ಸಿರಿವಂತ ಮನೆಯ ಬಡ ಸೊಸೆ ‘ಅಕ್ಷರ ಸಂಸ್ಕೃತಿ’: ಕೆ.ಎಸ್.ನಿಸಾರ್ ಅಹಮದ್

Update: 2019-04-23 15:36 GMT

ಬೆಂಗಳೂರು, ಎ.23: ನೂತನ ಮಾಧ್ಯಮಗಳ ಮುಂದೆ, ಅಕ್ಷರ ಸಂಸ್ಕೃತಿಯೂ ಸಿರಿವಂತರ ಮನೆಯ ಬಡ ಸೊಸೆಯಂತೆ ಆಗಿದೆ ಎಂದು ನಾಡೋಜ, ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅಭಿಪ್ರಾಯಪಟ್ಟರು.

ಮಂಗಳವಾರ ಇಲ್ಲಿನ ಗಾಂಧಿನಗರದ ಸಪ್ನ ಬುಕ್ ಹೌಸ್‌ನಲ್ಲಿ ವಿಶ್ವ ಪುಸ್ತಕ ದಿನದ ಪ್ರಯುಕ್ತ ಏರ್ಪಡಿಸಿದ್ದ, ಪುಸ್ತಕ ಲೋಕಾರ್ಪಣೆ ಹಾಗೂ ನೆಚ್ಚಿನ ಸಾಹಿತಿಗಳೊಂದಿಗೆ ಚರ್ಚೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ, ದೊಡ್ಡ ಸಂಖ್ಯೆಯಲ್ಲಿ ಪುಸ್ತಕಗಳು ಮಾರಾಟವಾಗುತ್ತಿರುವುದು ಆಶ್ಚರ್ಯ ತಂದಿದೆ. ಅಷ್ಟೇ ಅಲ್ಲದೆ, ಶಿಕ್ಷಕರು ಹಾಗೂ ಸಮಾಜದ ಗಣ್ಯ ವ್ಯಕ್ತಿಗಳು ಮಾತ್ರ ಪುಸ್ತಕ ಬೇರೆಯುವ ಕಾಲವಿತ್ತು. ಆದರೆ, ಈಗ ಬೇರೆಯ ವೃತ್ತಿಯಲ್ಲಿರುವವರು ಕೂಡಾ ಪುಸ್ತಕ ಬರೆಯುತ್ತಿರುವುದರಿಂದ ಕನ್ನಡ ಸಾಹಿತ್ಯಕ್ಕೆ ಹೊಸ ಕಳೆ ಬಂದಿದೆ ಎಂದರು.

ಈಗ ಪುಸ್ತಕಗಳು ಅಂದ ಚಂದವಾಗಿ ರೂಪಗೊಳ್ಳುತ್ತಿದ್ದು ಮುದ್ರಣದಲ್ಲಿ ಅಮೋಘವಾದ ಕೆಲಸವಾಗುತ್ತಿದೆ. ಕನ್ನಡ ಪುಸ್ತಕದ ಮಾರುಕಟ್ಟೆ ವಿಸ್ತಾರವಾಗಿರುವುದರಿಂದ ಕನ್ನಡ ಸಾಹಿತ್ಯದಲ್ಲಿ ವೈವಿಧ್ಯತೆ ಹೆಚ್ಚಾಗಿದೆ. ಯುವ ಜನತೆ ಪುಸ್ತಕ ಓದುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಕೊಂಡಾಡುವುದಕ್ಕಿಂತ ಕೊಂಡುಕೊಳ್ಳಬೇಕು ಎಂದು ನಿಸಾರ್ ಅಹಮದ್ ನುಡಿದರು.

ಹಿರಿಯ ಸಾಹಿತಿ ಎಚ್.ಡುಂಡಿರಾಜ್ ಮಾತನಾಡಿ, ಲೇಖಕನಾಗಬೇಕೆಂದರೆ ಕನ್ನಡ ಎಂ.ಎ ಮಾಡಬೇಕಾಗಿಲ್ಲ. ಯಾವುದೇ ವೃತ್ತಿಯಲ್ಲಿ ಇದ್ದರೂ ಕನ್ನಡದಲ್ಲಿ ಕವಿಯಾಗಬಹುದು, ಅಂತಹ ಶಕ್ತಿ ಕನ್ನಡ ಭಾಷೆಯಲ್ಲಿ ಇದೆ. ಕನ್ನಡ ಓದುಗರು ಎಲ್ಲರನ್ನು ಪ್ರೋತ್ಸಾಹಿಸುತ್ತಾರೆ, ಅದಕ್ಕೆ ನಾನೇ ಉದಾಹರಣೆ. ನನ್ನ ನಿರೀಕ್ಷೆಗಿಂತ ಹೆಚ್ಚಿನ ಗೌರವವನ್ನು ಓದುಗರು ನೀಡಿದ್ದಾರೆ ಎಂದು ತಿಳಿಸಿದರು.

ಲೋಕಾರ್ಪಣೆ: ಡಾ.ಕೆ. ಶಿವರಾಮ ಕಾರಂತರ ಮರು ಮುದ್ರಣಗೊಂಡ ಚಾಲುಕ್ಯ ವಾಸ್ತುಶಿಲ್ಪ ಸೇರಿದಂತೆ, ಮಹಿಳೆಯರ ಮನೋವ್ಯಾಕುಲತೆ, ಹನಿ ನೀರಾವರಿ, ಕಲ್ಹಣನ ರಾಜ ತರಂಗಿಣಿ, ವೈದ್ಯಕೀಯ ವೈರುಧ್ಯಗಳು ಮತ್ತು ಅನುವಂಶೀಯ ಕಾಯಿಲೆಗಳು ಎಂಬ ಪುಸ್ತಕಗಳನ್ನು ಲೋಕಾಪರ್ಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪೊಲೀಸ್ ಪುಸ್ತಕ ಬರೆಯುವೆ

ಪೊಲೀಸ್ ಇಲಾಖೆ ಮತ್ತು ಅಲ್ಲಿ ಸೇವೆ ಸಲ್ಲಿಸಿದ ಕುರಿತು ಪುಸ್ತಕ ಬರೆಯುವ ಹಂಬಲ ನನಗೆ ಇದೆ. ಮುಂದಿನ ದಿನಗಳಲ್ಲಿ ಪುಸ್ತಕ ಹೊರತರುವ ನಿರ್ಧಾರ ಮಾಡಿದ್ದೇನೆ.

-ರವಿ ಡಿ.ಚನ್ನಣ್ಣನವರ್, ಪೊಲೀಸ್ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News