ರಮೇಶ್ ಜಾರಕಿಹೊಳಿ ಮನವೊಲಿಕೆಗೆ ಪ್ರಯತ್ನ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-04-23 12:36 GMT

ಬೆಂಗಳೂರು, ಎ. 23: ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದಾರೆಯೋ ಗೊತ್ತಿಲ್ಲ. ಅವರ ಮನವೊಲಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಯತ್ನ ಪಟ್ಟಿದ್ದಾರೆ. ನಾನೂ ಅವರೊಂದಿಗೆ ಮಾತನಾಡುವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಹಾಕಿದ ಬಳಿಕ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅವರಿಗೆ ನಮ್ಮ ಪಕ್ಷ ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನೂ ಮೊದಲೇ ನೀಡಿತ್ತು. ಆದಾಗ್ಯು ಅವರು ರಾಜೀನಾಮೆ ಕೊಡುವ ಕಾರಣ ಸ್ಪಷ್ಟವಾಗಿಲ್ಲ ಎಂದರು. ಕೆಲ ಕಾರಣದಿಂದ ಸಚಿವ ಸ್ಥಾನ ಹಿಂಪಡೆಯಲಾಗಿತ್ತು. ಆದರೆ, ಮತ್ತೆ ಅವರಿಗೆ ರಾಜಕೀಯವಾಗಿ ಜವಾಬ್ದಾರಿಗಳನ್ನು ಪಕ್ಷ ಕೊಡುತ್ತದೆ. ಮಂತ್ರಿ ಸ್ಥಾನ ತೆಗೆದಿದ್ದೇ ರಾಜೀನಾಮೆಗೆ ಕಾರಣವಾದರೆ ನಮ್ಮ ಮುಖಂಡರು ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.

ಸರಕಾರ ಬಿದ್ದು ಹೋಗುತ್ತೆ ಎಂದು ಬಹಳಷ್ಟು ಜನ ಆಸೆ ಇಟ್ಟುಕೊಂಡಿದ್ದಾರೆ. ಮಂತ್ರಿ, ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಂಡಿದ್ದಾರೆ. ಆದರೆ, ನಮ್ಮ ಸರಕಾರ ಸುಭದ್ರವಾಗಿರುತ್ತದೆ. ಯಾವುದೇ ಕಾರಣಕ್ಕೂ ಸರಕಾರ ಪತನವಾಗುವುದಿಲ್ಲ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದರು.

ನಮ್ಮ ಪಕ್ಷದಿಂದ ಬಿಜೆಪಿಗೆ ಶಾಸಕರು ಓಡಿ ಹೋಗುತ್ತಾರೆಂಬುದು ಸುಳ್ಳು. ಯಾರೂ ಹೋಗಲ್ಲ. ಅಸಮಾಧಾನ ಇರುವ ಶಾಸಕರ ಮನವೊಲಿಕೆ ಮಾಡಲಿದ್ದೇವೆ ಎಂದ ಅವರು, ಧರ್ಮದ ವಿಚಾರದಲ್ಲಿ ರಾಜಕೀಯ ಪಕ್ಷಗಳು ದೂರವಿರುವುದು ಒಳಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಈ ವಿಚಾರ ದೊಡ್ಡಮಟ್ಟಕ್ಕೆ ಹೋಗಿತ್ತು. ಆಗಲೂ ಕಾಂಗ್ರೆಸ್ ಪಕ್ಷ ಇದರಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದೆ. ಎಂ.ಬಿ.ಪಾಟೀಲ್ ನಮ್ಮ ಪಕ್ಷದವರೆ ಆದರೂ ಈ ವಿಚಾರದಲ್ಲಿ ಅವರು ಪಕ್ಷವನ್ನು ಪ್ರತಿನಿಧಿಸುವುದಿಲ್ಲ ಎಂದರು.

ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಅತೀವ ಬೇಸರ ತರಿಸಿದೆ. 300ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ನಮ್ಮ ರಾಜ್ಯದ ಹಲವು ಮಂದಿಯನ್ನು ಕಳೆದುಕೊಂಡಿರುವುದು ದುಃಖ ತಂದಿದೆ ಎಂದು ಡಾ.ಪರಮೇಶ್ವರ್ ಇದೇ ವೇಳೆ ನುಡಿದರು.

ಬೀಳೋದು ಇಲ್ಲ, ಬೀಳಿಸೋಕು ಆಗಲ್ಲ

ಶಾಸಕರ ಅಸಮಾಧಾನದ ವಿಚಾರದಲ್ಲಿ ಸಾಕಷ್ಟು ಘಟನೆ ನಡೆದಿರಬಹುದು. ಬಿಜೆಪಿಯಲ್ಲೂ ಅಸಮಾಧಾನವಿರುವ ಶಾಸಕರು ಸಾಕಷ್ಟಿದ್ದಾರೆ. ಅವರು ರಾಜೀನಾಮೆ ನೀಡಬಹುದೆಂದು ನಾನು ಹೇಳಬಹುದಲ್ಲವೇ? ಹೀಗಾಗಿ ನಮ್ಮ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ನಾವು(ಮೈತ್ರಿ) ಬೀಳೋದು ಇಲ್ಲ, ನಿಮ್ಮ(ಬಿಜೆಪಿ) ಕೈಯಲ್ಲಿ ಬೀಳಿಸೋಕು ಆಗಲ್ಲ

-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News