ದೇಶ ಸಾಮಾಜಿಕವಾಗಿ ತಲೆ ತಗ್ಗಿಸುವಂತಾಗಿದೆ: ಬಂಜಗೆರೆ ಜಯಪ್ರಕಾಶ್

Update: 2019-04-29 14:46 GMT

ಬೆಂಗಳೂರು, ಎ.29: ಭಾರತವು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ವಿಶ್ವದ ಎದುರು ಬೃಹತ್ ಶಕ್ತಿಯಾಗಿ ಬೆಳೆದಿದ್ದರೂ, ಸಾಮಾಜಿಕವಾಗಿ ತಲೆ ತಗ್ಗಿಸುವಂತ ಸ್ಥಿತಿಯಿದೆ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಿಂದ ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 128 ನೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶ್ವದಾದ್ಯಂತ ನಮ್ಮ ದೇಶವು ರಾಜಕೀಯ ಹಾಗೂ ಆರ್ಥಿಕ ಚರಿತ್ರೆಯಲ್ಲಿ ದೊಡ್ಡ ಶಕ್ತಿಯಂತೆ ಕಂಡುಬರುತ್ತಿದೆ. ಆದರೆ, ಸಾಮಾಜಿಕ ಪ್ರಶ್ನೆ ಬಂದಾಗ ತಲೆ ತಗ್ಗಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂದಿಗೂ ನಮ್ಮಲ್ಲಿ ಜಾತಿಯ ಶ್ರೇಣಿಕೃತ ವ್ಯವಸ್ಥೆಯಿದೆ ಎಂದು ಹೇಳಿದರು. ಜಾತಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ಹುಟ್ಟಿನಿಂದಲೇ ಗೌರವ ಮತ್ತು ಅಗೌರವ ಸೂಚಕವನ್ನು ಕಟ್ಟಿಕೊಡಲಾಗುತ್ತಿದೆ. ಶ್ರಮ ಸಂಸ್ಕೃತಿಯನ್ನು ಕಡೆಗಣಿಸಲಾಗುತ್ತಿದೆ ಎಂದ ಅವರು, ದುಡಿಮೆಗೆ ಗೌರವವನ್ನು ನಿರ್ಧರಿಸಬೇಕು ಹೊರತು, ಶ್ರೇಣಿಕರಣವನ್ನು ಕಟ್ಟಬಾರದು ಎಂದು ಅಭಿಪ್ರಾಯಪಟ್ಟರು.

ಗೌತಮ ಬುದ್ಧ ಶಾಕ್ಯ ಮತ್ತು ಗಣ ಪಂಥದಲ್ಲಿನ ಸಂಘರ್ಷದಲ್ಲಿ ಬದುಕಲು ಇಷ್ಟವಿಲ್ಲದೆ, ಶಾಕ್ಯರ ವ್ಯವಸ್ಥೆಯನ್ನು ಧಿಕ್ಕರಿಸಿ ಹೊರ ನಡೆದ ಬಳಿಕ ಜ್ಞಾನೋದಯವನ್ನು ಪಡೆದುಕೊಂಡರು. ಅವರಿಗಿದ್ದ ಖಾಯಿಲೆಗಳು, ಸಾವು, ಯೌವನದಿಂದಲ್ಲ ಎಂದ ಜಯಪ್ರಕಾಶ್ ನುಡಿದರು.

ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಮಹಿಳೆಯರ ಸಬಲೀಕರಣಕ್ಕೆ ಮಾಡಿದ ಪ್ರಯತ್ನಗಳು ಅವರ ಕಾಲದಲ್ಲಿಯೇ ಫಲವನ್ನು ನೀಡದಿದ್ದರೂ, ಇಂದು ಮಹಿಳೆಯರಿಗೆ ದೊರೆತಿರುವ ಪ್ರಾತಿನಿಧ್ಯಗಳು ಅವರು ಅಂದು ಮಾಡಿದ ಪ್ರಯತ್ನಗಳ ಫಲವಾಗಿದೆ. ಅಂಬೇಡ್ಕರ್‌ರನ್ನು ಅನುಸರಿಸುವವರಿಂದ ಆರಂಭವಾಗಿ ದೇಶವನ್ನಾಳುವ ಜನಪ್ರತಿನಿಧಿಗಳು, ಸರಕಾರಗಳು ಸೇರಿದಂತೆ ಪ್ರತಿಯೊಬ್ಬರೂ ಅವರ ಜೀವನವನ್ನು ಗಂಭೀರವಾಗಿ ಓದಬೇಕು. ಆ ಮೂಲಕ ಅಂಬೇಡ್ಕರ್ ಚಿಂತನೆಗಳಿಗೆ ಮುಖಾಮುಖಿಯಾದರೆ ಇಂದಿನ ಅನೇಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಬೆಂಗಳೂರು ವಿವಿ ಕುಲಸಚಿವ ಪ್ರೊ.ಬಿ.ಕೆ.ರವಿ ಮಾತನಾಡಿ, ಅಂಬೇಡ್ಕರ್ ಶೋಷಣೆಗೆ ಒಳಗಾದ ಎಲ್ಲ ಸಮುದಾಯಗಳ ಶೋಷಣೆಯ ವಿವಿಧ ಆಯಾಮಗಳನ್ನು ತಮ್ಮ ಅಧ್ಯಯನದ ಮೂಲಕ ಗ್ರಹಿಸಿದ್ದರು. ಅಲ್ಲದೆ, ಅದಕ್ಕೆ ಹಲವಾರು ರೀತಿಯಲ್ಲಿ ಪರಿಹಾರ ಮಾರ್ಗಗಳನ್ನು ಸೂಚಿಸಿದರು ಎಂದು ನುಡಿದರು

ಸಂವಿಧಾನ ರಚನೆಯ ಜವಾಬ್ದಾರಿ ಹೊತ್ತುಕೊಂಡು ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಸೂಚಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಸಂವಿಧಾನದಲ್ಲೇ ಅಂತರ್ಗತಗೊಳಿಸುವ ಮೂಲಕ ಈ ಸಮುದಾಯಗಳು ತಮ್ಮನ್ನು ತಾವೇ ಪ್ರತಿನಿಧಿಸುವ ಅವಕಾಶವನ್ನು ಕಲ್ಪಿಸಿಕೊಟ್ಟರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇತಿಹಾಸ ವಿ ಭಾಗದ ಮುಖ್ಯಸ್ಥೆ ಡಾ.ಎಸ್. ನಾಗರತ್ನಮ್ಮ, ವಿಭಾಗದ ಪ್ರಾಧ್ಯಾಪಕರುಗಳಾದ ಪ್ರೊ.ಜಮುನಾ, ಪ್ರೊ.ಅಶ್ವತ್ಥನಾರಾಯಣ, ಪ್ರೊ.ಷೇಕ್ ಮಸ್ತಾನ್, ಪ್ರೊ.ಉಷಾದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News