ವನ್ಯಜೀವಿಗಳಿಗೆ 2 ಲಕ್ಷ ಲೀಟರ್ ಕಾವೇರಿ ನೀರು ನೀಡುವಂತೆ ಜಲಮಂಡಳಿಗೆ ಮನವಿ

Update: 2019-04-28 16:35 GMT

ಬೆಂಗಳೂರು, ಎ.28: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚುತ್ತಿದ್ದು, ಈ ಬೇಸಿಗೆಯಲ್ಲಿ ಫಿಲ್ಟರ್‌ಗಳಲ್ಲೂ ನೀರಿಲ್ಲದ ಪರಿಸ್ಥಿತಿ ಬಂದಿದೆ. ಭವಿಷ್ಯದಲ್ಲಿ ಸಮಸ್ಯೆ ಹೆಚ್ಚದಿರುವಂತೆ ಮಾಡಲು ಕುಡಿಯಲು ಹಾಗೂ ವನ್ಯಜೀವಿಗಳ ಬಳಕೆಗೆ ಪ್ರತಿ ದಿನ 2 ಲಕ್ಷ ಲೀಟರ್ ಕಾವೇರಿ ನೀರು ನೀಡುವಂತೆ ಜಲಮಂಡಳಿಗೆ ಮನವಿ ಸಲ್ಲಿಸಲಾಗಿದೆ.

ಉದ್ಯಾನದಲ್ಲಿರುವ 7 ಕೆರೆಗಳ ಪೈಕಿ ಕಾವಲ್‌ಕೆರೆ, ಬಂಡೆಕರೆ ಹಾಗೂ ಬೆನಕನಕೆರೆಗ ಳಿಂದ ಹೆಚ್ಚು ನೀರು ದೊರೆಯುತ್ತದೆ. ಬೇಸಿಗೆಯಲ್ಲಿ ಈ ಕೆರೆಗಳ ನೀರಿನ ಪ್ರಮಾಣ ಕಡಿಮೆಯಾಗಿದೆ. 12 ಬೋರ್‌ವೆಲ್‌ಗಳಿದ್ದರೂ 6 ಬೋರ್‌ವೆಲ್‌ಗಳಿಂದ ಅಲ್ಪ ಪ್ರಮಾಣದ ನೀರು ದೊರೆಯುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ಉದ್ಯಾನಕ್ಕೆ ಭೇಟಿ ನೀಡುವವರಿಗೆ ಕುಡಿಯಲು ಇಟ್ಟಿರುವ ಫಿಲ್ಟರ್ ಹಾಗೂ ಕೊಳವೆಯಲ್ಲಿ ನೀರು ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಣಿ, ಪಕ್ಷಿಗಳಿಗೆ ಅಧಿಕ ನೀರು ಬೇಕಾಗುತ್ತಿದೆ. ಉದ್ಯಾನದಲ್ಲಿ ವರ್ಷಕ್ಕೆ 625 ರಿಂದ 750 ಮಿ.ಮೀ. ಮಳೆ ಸುರಿಯುತ್ತದೆ. ಈ ಮಳೆಯ ನೀರಿನಿಂದ ತುಂಬುವ ಕೆರೆ ಹಾಗೂ ಬೋರ್‌ವೆಲ್‌ನಿಂದ ಇಡೀ ವರ್ಷ ಪ್ರಾಣಿಗಳಿಗೆ ಹಾಗೂ ಭೇಟಿ ನೀಡುವವರಿಗೆ ನೀರು ನೀಡಬೇಕಿದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ನಷ್ಟಾಗುತ್ತದೆ. ಇದರಿಂದಾಗಿ ನೀರು ಬೇಗನೆ ಬತ್ತಿಹೋಗುತ್ತಿದೆ. 

ನೀರಿನ ಅತಿಯಾದ ಬೇಡಿಕೆ: ಉದ್ಯಾನಕ್ಕೆ ಭೇಟಿ ನೀಡುವವರಿಗೆ 1 ರೂ.ಗೆ 1 ಲೀಟರ್ ನೀಡುವ ಶುದ್ಧ ಕುಡಿಯುವ ನೀರಿನ ಘಟಕ ಇದೆ. ಇನ್ನೊಂದು ಘಟಕ ನಿರ್ಮಾಣವಾಗುತ್ತಿದೆ. ನೀರಾನೆಗಳಿಗಾಗಿ ನಿರ್ಮಿಸಿದ ಎರಡು ಬೃಹತ್ ಸಿಮೆಂಟ್ ಟ್ಯಾಂಕ್‌ಗಳಲ್ಲಿ ಆಗಾಗ್ಗೆ ನೀರು ಬದಲಿಸಬೇಕಾಗುತ್ತದೆ. ಆಮೆ, ಮೊಸಳೆ ಹಾಗೂ ಹಕ್ಕಿಗಳಿಗೆ ಪ್ರತ್ಯೆಕವಾದ ಕೊಳಗಳಿದ್ದು, ಇದಕ್ಕೂ ಹೆಚ್ಚು ನೀರು ಅಗತ್ಯವಿದೆ. ಎರಡು ಹುಲಿಗಳಿರುವ ಜಾಗದಲ್ಲಿ ಸಣ್ಣ ಕೊಳ ನಿರ್ಮಿಸಲಾಗಿದೆ. ಈ ನೀರನ್ನು ಆಗಾಗ್ಗೆ ಬದಲಿಸಬೇಕಾಗುತ್ತದೆ.

