ಎಸೆಸೆಲ್ಸಿ ಫಲಿತಾಂಶ ಪ್ರಕಟ: ಹಾಸನ ಪ್ರಥಮ, ಯಾದಗಿರಿ ಕೊನೆ ಸ್ಥಾನ

Update: 2019-04-30 12:23 GMT

► ಶೇ.1.77 ರಷ್ಟು ಫಲಿತಾಂಶ ಹೆಚ್ಚಳ
► ಶೇ.79.59 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆ
► 1626 ಶಾಲೆಗಳು ಶೇ.100 ರಷ್ಟು ಫಲಿತಾಂಶ

ಬೆಂಗಳೂರು, ಎ.30: ಪ್ರಸಕ್ತ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶೇ.73.70 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಶೇ.1.77 ರಷ್ಟು ಫಲಿತಾಂಶ ವೃದ್ಧಿಸಿದೆ. ಈ ಬಾರಿ ಶೂನ್ಯ ಫಲಿತಾಂಶದಲ್ಲಿ ಒಂದೂ ಸರಕಾರಿ ಶಾಲೆ ಇಲ್ಲದಿರುವುದು ವಿಶೇಷವಾಗಿದೆ.
ಪ್ರಸಕ್ತ ಸಾಲಿನಲ್ಲಿ ಶೇ.77.84 ರಷ್ಟು ಸರಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಶೇ.77.21 ರಷ್ಟು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶೇ. 82.38 ರಷ್ಟು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರತಿಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇ.79.59 ರಷ್ಟು ವಿದ್ಯಾರ್ಥಿನಿಯರು ಮತ್ತು ಶೇ.68.46 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಬಾರಿಯ ಜಿಲ್ಲಾವಾರು ಫಲಿತಾಂಶಕ್ಕೆ ಉತ್ತೀರ್ಣರಾದ ಪ್ರಮಾಣ, ಗುಣಮಟ್ಟ ಮತ್ತು ಜಿಲ್ಲೆಗಳ ಸರಾಸರಿ ಪರಿಗಣನೆಗೆ ತೆಗೆದುಕೊಂಡು ನಿರ್ಧರಿಸಿದ್ದು, ಈ ಸಾಲಿನಲ್ಲಿ ಶೇಖಡವಾರು ಉತ್ತೀರ್ಣರಾದವರ ಪಟ್ಟಿಯಲ್ಲಿ ಶೇ.89.33 ಹಾಗೂ ಶೇ.88.49 ರಷ್ಟು ವಿದ್ಯಾರ್ಥಿಗಳು ಪಾಸಾಗುವ ಮೂಲಕ ಹಾಸನ, ರಾಮನಗರ ಜಿಲ್ಲೆಗಳು ಮೊದಲಿದ್ದರೆ, ಶೇ.65.33 ಹಾಗೂ ಶೇ.53.95 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣಗೊಳ್ಳುವ ಮೂಲಕ ರಾಯಚೂರು ಹಾಗೂ ಯಾದಗಿರಿ ಕೊನೆ ಸ್ಥಾನದಲ್ಲಿವೆ.

46 ಶಾಲೆಗಳು ಶೂನ್ಯ ಫಲಿತಾಂಶ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಒಟ್ಟು 46 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಅದರಲ್ಲಿ ಅನುದಾನಿತ 9, ಅನುದಾನ ರಹಿತ 37 ಶಾಲೆಗಳಿದ್ದರೆ, ಒಂದೇ ಒಂದು ಸರಕಾರಿ ಶಾಲೆಯೂ ಶೂನ್ಯ ಫಲಿತಾಂಶ ಪಡೆಯದೇ ಇರುವುದು ಉತ್ತಮ ಬೆಳವಣಿಗೆಯಾಗಿದೆ.

