹೊರಗೆ ಕಾದಿದ್ದ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, “ಪ್ರಜಾಪ್ರಭುತ್ವದ ಮಹತ್ವವನ್ನು ಸಾರಿ ನಾವು ಜಗತ್ತಿಗೆ ಒಂದು ಉತ್ತಮ ಉದಾಹರಣೆಯಾಗಿದ್ದೇವೆ.ಮೊದಲ ಬಾರಿ ಮತದಾನದ ಹಕ್ಕು ಪಡೆದಿರುವ ಎಲ್ಲಾ ಯುವ ಮತದಾರರೂ ತಪ್ಪದೇ ಮತ ಚಲಾಯಿಸಿ ಶೇ.100ರಷ್ಟು ಮತದಾನ ದಾಖಲಿಸಬೇಕು'' ಎಂದರು.

ಮತದಾನ ಮಾಡುವುದಕ್ಕಿಂತ ಮುಂಚೆ ಗಾಂಧಿನಗರ ಸಮೀಪದ ರೈಸನ್ ಗ್ರಾಮದಲ್ಲಿರುವ ತಮ್ಮ ಕಿರಿಯ ಸೋದರ ಪಂಕಜ್ ಮೋದಿ ನಿವಾಸದಲ್ಲಿರುವ ತಾಯಿ ಹಿರಾಬೆನ್ ಮೋದಿ ಅವರನ್ನು ಭೇಟಿಯಾಗಿ ನರೇಂದ್ರ ಮೋದಿ ಅವರ ಆಶೀರ್ವಾದ ಪಡೆದರು.

ರಾತ್ರಿ ಗಾಂಧಿನಗರದ ರಾಜ್ ಭವನ್ ನಲ್ಲಿ ತಂಗಿದ್ದ ಪ್ರಧಾನಿ ಬೆಳಗ್ಗೆ ಸೀಮಿತ ರಕ್ಷಣೆಯೊಂದಿಗೆ ತಾಯಿಯ ಬಳಿ ಆಗಮಿಸಿದ್ದರು. ನಂತರ ಅಲ್ಲಿನ ನಿವಾಸಿಗಳ ಜತೆ ಮಾತನಾಡಿದ ಮೋದಿ ಕೆಲ ಮಕ್ಕಳೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News