ಪೈಪ್ ಅಳವಡಿಕೆ ಕಷ್ಟ: ಬನ್ನೆರುಘಟ್ಟ ಜಲಮಂಡಳಿಯ ವ್ಯಾಪ್ತಿಗೆ ಬರುವುದಿಲ್ಲ. ನಗರದ ಅಂಚಿನಲ್ಲಿರುವ ಈ ಪ್ರದೇಶಕ್ಕೆ ಪ್ರತ್ಯೆಕವಾಗಿ ಕೊಳವೆ ಅಳವಡಿಸುವುದು ಕಷ್ಟ. ಆನೇಕಲ್ ಹಾಗೂ ಸೂರ್ಯನಗರಕ್ಕೆ ನೀರು ಪೂರೈಸಲು ಜಲಮಂಡಳಿಯು ಕೊಳವೆ ಅಳವಡಿಸಿದೆ. ಈ ಕೊಳವೆಯ ಸಂಪರ್ಕದಿಂದ ಮತ್ತೊಂದು ಕೊಳವೆಯನ್ನು ಜೋಡಿಸಿ ಬನ್ನೆರುಘಟ್ಟ ಉದ್ಯಾನಕ್ಕೆ ಸಂಪರ್ಕ ಕಲ್ಪಿಸಬಹುದು. ಆದರೆ ಇದು ವೆಚ್ಚದಾಯಕ ಯೋಜನೆಯಾಗಲಿದೆ. ಆದ್ದರಿಂದ ಈ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸುವ ಬಗ್ಗೆ ಜಲಮಂಡಳಿ ಅಧಿಕಾರಿಗಳು ಚರ್ಚೆ ಮಾಡಿದ್ದಾರೆ.

ಬನ್ನೆರುಘಟ್ಟ ಉದ್ಯಾನಕ್ಕೆ ಪೈಪ್ ಅಳವಡಿಸಿ ಕಾವೇರಿ ನೀರು ಪೂರೈಸಬೇಕಿದೆ. ಇದಕ್ಕಾಗಿ ಪ್ರತ್ಯೆಕ ಯೋಜನೆ ರೂಪಿಸಬೇಕಾಗುತ್ತದೆ. ಈ ವಿಚಾರದಲ್ಲಿ ಜಲಮಂಡಳಿಯೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಸರಕಾರಕ್ಕೆ ಪ್ರಸ್ತಾವ ಕಳುಹಿಸುವ ಬಗ್ಗೆ ಯೋಚಿಸಿದ್ದೆವೆ ಎಂದು ಜಲಮಂಡಳಿಯ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಸಿ.ಗಂಗಾಧರ್ ತಿಳಿಸಿದ್ದಾರೆ.

2.5 ಲಕ್ಷ ಲೀಟರ್ ಬೇಡಿಕೆ: ಕುಡಿಯಲು ಹಾಗೂ ಪ್ರಾಣಿಗಳ ಇತರೆ ಬಳಕೆಗೆ ಸೇರಿ ಪ್ರತಿ ದಿನ 2.5 ಲಕ್ಷ ಲೀಟರ್ ನೀರು ಬೇಕಿದೆ. ಕೆಲವೇ ವರ್ಷಗಳಲ್ಲಿ ನೀರಿನ ಬೇಡಿಕೆ ಪ್ರಮಾಣ 5 ಲಕ್ಷ ಲೀಟರ್ ತಲುಪಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ಬೋರ್‌ವೆಲ್‌ಗಾಗಿ 900 ಅಡಿ ಕೊರೆದರೂ ಉದ್ಯಾನದಲ್ಲಿ ನೀರು ಸಿಗುತ್ತಿಲ್ಲ. ಇವೆಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಪ್ರತಿ ದಿನ 2 ಲಕ್ಷ ಲೀಟರ್ ಕಾವೇರಿ ನೀರು ಪೂರೈಸಲು ಮನವಿ ಮಾಡಲಾಗಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾದಾಗ ಖಾಸಗಿ ಟ್ಯಾಂಕರ್‌ಗಳಿಂದ ನೀರು ತರಿಸಿಕೊಳ್ಳಲಾಗುತ್ತಿದ್ದು, ಹೊರೆಯಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News