1626 ಶಾಲೆಗಳು ಶೇ.100 ಫಲಿತಾಂಶ: ಈ ಬಾರಿ 593 ಸರಕಾರಿ ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿದ್ದರೆ, 130 ಅನುದಾನಿತ, 903 ಖಾಸಗಿ ಶಾಲೆಗಳು ಸೇರಿದಂತೆ ಒಟ್ಟಾರೆಯಾಗಿ 1626 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿವೆ. ಜತೆಗೆ, 2 ವಿದ್ಯಾರ್ಥಿಗಳು 625 ಕ್ಕೆ 625, 11 ವಿದ್ಯಾರ್ಥಿಗಳು 624, 19 ವಿದ್ಯಾರ್ಥಿಗಳು 623, 39 ವಿದ್ಯಾರ್ಥಿಗಳು 622, 43 ವಿದ್ಯಾರ್ಥಿಗಳು 621 ಹಾಗೂ 56 ವಿದ್ಯಾರ್ಥಿಗಳು 620 ಅಂಕಗಳನ್ನು ಪಡೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ: ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದು, 4,54,423 ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ 3,48,409 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ.76.67 ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ 3,71,045 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,59,927 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.70.05 ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.

ಜಿಲ್ಲಾವಾರು ಉತ್ತೀರ್ಣ ಶೇಖಡವಾರು:
ಹಾಸನ-89.33
ರಾಮನಗರ-88.49
ಬೆಂಗಳೂರು ಗ್ರಾಮಾಂತರ-88.34
ಉತ್ತರ ಕನ್ನಡ-88.12
ಉಡುಪಿ-87.97
ಚಿತ್ರದುರ್ಗ-87.46
ಮಂಗಳೂರು-86.73
ಕೋಲಾರ-86.71
ದಾವಣಗೆರೆ-85.94
ಮಂಡ್ಯ-85.65
ಮಧುಗಿರಿ-84.81
ಶಿರಸಿ-84.67
ಚಿಕ್ಕೋಡಿ-84.09
ಚಿಕ್ಕಮಗಳೂರು-82.76
ಚಾಮರಾಜನಗರ-80.58
ಕೊಪ್ಪಳ-80.45
ಮೈಸೂರು-80.32
ತುಮಕೂರು-79.92
ಹಾವೇರಿ-79.75
ಚಿಕ್ಕಬಳ್ಳಾಪುರ-79.69
ಶಿವಮೊಗ್ಗ-79.13
ಕೊಡಗು-78.81
ಬಳ್ಳಾರಿ-77.98
ಬೆಳಗಾವಿ-77.43
ವಿಜಯಪುರ-77.36
ಬೆಂಗಳೂರು ಉತ್ತರ-76.21
ಬಾಗಲಕೋಟೆ-75.28
ಧಾರವಾಡ-75.04
ಬೀದರ್-74.96
ಕಲಬುರಗಿ-74.65
ಗದಗ-74.05
ಬೆಂಗಳೂರು ದಕ್ಷಿಣ-68.83
ರಾಯಚೂರು-65.33
ಯಾದಗಿರಿ-53.95

