ಗುತ್ತಿಗೆದಾರರಿಂದ ಕಾರ್ಮಿಕರ ಶೋಷಣೆ: ಎಚ್.ಕೆ.ಪಾಟೀಲ್

Update: 2019-05-02 14:20 GMT

ಬೆಂಗಳೂರು, ಮೇ 2: ವಿಧಾನಸೌಧದಲ್ಲಿ ಸೇವೆ ಸಲ್ಲಿಸುವ ಲಿಫ್ಟ್ ಆಪರೇಟರ್ ಸೇರಿದಂತೆ ಇತರೆ ವಲಯಗಳ ಕಾರ್ಮಿಕರಿಗೆ ಹೊರ ಗುತ್ತಿಗೆ ಆಧಾರದಲ್ಲಿ ವೇತನ ನೀಡುತ್ತಿರುವುದು ಕಾರ್ಮಿಕರ ಶೋಷಣೆಗೆ ಕಾರಣವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬುಧವಾರ ರೇಸ್‌ಕೋರ್ಸ್‌ನ ಮುಖ್ಯರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರ ಗುತ್ತಿಗೆದಾರರಿಗೆ ಹೆಚ್ಚು ಹಣವನ್ನು ನೀಡಿದ್ದರೂ ಗುತ್ತಿಗೆದಾರರು ಕಾರ್ಮಿಕರಿಗೆ ಪಿಎಫ್, ಇಎಸ್‌ಐನಂತಹ ಸೌಲಭ್ಯಗಳನ್ನು ನೀಡದೆ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹೊರ ಗುತ್ತಿಗೆ ಪದ್ಧತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಳಿಗೆ ಕಾರ್ಮಿಕ ನಿಯೋಗವೊಂದು ತೆರಳಿ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಇದಕ್ಕೆ ನನ್ನ ಬೆಂಬಲ ಸಂಪೂರ್ಣವಾಗಿ ಇರುತ್ತದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ಗೆ ಅಂಬಾನಿಯಂತಹ ದೊಡ್ಡ ಉದ್ದಿಮೆಗಳ ಬೆಂಬಲವಿಲ್ಲ. ಆದರೆ, ಕೃಷಿ, ಕಟ್ಟಡ, ಗಾರ್ಮೆಂಟ್ಸ್, ಕೈಗಾರಿಕಾ ವಲಯದ ಕಾರ್ಮಿಕರೇ ದೊಡ್ಡ ಬೆಂಬಲಿಗರು. ಕಾರ್ಮಿಕರು ಘೋಷಣೆ ಕೂಗಿದರೆ ಸರಕಾರ ಮತ್ತು ಉದ್ದಿಮೆದಾರರು ಅಂಜುತ್ತಿದ್ದರು. ಆದರೆ, ಇಂದು ಕೇಂದ್ರ ಬಿಜೆಪಿ ಸರಕಾರದ ಅವಧಿಯಲ್ಲಿ ಕಾರ್ಮಿಕ ಸಂಘಟನೆಗಳನ್ನು ದಮನ ಮಾಡಲಾಗಿದೆ ಎಂದು ಅವರು ಕಿಡಿಕಾರಿದರು. ಈ ವೇಳೆ ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಸರಕಾರದ ಮೂರ್ಖತನದ ಆರ್ಥಿಕ ನೀತಿಗಳೆ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗದಿರಲು ಮುಖ್ಯ ಕಾರಣವಾಗಿದೆ. ದೊಡ್ಡ ಉದ್ದಿಮೆಗಳ ಪರವಾಗಿ ನೀತಿಗಳನ್ನು ರೂಪಿಸಿ, ಕಾರ್ಮಿಕರನ್ನು ಬೀದಿಗೆ ತಳ್ಳಲಾಗಿದೆ. ಜೆಟ್ ಏರ್‌ವೇಸ್, ಎಚ್‌ಎಎಲ್, ಬಿಎಸ್‌ಎನ್‌ಎಲ್‌ನಂತಹ ಸರಕಾರಿ ಉದ್ದಿಮೆಗಳ ಜಾಗದಲ್ಲಿ ಖಾಸಗಿ ಉದ್ದಿಮೆಗಳನ್ನು ಕೂರಿಸಲು ಕಾನೂನುಗಳನ್ನು ರೂಪಿಸಲಾಗುತ್ತಿದೆ. ಇದೆಲ್ಲವನ್ನು ದೇಶದ ಕಾರ್ಮಿಕರು ಅರ್ಥ ಮಾಡಿಕೊಳ್ಳಬೇಕು.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News