ಯುವಕನ ಮೇಲೆ ಪೊಲೀಸರಿಂದ ಥಳಿತ ಪ್ರಕರಣ: ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Update: 2019-04-23 15:50 GMT

ಬೆಂಗಳೂರು, ಎ.23: ಉದ್ದೇಶಪೂರ್ವಕವಾಗಿ ಯುವಕ ಮುಹಮ್ಮದ್ ತನ್ವೀರ್ ಗೆ ಥಳಿಸಿರುವ ಆರೋಪ ಪ್ರಕರಣ ಸಂಬಂಧ ನಗರದ ಡಿಜಿ ಹಳ್ಳಿ ಠಾಣಾ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ಥನ ಪೋಷಕರು ಗೃಹ ಸಚಿವರಲ್ಲಿ ಮನವಿ ಮಾಡಿದರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂತ್ರಸ್ಥ ತನ್ವೀರ್ ಸಹೋದರ ಮುಹಮ್ಮದ್ ಮುಸ್ಸಾಪೀರ್, ಈಗಾಗಲೇ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಡಿಜೆ ಹಳ್ಳಿ ಪಿಎಸ್ಸೈ ಸಂತೋಷ್‌ ಕುಮಾರ್, ಪೇದೆ ಅಯ್ಯಪ್ಪ ಎಂಬುವರನ್ನು ಅಮಾನತು ಮಾಡಿದ್ದಾರೆ. ಆದರೆ, ಇನ್ನುಳಿದ ಏಳು ಜನ ಪೊಲೀಸರನ್ನು ಅಮಾನತು ಮಾಡುವ ಜೊತೆಗೆ, ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು.

ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಅಯ್ಯಪ್ಪ ಮತ್ತು ಪಿಎಸ್‌ಐ ಸಂತೋಷ್‌ಕುಮಾರ್ ಲಾಠಿ ಮತ್ತು ರಾಡ್‌ನಿಂದ ಹಲ್ಲೆ ಮಾಡಿದ್ದು, ತನ್ವೀರ್ ಅವರನ್ನು ಕ್ವೀನ್ಸ್‌ರಸ್ತೆಯ ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ವೀರ್‌ನ ಕಿಡ್ನಿ ಸೇರಿದಂತೆ ದೇಹದ ಹಲವು ಅಂಗಾಂಗಗಳಿಗೆ ಹಾನಿಯಾಗಿದೆ ಎಂದು ಕಣ್ಣೀರು ಹಾಕಿದರು.

ಏನಿದು ಪ್ರಕರಣ?: ಮುಹಮ್ಮದ್ ತನ್ವೀರ್ ಅವರ ತಂದೆಗೆ ಔಷಧಿ ತರಲು ಎಪ್ರಿಲ್ 10ರಂದು ಅವರ ಗೆಳೆಯನೊಂದಿಗೆ ಬೈಕ್‌ನಲ್ಲಿ ಎಂ.ಎಂ ಲೇಔಟ್ ಮಾರ್ಗವಾಗಿ ಹೋಗುವಾಗ, ಡಿ.ಜೆ ಹಳ್ಳಿಯ ಪೊಲೀಸರು ಅಡ್ಡಗಟ್ಟಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದರು. ಆತ ಅಮ್ಮನ ಜೊತೆ ಮಾತನಾಡುತ್ತಿದ್ದೇನೆ, ಅಪ್ಪನಿಗೆ ಔಷಧಿ ತರಬೇಕಿದೆ ಎಂದರೂ ಬಿಡದೆ ಪೊಲೀಸರು ಹೊಯ್ಸಳದಲ್ಲಿ ಬಲಂವಂತವಾಗಿ ಠಾಣೆಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

'ಕಠಿಣ ಕ್ರಮ ತೆಗೆದುಕೊಳ್ಳಿ'

ಕಾನ್‌ಸ್ಟೆಬಲ್ ಅಯ್ಯಪ್ಪ ಮತ್ತು ಪಿಎಸ್‌ಐ ಸಂತೋಷ್‌ಕುಮಾರ್ ಅವರನ್ನು ಅಮಾನತು ಮಾಡಲಾಗಿದೆಯಾದರೂ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ. ತನ್ವೀರ್‌ಗೆ ಶ್ವಾಸಕೋಶ ಸಂಬಂಧಿಸಿದಂತೆ ದೇಹದ ತೊಡೆ ಭಾಗ ಮತ್ತು ಕಿಡ್ನಿಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ನ್ಯಾಯ ಒದಗಿಸಬೇಕು, ತನ್ವೀರ್‌ಗೆ ಸರಕಾರಿ ಕೆಲಸ ನೀಡಬೇಕು ಎಂದು ಮುಸ್ಸಾಪೀರ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News