ಫನಿ ಚಂಡಮಾರುತ ನಾಳೆ ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ: ಪ್ರಧಾನಿಯಿಂದ ಮುಂಜಾಗ್ರತಾ ಕ್ರಮಗಳ ಪುನರ್ ಪರಿಶೀಲನೆ

Update: 2019-05-02 14:31 GMT

ಹೊಸದಿಲ್ಲಿ,ಮೇ 2: ಫನಿ ಚಂಡಮಾರುತ ಶುಕ್ರವಾರ ಮಧ್ಯಾಹ್ನ ಪುರಿಯ ದಕ್ಷಿಣದಲ್ಲಿ ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುರುವಾರ ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯು ಚಂಡಮಾರುತವನ್ನು ಎದುರಿಸಲು ಸಿದ್ಧತೆಗಳನ್ನು ಪುನರ್‌ಪರಿಶೀಲಿಸಿತು.

ಚಂಡಮಾರುತದ ಹಾವಳಿಗೆ ಗುರಿಯಾಗುವ ಸಾಧ್ಯತೆಯಿರುವ ರಾಜ್ಯಗಳೊಂದಿಗೆ ನಿಕಟ ಸಂಪರ್ಕದಲ್ಲಿರುವಂತೆ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮೋದಿ ಅವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಜಂಟಿ ಚಂಡಮಾರುತ ಎಚ್ಚರಿಕೆ ಕೇಂದ್ರದ ಇತ್ತೀಚಿನ ಮುನ್ಸೂಚನೆಯಂತೆ ಫನಿ 1999ರಲ್ಲಿ ಒಡಿಶಾದ ಹೆಚ್ಚಿನ ಭಾಗಗಳಲ್ಲಿ ವಿನಾಶವನ್ನುಂಟು ಮಾಡಿ 10,000 ಜೀವಗಳನ್ನು ಬಲಿ ತೆಗೆದುಕೊಂಡಿದ್ದ ಮಹಾ ಚಂಡಮಾರುತಕ್ಕಿಂತ ಹೆಚ್ಚು ತೀವ್ರವಾದ ಚಂಡಮಾರುತವಾಗಿದೆ.

ಪುರಿ,ಕೇಂದ್ರಪಾಡಾ,ಭದ್ರಕ್ ಸೇರಿದಂತೆ 11 ಕರಾವಳಿ ಜಿಲ್ಲೆಗಳಲ್ಲಿ ಜನರನ್ನು ತೆರವುಗೊಳಿಸುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಚಂಡಮಾರುತವು ಗಂಟೆಗೆ 175 ಕಿ.ಮೀ.ವೇಗದಲ್ಲಿ ಪುರಿಯ ದಕ್ಷಿಣದಲ್ಲಿ ಕರಾವಳಿಯನ್ನಪ್ಪಳಿಸಲಿದ್ದು,ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.

ನೌಕಾಪಡೆ,ವಾಯುಪಡೆ, ತಟರಕ್ಷಣಾ ಪಡೆ ಸೇರಿದಂತೆ ರಕ್ಷಣಾ ಪಡೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ. ಎನ್‌ಡಿಆರ್‌ಎಫ್ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ಒಡಿಶಾದಲ್ಲಿ 28,ಆಂಧ್ರಪ್ರದೇಶದಲ್ಲಿ 12 ಮತ್ತು ಪ.ಬಂಗಾಳದಲ್ಲಿ ಆರು ತಂಡಗಳನ್ನು ನಿಯೋಜಿಸಿದೆ.

ವಿಶಾಖಪಟ್ಟಣಂ ಮತ್ತು ಚೆನ್ನೈಗಳಲ್ಲಿ ತಲಾ ನಾಲ್ಕು ರಕ್ಷಣಾ ತಂಡಗಳನ್ನು ಸನ್ನದ್ಧವಾಗಿರಿಸಲಾಗಿದೆ. ಎರಡೂ ಕಡೆಗಳಲ್ಲಿ ಎರಡು ನೌಕೆಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ. ಪರಿಹಾರ ಸಾಮಗ್ರಿಗಳ ರವಾನೆಗಾಗಿ ಎರಡು ಚೇತಕ್ ಹೆಲಿಕಾಪ್ಟರ್‌ಗಳನ್ನೂ ಸಿದ್ಧವಾಗಿರಿಲಾಗಿದೆ ಎಂದು ತಟರಕ್ಷಣಾ ಪಡೆ(ಪೂರ್ವ)ಯು ತಿಳಿಸಿದೆ.

ಸದ್ಯಕ್ಕೆ ಚಂಡಮಾರುತವು ಪುರಿಯಿಂದ ನೈರುತ್ಯಕ್ಕೆ 450 ಕಿ.ಮೀ.ದೂರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಸ್ಥಿತಗೊಂಡಿದ್ದು,ಗಂಟೆಗೆ ಆರು ಕಿ.ಮೀ.ವೇಗದಲ್ಲಿ ಚಲಿಸುತ್ತಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು 89 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಒಡಿಶಾದ 11 ಜಿಲ್ಲೆಗಳಲ್ಲಿ ಸುಮಾರು 880 ಚಂಡಮಾರುತ ಆಶ್ರಯ ಶಿಬಿರಗಳನ್ನು ಸ್ಥಾಪಿಸಲಾಗಿದೆ.

ಫನಿ ಚಂಡಮಾರುತವು ಆಂಧ್ರಪ್ರದೇಶ,ತಮಿಳುನಾಡು ಮತ್ತು ಪ.ಬಂಗಾಳಗಳನ್ನೂ ಬಾಧಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News