ಇವಿಎಂನಲ್ಲಿ ಮತ ಚಲಾಯಿಸಲು ಆಗುತ್ತಿಲ್ಲ: ಚು. ಆಯೋಗಕ್ಕೆ ಪತ್ರ ಬರೆದ ರಾಹುಲ್ ಎದುರಾಳಿ ಎನ್ ಡಿಎ ಅಭ್ಯರ್ಥಿ

Update: 2019-04-23 10:22 GMT
ತುಷಾರ್ ವೆಳ್ಳಪಳ್ಳಿ

ಕಣ್ಣೂರು : ಕೇರಳದ ವಿವಿಧೆಡೆ ಇವಿಎಂಗಳಲ್ಲಿ ದೋಷ ಕಂಡು ಬಂದಿದೆ ಎಂದು ದೂರಿರುವ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ''ನಾನು ಸ್ವತಃ ಮತ ಚಲಾಯಿಸಲು ಸ್ವಲ್ಪ ಹೊತ್ತು ಕಾಯಬೇಕಾಯಿತು. ಇವಿಎಂಗಳು ಕಾರ್ಯಾಚರಿಸುತ್ತಿಲ್ಲ ಎಂದು  ನನಗೆ ಹೇಳಲಾಯಿತು. ಇಂತಹುದೇ ಪರಿಸ್ಥಿತಿ ಇತರೆಡೆಗಳಲ್ಲೂ ಇದೆ ಎಂದು ನನಗೆ ತಿಳಿದು ಬಂದಿದೆ,'' ಎಂದು ಕಣ್ಣೂರು ಜಿಲ್ಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಪಿಣರಾಯ್ ವಿಜಯನ್ ಹೇಳಿದರು.

ತಮ್ಮ ಕುಟುಂಬ ಸದಸ್ಯರೊಂದಿಗೆ ಹುಟ್ಟೂರಾದ ಪಿಣರಾಯಿಯ ಮತಗಟ್ಟೆಗೆ ಬೆಳಗ್ಗೆ ಬೇಗನೇ ಆಗಮಿಸಿದ ಮತದಾರರಲ್ಲಿ ಸಿಎಂ ಕೂಡ ಒಬ್ಬರಾಗಿದ್ದರು.

ರಾಜ್ಯದ ಹಲವೆಡೆ ಇವಿಎಂಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿವೆ ಎಂಬ ದೂರುಗಳು ಕೇಳಿ  ಬಂದಿವೆ. ವಯನಾಡ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎದುರಾಳಿಯಾಗಿರುವ ಎನ್‍ಡಿಎ ಅಭ್ಯರ್ಥಿ ತುಷಾರ್ ವೆಳ್ಳಪಳ್ಳಿ ಕೂಡ ವಯನಾಡ್ ನ ಮತಗಟ್ಟೆಯಲ್ಲಿನ ಇವಿಎಂ ಮೂಲಕ ಮತ ಚಲಾಯಿಸಲು ಆಗುತ್ತಿಲ್ಲ ಎಂದು ದೂರಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾಗಿ ಹೇಳಿದ್ದಾರೆ.

ಅಲಪುಝದಲ್ಲಿ ಮತ ಚಲಾಯಿಸಿದ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಕೂಡ ದೋಷಪೂರಿತ ಇವಿಎಂಗಳ ಬಗ್ಗೆ ದೂರಿದ್ದಾರೆ.

ಮತದಾನ ಆರಂಭಗೊಂಡು ಎರಡು ಗಂಟೆಗಳ ನಂತರವೂ ಪಟ್ಟಣಂತಿಟ್ಟದ ಮತಗಟ್ಟೆಯೊಂದರಲ್ಲಿ ಮತದಾನ ಆರಂಭವಾಗಿರಲಿಲ್ಲ. ಕೋವಳಂನ ಮತಗಟ್ಟೆಯ ಇವಿಎಂನಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಹೆಸರಿನೆದುರಿನ ಗುಂಡಿ ಒತ್ತಿದರೂ ಮತ ಬಿಜೆಪಿ ಚಿಹ್ನೆಗೆ ಹೋಗುತ್ತಿರುವುದಾಗಿ  ಕೆಲ ವರದಿಗಳು ತಿಳಿಸಿದ್ದವು. ಆದರೆ ಈ ವರದಿಗಳನ್ನು ತಿರುವನಂತಪುರಂ ಜಿಲ್ಲಾ ಕಲೆಕ್ಟರ್ ಕೆ ವಾಸುಕಿ ನಿರಾಕರಿಸಿದ್ದಾರೆ. ಈ ಮತಗಟ್ಟೆಯಲ್ಲಿ 76 ಮಂದಿ ಮತ ಚಲಾಯಿಸಿದ ನಂತರ ಇವಿಎಂ  ಜ್ಯಾಮ್ ಆಗಿದ್ದರಿಂದ  ಬೇರೆ ಯಂತ್ರ ಬಳಸಲಾಯಿತು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News