ವಿದ್ಯಾರ್ಥಿಗಳು ಭವಿಷ್ಯದ ಕಡೆಗೆ ಯೋಚಿಸಬೇಕು: ಕೆಪಿಸಿಸಿ ವಕ್ತಾರ ನಿಝಾಮುದ್ದೀನ್ ಫೌಜ್ದಾರ್

Update: 2019-05-02 14:23 GMT

ಬೆಂಗಳೂರು, ಮೇ 2: ಪದವಿ ಪಡೆಯುವ ವಿದ್ಯಾರ್ಥಿಗಳು ಮುಂದಿನ ತಮ್ಮ ಭವಿಷ್ಯದ ಕಡೆಗೆ ಯೋಚನೆ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ನಿಝಾಮುದ್ದೀನ್ ಫೌಜ್ದಾರ್ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ನಗರದ ಕಬ್ಬನ್‌ಪೇಟೆ ಬಳಿಯಿರುವ ಅಬ್ಬಾಸ್ ಖಾನ್ ಮಹಿಳಾ ಪದವಿ ಕಾಲೇಜು ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿನಿಯರು ತಮ್ಮ ಪದವಿ ಶಿಕ್ಷಣದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಪಾಲ್ಗೊಳ್ಳುವ ಮೂಲಕ ಉನ್ನತ ಹುದ್ದೆ ಪಡೆಯುವ ಕಡೆಗೂ ಯೋಚನೆ ಮಾಡಬೇಕು. ಉತ್ತಮವಾದ ಶಿಕ್ಷಣ ಪಡೆಯುವ ಮೂಲಕ ಪೋಷಕರಿಗೆ ಒಳ್ಳೆಯ ಹೆಸರು ತಂದುಕೊಡಬೇಕು ಹಾಗೂ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆ ಸಿಗಬೇಕು ಎಂದು ಹೇಳಿದರು.

ನಮಗೆ ಸಿಗುವಂತಹ ಸಂಪನ್ಮೂಲಗಳನ್ನೇ ಬಳಕೆ ಮಾಡಿಕೊಂಡು ಹೆಚ್ಚಿನ ಜ್ಞಾನ ಪಡೆಯುತ್ತಾ ಹೋದರೆ ಸಾಧನೆಯ ಮಾರ್ಗ ದೂರವಿರುವುದಿಲ್ಲ. ದೇಶದಲ್ಲಿ, ವಿಶ್ವದಲ್ಲಿ ಸಾಧನೆ ಮಾಡಿದಂತಹ ಅನೇಕರಿದ್ದಾರೆ. ಅವರೆಲ್ಲಾ ದೊಡ್ಡ ಶಿಕ್ಷಣ ಪಡೆಯಲಿಲ್ಲ. ಆದರೆ, ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಎಲ್ಲರೂ ಏಕಾಗ್ರತೆಯಿಂದ ಸಾಧಿಸುವ ಛಲದೊಂದಿಗೆ ಅಧ್ಯಯನ ಮಾಡಬೇಕು. ಆಗಷ್ಟೇ ಸಾಧನೆ ಸಾಧ್ಯ ಎಂದರು.

ಇಂದಿನ ವಿದ್ಯಾರ್ಥಿಗಳಲ್ಲಿ ಅಪಾರವಾದ ಯುವಶಕ್ತಿಯಿದೆ. ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಾಗ ಹೊಸ ಸಮಾಜ ಕಟ್ಟಬಹುದಾಗಿದೆ ಎಂದ ಅವರು, ಪದವಿ ಸ್ವೀಕರಿಸಿದ ಬಳಿಕ ಹಲವರು ವ್ಯಾಸಂಗದ ವಾತಾವರಣದಿಂದ ದೂರ ಸರಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಸ್ಪರ್ಧಾ ಜಗತ್ತಿನಲ್ಲಿಯೂ ಕಾಣಿಸಿಕೊಳ್ಳದಂತಾಗುತ್ತಿದೆ. ಈ ಸ್ಥಿತಿ ನಿರ್ಮೂಲನೆಯಾಗಬೇಕು ಎಂದು ಆಶಿಸಿದರು.

ಪದವಿ ಕಾಲೇಜಿನ ಪ್ರಾಂಶುಪಾಲರಾದ ಜುನೇದಾ ಬೇಗಂ ಮಾತನಾಡಿ, ವಿದ್ಯಾರ್ಥಿನಿಯರು ಪದವಿ ಪಡೆದ ಬಳಿಕ ಒಳ್ಳೆಯ ಸ್ಥಾನಗಳಿಗೆ ತೆರಳಬೇಕು. ಅದರ ಜತೆಗೆ ಮಾನವೀಯತೆಯನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲಿಯೂ ಒಂದೊಂದು ವಿಶಿಷ್ಟವಾದ ಸಾಮರ್ಥ್ಯವಿರುತ್ತದೆ. ಅದನ್ನು ಪ್ರಸ್ತುತ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಝಮೀರ್ ಅಹಮದ್ ಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News