ಎಸೆಸೆಲ್ಸಿ ಟಾಫರ್ಸ್‌....
1. ಡಿ.ಸೃಜನ-ಆನೇಕಲ್, ಸೆಂಟ್ ಫಿಲೋಮಿನಾ ಇಂಗ್ಲಿಷ್ ಶಾಲೆ(625)
2. ನಾಗಾಂಜಲಿ ಪರಮೇಶ್ವರ ನಾಯ್ಕ-ಕುಮಟಾ, ಕೊಲಬಾ ವಿಠೋಬಾ ಶಾನಭಾಗ ಕಲಭಾಗಕರ್ ಪ್ರೌಢಶಾಲೆ(625)
3. ಯು.ಎಸ್.ಭಾವನ-ಬೆಂಗಳೂರು ಉತ್ತರ, ಸೇಂಟ್ ಜಾನ್ಸ್ ಇಂಗ್ಲಿಷ್ ಪ್ರೌಢಶಾಲೆ(624)
4. ಆರ್.ಭಾವನ-ಬೆಂಗಳೂರು ಉತ್ತರ, ಸೌಂದರ್ಯ ಪ್ರೌಢಶಾಲೆ(624)
5. ಎಸ್.ಸಾಯಿ ರಾಮ್, ಬೆಂಗಳೂರು ಉತ್ತರ, ಲಿಟ್ಟಲ್ ಲಿಲ್ಲೀಸ್ ಪ್ರೌಢಶಾಲೆ(624)
6. ಎಚ್.ವಿ.ಶಾಂಭವಿ, ಬೆಂಗಳೂರು ದಕ್ಷಿಣ, ಸಮಾಜ ಸೇವಾ ಮಂಡಳಿ ಪ್ರೌಢಶಾಲೆ(624)
7. ಸಿ.ಹರ್ಷಿತ, ತುಮಕೂರು, ಶ್ರೀ ಸಿದ್ದಗಂಗಾ ಇಂಗ್ಲಿಷ್ ಪ್ರೌಢಶಾಲೆ(624)
8. ಸಿಂಚನಾ ಲಕ್ಷ್ಮಿ, ಪುತ್ತೂರು, ವಿವೇಕಾನಂದ ಇಂಗ್ಲಿಷ್ ಪ್ರೌಢಶಾಲೆ(624)
9. ಕೆ.ಆರ್.ಕೃಪಾ, ಸುಳ್ಯ, ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ(624)
10. ಅನುಪಮ ಕಾಮತ್, ಬಂಟ್ವಾಳ, ಶ್ರೀ ವೆಂಕಟರಮಣಸ್ವಾಮಿ ಪ್ರೌಢಶಾಲೆ(624)
11. ಚಿನ್ಮಯಿ, ಬಂಟ್ವಾಳ, ವಿಟ್ಟಲ ಜೀಸಸ್ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ(624)
12. ಪ್ರಗತಿ ಎಂ ಗೌಡ, ಹಾಸನ, ವಿಜಯಾ ಪ್ರೌಢಶಾಲೆ(624)
13. ಬಿ.ಅಭಿನ್, ಹಾಸನ, ವಿಜಯಾ ಪ್ರೌಢಶಾಲೆ(624)

ತಂತ್ರಜ್ಞಾನದ ನೆರವು ಹಾಗೂ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ ಸಿಕ್ಕಾಗ ಪರಿಣಾಮಕಾರಿ ಕಾರ್ಯನಿರ್ವಹಣೆ ಸಾಧ್ಯ ಎನ್ನುವುದಕ್ಕೆ ಈ ವರ್ಷದ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಪ್ರಕ್ರಿಯೆ ನಿರ್ವಹಣೆ ನಿದರ್ಶನವಾಗಿದೆ. ರಾಜ್ಯದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಫಲಿತಾಂಶ ತ್ವರಿತವಾಗಿ ಪ್ರಕಟವಾಗುವ ಮೂಲಕ ಪೋಷಕರು ಹಾಗೂ ವಿದ್ಯಾರ್ಥಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ಯಶಸ್ವಿಯಾಗಿ ನಿರ್ವಹಿಸಿದ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಹೃತ್ಪೂರ್ವಕ ಅಭಿನಂದನೆಗಳು.
- ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಎಸೆಸೆಲ್ಸಿಗೆ ಬಂದಾಗ ಓದುವ ಮೂಲಕ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ಕಂಡಿದ್ದೆ. ಅದಕ್ಕಾಗಿ ದಿನವೂ ಶಾಲೆಯಲ್ಲಿ ಹೇಳಿಕೊಟ್ಟಿದ್ದನ್ನು ಮನೆಯಲ್ಲಿ ಮರು ಓದುತ್ತಿದ್ದೆ. ಅದರ ಪ್ರತಿಫಲ ಇಂದು ಸಿಕ್ಕಿದೆ. ಅಲ್ಲದೆ, ನಾನೇ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬರುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಮುಂದೆ ನಾನು ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು ವೈದ್ಯೆಯಾಗಬೇಕು ಎಂದುಕೊಂಡಿದ್ದೇನೆ.
-ನಾಗಾಂಜಲಿ, ಪ್ರಥಮ ರ್ಯಾಂಕ್ (ಕುಮಟ)

