ಒಡಿಶಾ ಕರಾವಳಿಗೆ ಫನಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ: 8 ಲಕ್ಷ ಜನರ ಸ್ಥಳಾಂತರ

Update: 2019-05-02 16:49 GMT

ಭುವನೇಶ್ವರ, ಮೇ 2: ಅತ್ಯಂತ ತೀವ್ರ ಫನಿ ಚಂಡ ಮಾರುತದಿಂದಾಗಿ ಪುರಿಯ ಸಮೀಪ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಮುದ್ರ ಕಿನಾರೆಯ ಗ್ರಾಮಗಳು ಹಾಗೂ ಒಳನಾಡಿನ ಜಿಲ್ಲೆಗಳ ಲಕ್ಷಾಂತರ ಜನರನ್ನು ಬಸ್ ಹಾಗೂ ಸಣ್ಣ ವಾಹನಗಳ ಮೂಲಕ ಒಡಿಶಾ ಸರಕಾರ ಸ್ಥಳಾಂತರಗೊಳಿಸಿದೆ. ಗಂಟೆಗೆ 170-180ರ ನಡುವಿನ ವೇಗದೊಂದಿಗೆ ಫನಿ ಚಂಡಮಾರುತ ಪುರಿಯತ್ತ ಸಾಗುತ್ತಿದೆ. ಬಾಲುಖಂಡದ ಸಮೀಪ ಶುಕ್ರವಾರ ಅಪರಾಹ್ನ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 ಫನಿ ಚಂಡ ಮಾರುತ ಗುರುವಾರ ಬೆಳಗ್ಗೆ 8.30ಕ್ಕೆ ಪುರಿಯ ದಕ್ಷಿಣ ನೈಋತ್ಯದಿಂದ 430 ಕಿ.ಮೀ. ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ 225 ಕಿ.ಮೀ. ದೂರದಲ್ಲಿ ಕೇಂದ್ರವನ್ನು ಹೊಂದಿರಲಿದೆ. ಚಂಡಮಾರುತ ಗಂಟೆಗೆ 15 ಕಿ.ಮೀ. ವೇಗದಲ್ಲಿ ಕರಾವಳಿಯತ್ತ ಸಾಗಲಿದೆ. ಭೂಕುಸಿತ ಉಂಟು ಮಾಡುವ ಮೊದಲು ಇದು ಸಮುದ್ರದ ಮೇಲೆ ಗಂಟೆಗೆ 30 ಕಿ.ಮೀ. ವೇಗದಲ್ಲಿ ಸಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಡಿಶಾ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಿಂದ ಕನಿಷ್ಠ 8 ಲಕ್ಷ ಜನರನ್ನು ತಾತ್ಕಾಲಿಕ ವಾಸ್ತವ್ಯ ಶಿಬಿರಗಳಿಗೆ ಗುರುವಾರ ಸಂಜೆ ಸ್ಥಳಾಂತರಗೊಳಿಸಲಾಗಿದೆ ಎಂದು ವಿಶೇಷ ಪರಿಹಾರ ಆಯುಕ್ತ ಬಿಷ್ಣುಪಾದ ಸೇಥಿ ಹೇಳಿದ್ದಾರೆ.

 ‘‘ಯಾವುದೇ ರೀತಿಯ ಸಾವು ನೋವು ಉಂಟಾಗದಿರಲು ಮುಖ್ಯವಾಗಿ ಮಹಿಳೆಯರು, ಮಕ್ಕಳು ಹಾಗೂ ಅಂಗವಿಕಲರನ್ನು ತೆರವುಗೊಳಿಸುವಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ’’ ಎಂದು ಸೇಥಿ ತಿಳಿಸಿದ್ದಾರೆ. ‘‘ಫನಿ ಚಂಡಮಾರುತದಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಇರುವ 3 ದಶಲಕ್ಷ ಜನರಿಗೆ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಿಂದ ಶೀಘ್ರ ಮುನ್ನೆಚ್ಚರಿಕೆ ಪ್ರಸಾರ ವ್ಯವಸ್ಥೆಯ ಮೂಲಕ ನಾವು ಎಸ್‌ಎಂಎಸ್ ರವಾನಿಸಿದ್ದೇವೆ’’ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News