ಎಂ.ಬಿ.ಪಾಟೀಲ್ ವಿರುದ್ಧ ಕೇಂದ್ರ ಗೃಹಸಚಿವರಿಗೆ ಶೋಭಾ ಕರಂದ್ಲಾಜೆ ದೂರು

Update: 2019-04-29 16:26 GMT

ಬೆಂಗಳೂರು, ಎ.29: ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ರಾಜ್ಯ ಸರಕಾರವು ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಗುರಿಯನ್ನಾಗಿಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುತ್ತಿದೆ. ಈ ಸಂಬಂಧ ಕೂಡಲೆ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ಗೆ ಸಂಸದೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ.ಪಾಟೀಲ್, ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಗೆ ಬರೆದಿದ್ದಾರೆ ಎನ್ನಲಾದ ಪತ್ರದ ವಿಚಾರವನ್ನು ಮುಂದಿಟ್ಟುಕೊಂಡು, ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಗುರಿಯನ್ನಾಗಿಸಲಾಗುತ್ತಿದೆ ಎಂದು ಅವರು ಪತ್ರದಲ್ಲಿ ದೂರಿದ್ದಾರೆ.

ಎಂ.ಬಿ.ಪಾಟೀಲ್ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ವೈಯಕ್ತಿಕ ವಿಷಯಗಳಿಗೆ ರಾಜ್ಯದ ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಬಿಜೆಪಿ ಬೆಂಬಲಿಗರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ, ಬಂಧಿಸಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಎಂ.ಬಿ.ಪಾಟೀಲ್ ನೀಡಿದ ದೂರನ್ನು ಆಧರಿಸಿ, ಅವರ ಒತ್ತಡಕ್ಕೆ ಮಣಿದು ಪೊಲೀಸರು, ಪೋಸ್ಟ್ ಕಾರ್ಡ್ ವೆಬ್‌ಸೈಟ್ ಮಾಲಕ ಮಹೇಶ್ ವಿಕ್ರಮ್ ಹೆಗಡೆಯನ್ನು ವಶಕ್ಕೆ ಪಡೆದು ಎರಡು ದಿನಗಳ ಕಾಲ ವಿಚಾರಣೆಗೊಳಪಡಿಸಿ, ಬಿಡುಗಡೆ ಮಾಡಿದ್ದಾರೆ. ಇದೀಗ ಎ.27ರಂದು ಬಿಜೆಪಿ ಕಚೇರಿಯಲ್ಲಿ ಪಕ್ಷದ ಬೆಂಬಲಿಗ, ಪತ್ರಕರ್ತ ಹೇಮಂತ್ ಕುಮಾರ್ ಅನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಪಕ್ಷದ ಹಿರಿಯ ನಾಯಕರು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರನ್ನು ಭೇಟಿಯಾಗಿ, ಈ ಪ್ರಕರಣಗಳ ಕುರಿತು ಪ್ರಶ್ನಿಸಿದರೆ, ಅವರಿಂದ ತೃಪ್ತಿಕರವಾದ ಉತ್ತರವು ಲಭಿಸಿಲ್ಲ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ. ಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್, ಆಡಳಿತರೂಢ ಕಾಂಗ್ರೆಸ್ ಪಕ್ಷದ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರ ಪತಿ ಎಂಬ ವಿಷಯವನ್ನು ಶೋಭಾ ಕರಂದ್ಲಾಜೆ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News