ಶಾಲೆಯಲ್ಲಿ ಶಿಕ್ಷಕರು ಮಾಡುತ್ತಿದ್ದ ಪಾಠವನ್ನು ಮನೆಯಲ್ಲಿ ಮತ್ತೆ ಮತ್ತೆ ಓದುತ್ತಿದ್ದೆ, ಅರ್ಥವಾಗದ್ದನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆ. ಪ್ರತಿನಿತ್ಯ ಓದುವುದಕ್ಕಾಗಿಯೇ 7 ಗಂಟೆ ಸಮಯ ಮೀಸಲಿಡುತ್ತಿದ್ದೆ. ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬರುತ್ತೇನೆ ಎಂದುಕೊಂಡಿರಲಿಲ್ಲ. ಆದರೆ, ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿದ್ದೆ. ಮುಂದಿನ ದಿನಗಳಲ್ಲಿ ಎಂಬಿಬಿಎಸ್ ಮಾಡಬೇಕೆಂಬ ಆಸೆಯಿದೆ.
-ಸೃಜನಾ, ಪ್ರಥಮ ರ್ಯಾಂಕ್ (ಬೆಂಗಳೂರು)

ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಬಂದಿರುವುದು ಖುಷಿಯಾಗಿದೆ. ಆದರೆ, ಕನ್ನಡದಲ್ಲಿ 624 ಅಂಕ ಬಂದಿದೆ. ನನಗೆ 625 ಅಂಕ ಬರುತ್ತದೆ ಎಂದು ನಿರೀಕ್ಷೆ ಮಾಡಿದ್ದೆ. ಹೀಗಾಗಿ, ಅದನ್ನು ಮರು ವೌಲ್ಯಮಾಪನ ಮಾಡಿಸಬೇಕು ಎಂದುಕೊಂಡಿದ್ದೇನೆ. ಮುಂದೆ ಐಐಟಿಯಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಬೇಕೆಂದುಕೊಂಡಿದ್ದೇನೆ.
-ಪ್ರಗತಿ ಎಂ. ಗೌಡ, ದ್ವಿತೀಯ ರ್ಯಾಂಕ್ (ಹಾಸನ)

ನಮ್ಮದು ಕೃಷಿ ಕುಟುಂಬ. ತಂದೆ-ತಾಯಿ ಕೃಷಿ ಮಾಡಿಯೇ ಓದಿಸಿದ್ದಾರೆ. ಅವರಿಗೆ ನಾನು ಓದಿನಲ್ಲಿ ಏನಾದರೂ ಸಾಧನೆ ಮಾಡಿ, ಅವರಿಗೆ ಖುಷಿ ಪಡಿಸಬೇಕು ಎನ್ನಿಸಿತು. ಶ್ರಮಪಟ್ಟು ಓದಿದೆ. ಅದರ ಪ್ರತಿಫಲ ಇಂದು ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಬರಲು ಸಾಧ್ಯವಾಗಿದೆ. ಮುಂದೆ ಕಂಪ್ಯೂಟರ್ ಸೈನ್ಸ್ ಮಾಡಿ ಸಂಶೋಧಕಿ ಆಗಬೇಕೆಂಬ ಕನಸು ಹೊತ್ತಿದ್ದೇನೆ.
-ಚಿನ್ಮಯಿ, ದ್ವಿತೀಯ ರ್ಯಾಂಕ್ (ಬಂಟ್ವಾಳ)

ಎಸೆಸೆಲ್ಸಿಯಲ್ಲಿ 623 ಅಂಕ ಪಡೆಯುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ, ಪರೀಕ್ಷೆ ಬರೆಯುವಾಗ ಭಯವಿತ್ತು. ೆಷಕರು ಇಷ್ಟೇ ಅಂಕ ಬರಬೇಕು ಎಂದು ಒತ್ತಡ ಹಾಕಿರಲಿಲ್ಲ. ಪೋಷಕರು ಮತ್ತು ಶಿಕ್ಷಕರ ಸಹಕಾರದಿಂದ ಪಿಯುಸಿಯಲ್ಲಿ ವಾಣಿಜ್ಯ ವಿಭಾಗ ಸೇರಿ ಸಿಎ ಆಗಬೇಕೆಂದುಕೊಂಡಿದ್ದೇನೆ.
-ಸಮಿತ್, ತೃತೀಯ ರ್ಯಾಂಕ್

                                      (ಸೃಜನಾ)

                                         (ನಾಗಾಂಜಲಿ)

                          (ಅನುಪಮ ಕಾಮತ್, ಚಿನ್ಮಯಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News