ಸರಕಾರದ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Update: 2019-04-29 14:11 GMT

ಬೆಂಗಳೂರು, ಎ.29: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಬಿಬಿಎಂಪಿಗೆ ‘ನವ ಬೆಂಗಳೂರು’ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು ಎಂದು ಬಿಜೆಪಿ ಆಗ್ರಹಿಸಿದೆ.

ಈ ಸಂಬಂಧ ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ಗೆ ದೂರು ನೀಡಿದ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದ ನಿಯೋಗ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 25ರವರೆಗೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾವುದೇ ಹೊಸ ಕಾಮಗಾರಿಗಳನ್ನು ಪ್ರಾರಂಭಿಸುವಂತಿಲ್ಲ ಎಂದು ತಿಳಿಸಿತು.

ಪ್ರಕೃತಿ ವಿಕೋಪದಂತಹ ಅನಿವಾರ್ಯ ಕಾರಣ ಹೊರತುಪಡಿಸಿ, ಇನ್ಯಾವುದೇ ಕಾಮಗಾರಿಯನ್ನು ಆರಂಭಿಸಬಾರದು ಎಂದು ಚುನಾವಣಾ ನೀತಿ ಸಂಹಿತೆ ಸ್ಪಷ್ಟವಾಗಿ ಹೇಳಿದೆ. ಆದರೂ, ಬಿಬಿಎಂಪಿ 4261 ಕೋಟಿ ರೂ.ಮೊತ್ತದ ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ ಟೆಂಡರ್ ಕರೆಯದೆ, ಏಕಾಏಕಿ ಕೆಆರ್‌ಐಡಿಎಲ್ ಸಂಸ್ಥೆಗೆ ಕಾಮಗಾರಿ ಪ್ರಾರಂಭಿಸಲು ಅನುಮತಿ ಕೊಟ್ಟಿರುವುದು ನಿಯಮ ಬಾಹಿರ ಹಾಗೂ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ದೂರಿದೆ.

ಎರಡು ಕೋಟಿ ರೂ.ಗಳಿಗಿಂತಲೂ ದೊಡ್ಡ ಮೊತ್ತದ ಕಾಮಗಾರಿಯನ್ನು ಟೆಂಡರ್ ಕರೆಯದೆ ನೇರವಾಗಿ ಯಾರಿಗೂ ಹಾಗೂ ಯಾವ ಸಂಸ್ಥೆಗೂ ವಹಿಸುವಂತಿಲ್ಲ ಎಂಬ ನಿಯಮವನ್ನು ಗಾಳಿಗೆ ತೂರಲಾಗಿದೆ. ಇಂತಹ ಬೃಹತ್ ಮೊತ್ತದ ಕಾಮಗಾರಿಯನ್ನು ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸದೆ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆ(ಕೆಆರ್‌ಐಡಿಎಲ್)ಗೆ ಕೊಟ್ಟಿರುವುದು, ಕಾನೂನು ಬಾಹಿರವಾಗಿದೆ ಮತ್ತು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರಕಾರದ ಅಭ್ಯರ್ಥಿಗಳ ಖರ್ಚಿಗೆ ಹಣವನ್ನು ಕೊಟ್ಟ ಗುತ್ತಿಗೆದಾರರಿಗೆ ಅನುಕೂಲವಾಗಲೆಂಬ ಕಾರಣಕ್ಕೆ ಆತುರಾತುರವಾಗಿ ಟೆಂಡರ್ ಕರೆಯದೆ ಗುತ್ತಿಗೆ ನೀಡಲಾಗಿದೆ ಎಂದೆನಿಸುತ್ತದೆ. ಈ ಎಲ್ಲ ಸಂಗತಿಗಳನ್ನು ಗಮನಿಸಿ ಕೂಡಲೇ ಈ ಕಾಮಗಾರಿಗೆ ಕೊಟ್ಟ ಅನುಮತಿಯನ್ನು ರದ್ದುಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಬಿಜೆಪಿ ನಿಯೋಗ ಮನವಿ ಮಾಡಿದೆ.

ನಿಯೋಗದಲ್ಲಿ ಬಿಜೆಪಿ ಸಹ ವಕ್ತಾರ ಎ.ಎಚ್.ಆನಂದ್, ಚುನಾವಣಾ ಸಮಿತಿಯ ರಾಜ್ಯ ಸಂಚಾಲಕ ದತ್ತಗುರು ಹೆಗಡೆ ಹಾಗೂ ಮುಖಂಡ ಛಲವಾದಿ ನಾರಾಯಣಸ್ವಾಮಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News