ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ: ಸಮಗ್ರ ತನಿಖೆಗೆ ರಾಮಲಿಂಗಾರೆಡ್ಡಿ ಆಗ್ರಹ

Update: 2019-04-23 14:33 GMT

ಬೆಂಗಳೂರು, ಎ. 23: ಮೊದಲ ಹಂತದ (ಎ.18) ಲೋಕಸಭಾ ಚುನಾವಣೆ ವೇಳೆ ನಗರದ ಕೆಲ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಿಂದ ಹಲವರ ಹೆಸರನ್ನು ಕೈಬಿಟ್ಟ ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಮಂಗಳವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮತದಾರರು ಮತದಾನದಿಂದ ದೂರ ಉಳಿಯುವಂತೆ ಮಾಡುವುದು ಅಪಾಯಕಾರಿ ಬೆಳವಣಿಗೆ. ಬೆಂಗಳೂರು ನಗರದಲ್ಲಿ ಬಹಳಷ್ಟು ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದ್ದು, ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ಷೇಪಿಸಿದರು.

ಮನೆ ಖಾಲಿ ಮಾಡಿದವರ, ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿ ಹಾಗೆಯೇ ಉಳಿದಿದೆ. ಒಂದೆ ಮನೆಯ ಮತದಾರರ ಹೆಸರು ಬೇರೆಬೇರೆ ಮತಗಟ್ಟೆಗಳಿಗೆ ಹಂಚಿಹೋಗಿದೆ. ಮತದಾರರ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಸಾಕಷ್ಟು ಮತದಾರರು ತಮ್ಮ ಹಕ್ಕು ಚಲಾವಣೆಯಿಂದ ದೂರ ಉಳಿಯುವಂತಾಯಿತು. ಗುರುತಿನ ಚೀಟಿ ಇರುವ ನೈಜ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು.

ಚುನಾವಣಾ ಆಯೋಗದ ಅಂತರ್ಜಾಲದಲ್ಲಿರುವ ಮತದಾರರ ಪಟ್ಟಿಗೂ, ಮುದ್ರಿತ ಮತದಾರರ ಪಟ್ಟಿಗೂ ತಾಳೆಯಾಗುತ್ತಿಲ್ಲ. ವಿಚಿತ್ರವೆಂದರೆ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರ ಹೆಸರು ಈ ಬಾರಿಯ ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿದೆ. ಸಾಕಷ್ಟು ಲೋಪದೋಷಗಳು ಈ ಬಾರಿ ಉಂಟಾಗಿದೆ ಎಂದು ರಾಮಲಿಂಗಾ ರೆಡ್ಡಿ ದೂರಿದರು. ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ ಸಂಬಂಧ ಸೂಕ್ತ ತನಿಖೆ ನಡೆಸಿ, ಮುಂದಿನ ದಿನಗಳಲ್ಲಿ ಇಂತಹ ಲೋಪಗಳಿಗೆ ಅವಕಾಶ ನೀಡದಂತೆ ಪ್ರತಿಯೊಬ್ಬ ನಾಗರಿಕನೂ ಮುಕ್ತ ಮತದಾನ ಮಾಡಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಮನವಿ ಮಾಡಿದರು.

ಶ್ರೀಲಂಕಾದಲ್ಲಿನ ಭೀಕರ ಬಾಂಬ್ ಸ್ಫೋಟದಲ್ಲಿ ಕನ್ನಡಿಗರ ಸಾವು ಅತೀವ ನೋವು ತಂದಿದ್ದು, ಸ್ಫೋಟದಲ್ಲಿ ನಾಗರಾಜರೆಡ್ಡಿ ಮೃತಪಟ್ಟಿದ್ದಾರೆ. ಪುರುಷೋತ್ತಮ ರೆಡ್ಡಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರೂ ನಮ್ಮ ಸಂಬಂಧಿಕರು. ಜತೆಗೆ ನಮ್ಮ ಕ್ಷೇತ್ರದವರು. ಇದೊಂದು ದುರದೃಷ್ಟಕರ ಘಟನೆ

-ರಾಮಲಿಂಗಾರೆಡ್ಡಿ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News