ಸೌದಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ: ಟ್ರಂಪ್

Update: 2019-04-29 15:03 GMT

ಗ್ರೀನ್ ಬೇ (ವಿಸ್ಕೋನ್ಸಿನ್), ಎ. 29: ಸೌದಿ ಅರೇಬಿಯಕ್ಕೆ ಅಮೆರಿಕ ನೀಡುತ್ತಿರುವ ಬೆಂಬಲ ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದ ವಿಸ್ಕೋನ್ಸಿನ್ ರಾಜ್ಯದ ಗ್ರೀನ್ ಬೇ ನಗರದಲ್ಲಿ ಶನಿವಾರ ತನ್ನ ಬೆಂಬಲಿಗರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮೆರಿಕದಿಂದ 450 ಬಿಲಿಯ ಡಾಲರ್ (ಸುಮಾರು 31.42 ಲಕ್ಷ ಕೋಟಿ ರೂಪಾಯಿ) ವೌಲ್ಯದ ವಸ್ತುಗಳನ್ನು ಖರೀದಿಸುತ್ತಿರುವ ಮಿತ್ರ ದೇಶವನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ ಎಂದು ಹೇಳಿದರು.

‘‘ಅವರಲ್ಲಿ ಹಣ ಬಿಟ್ಟು ಬೇರೇನೂ ಇಲ್ಲ, ಅಲ್ಲವೇ? ಅವರು ನಮ್ಮಿಂದ ತುಂಬಾ ವಸ್ತುಗಳನ್ನು ಖರೀದಿಸುತ್ತಾರೆ. ಅವರು 450 ಬಿಲಿಯ ಡಾಲರ್ ಮೊತ್ತದ ಸಾಮಗ್ರಿಗಳನ್ನು ಖರೀದಿಸಿದ್ದಾರೆ’’ ಎಂದು ಅಮೆರಿಕದ ಅಧ್ಯಕ್ಷರು ಹೇಳಿರುವುದಾಗಿ ‘ಅಲ್-ಜಝೀರ’ ಸುದ್ದಿವಾಹಿನಿ ವರದಿ ಮಾಡಿದೆ.

‘‘ಸೌದಿ ಅರೇಬಿಯದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಿ ಎಂದು ಹೇಳುವವರಿದ್ದಾರೆ... ಆದರೆ, ಮಿತ್ರ ದೇಶವನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ’’ ಎಂದರು.

ಸೌದಿ ಅರೇಬಿಯದ ದೇಶಭ್ರಷ್ಟ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಯ ಹಿನ್ನೆಲೆಯಲ್ಲಿ, ಅಮೆರಿಕ ಮತ್ತು ಸೌದಿ ಅರೇಬಿಯ ನಡುವಿನ ಸಂಬಂಧವು ಒತ್ತಡಕ್ಕೆ ಒಳಗಾಗಿತ್ತು. ಅಮೆರಿಕದ ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯ ಅಂಕಣಕಾರನ ಕೊಲೆಯಲ್ಲಿ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಪಾತ್ರವಿರುವ ಆರೋಪಗಳ ಹೊರತಾಗಿಯೂ, ಯುವರಾಜನ ಪರವಾಗಿ ನಿಂತಿರುವುದಕ್ಕೆ ಟ್ರಂಪ್ ಭಾರೀ ಟೀಕೆಗೊಳಗಾಗಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News