ವಾದ್ರಾ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರಿ ನಿರ್ದೇಶನಾಲಯಕ್ಕೆ ಹೆಚ್ಚುವರಿ ಕಾಲಾವಕಾಶ ನೀಡಿದ ಹೈಕೋರ್ಟ್

Update: 2019-05-02 17:18 GMT

ಹೊಸದಿಲ್ಲಿ, ಮೇ 2: ತನ್ನ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಪ್ರಶ್ನಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯ ಪತಿ ರಾಬರ್ಟ್ ವಾದ್ರಾ ಸಲ್ಲಿಸಿರುವ ಅರ್ಜಿಗೆ ಉತ್ತರಿಸಲು ಜಾರಿ ನಿರ್ದೇಶನಾಲಯಕ್ಕೆ ದಿಲ್ಲಿ ಹೈಕೋರ್ಟ್ ಹೆಚ್ಚುವರಿ ಸಮಯ ನೀಡಿದೆ. ಅಕ್ರಮ ಹಣ ವರ್ಗಾವಣೆ ಮೂಲಕ ರಾಬರ್ಟ್ ವಾದ್ರಾ ಲಂಡನ್‌ನಲ್ಲಿ 1.9 ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ್ದು ಇದನ್ನು ಪ್ರಶ್ನಿಸಿ ವಾದ್ರಾ ದಿಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಉತ್ತರಿಸಲು ಹೆಚ್ಚುವರಿ ಕಾಲಾವಕಾಶವನ್ನು ಜಾರಿ ನಿರ್ದೇಶನಾಲಯ ಕೋರಿದ್ದು ನ್ಯಾ. ಹಿಮಾ ಕೊಹ್ಲಿ ಹಾಗೂ ನ್ಯಾ. ವಿನೋದ್ ಗೋಯೆಲ್ ಅವರಿದ್ದ ನ್ಯಾಯಪೀಠವು ಇದಕ್ಕೆ ಸಮ್ಮತಿಸಿ ಮುಂದಿನ ವಿಚಾರಣೆಯನ್ನು ಜುಲೈ 18ಕ್ಕೆ ನಿಗದಿಗೊಳಿಸಿದೆ. ಜಾರಿ ಪ್ರಕರಣ ತನಿಖಾ ವರದಿ ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕೆಲವು ಪರಿಚ್ಛೇದಗಳ ಸಾಂವಿಧಾನಿಕ ಸಿಂಧುತ್ವವನ್ನು ತಮ್ಮ ಮೇಲ್ಮನವಿಯಲ್ಲಿ ವಾದ್ರಾ ಪ್ರಶ್ನಿಸಿದ್ದಾರೆ. ತನಗೆ ಕಿರುಕುಳ ನೀಡಲು ಮತ್ತು ಅವಮಾನಿಸಲು ತನಿಖಾ ವರದಿಯನ್ನು ದಾಖಲಿಸಲಾಗಿದೆ. ರಾಜಸ್ತಾನ ಮತ್ತು ಹರ್ಯಾನದಲ್ಲಿ ತಾನು ನಡೆಸಿದ ಜಮೀನು ವ್ಯವಹಾರವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ್ದು ಇದರಲ್ಲಿ ಯಾವುದೇ ಅಕ್ರಮ ಬೆಳಕಿಗೆ ಬಂದಿಲ್ಲ ಎಂದು ವಾದ್ರಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News