ವಾರಣಾಸಿ: ಅಸಲಿ ಚೌಕಿದಾರನಿಗೆ ಬೆದರಿದ ನಕಲಿ ಚೌಕಿದಾರ!

Update: 2019-05-03 04:20 GMT

ಸ್ವಯಂ ಘೋಷಿತ ‘ಚೌಕಿದಾರ್’ ಈ ದೇಶದ ನಿಜವಾದ ಚೌಕಿದಾರನಿಗೆ ಹೆದರಿದರೇ? ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸ್ಪರ್ಧಿಸಲು ಹೊರಟ ಮಾಜಿ ಯೋಧ ತೇಜ್ ಬಹದ್ದೂರ್ ಅವರ ನಾಮಪತ್ರ ತಿರಸ್ಕೃತಗೊಂಡಿರುವುದು ಇದೀಗ ಇಂತಹದೊಂದು ಅನುಮಾನವನ್ನು ಹುಟ್ಟಿಸಿದೆ. ಯೋಧ ಸೇನೆಯಿಂದ ವಜಾ ಆದ ಕುರಿತ ಅಧಿಕೃತ ಪ್ರಮಾಣ ಪತ್ರ ಸಲ್ಲಿಸಿಲ್ಲ ಎನ್ನುವುದನ್ನು ಮುಂದಿಟ್ಟುಕೊಂಡು ಚುನಾವಣಾ ಆಯೋಗ ಬಹದ್ದೂರ್ ಅವರ ನಾಮಪತ್ರವನ್ನು ಅಸಿಂಧುಗೊಳಿಸಿದೆ. ಯಾವಾಗ ತೇಜ್ ಬಹದ್ದೂರ್‌ರನ್ನು ಸಮಾಜವಾದಿ ಪಕ್ಷವು ತನ್ನ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿತೋ, ಅಲ್ಲಿಂದ ವಾರಣಾಸಿ ದೇಶದ ಕೇಂದ್ರ ಬಿಂದುವಾಗಿ ಗುರುತಿಸಲ್ಪಟ್ಟಿತ್ತು. ಆರಂಭದಲ್ಲಿ ತೇಜ್ ಬಹದ್ದೂರ್ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾದಾಗ ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಚುನಾವಣೆಗೆ ಮುನ್ನವೇ ಮೋದಿಯ ಗೆಲುವನ್ನು ಮಾಧ್ಯಮಗಳು ಘೋಷಿಸಿದ್ದವು. ಆದರೆ ತೇಜ್ ಬಹದ್ದೂರ್ ಎಸ್ಪಿಯ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾದಂತೆಯೇ ಅವರ ಅಭ್ಯರ್ಥಿತನಕ್ಕೆ ಮಹತ್ವ ಬಂದು ಬಿಟ್ಟಿತ್ತು. ಎಸ್ಪಿಯ ಜೊತೆಗೆ ಬಿಎಸ್ಪಿಯೂ ಯೋಧನನ್ನು ಬೆಂಬಲಿಸಿದ್ದರಿಂದ ಮತ್ತು ಕಾಂಗ್ರೆಸ್ ಪಕ್ಷವನ್ನು ಈ ಕ್ಷೇತ್ರ ಗಂಭೀರವಾಗಿ ಸ್ವೀಕರಿಸದೆ ಇದ್ದುದರಿಂದ ಮೋದಿಗೆ ತೇಜ್ ಬಹದ್ದೂರ್ ನೇರ ಸ್ಪರ್ಧಿಯಾದರು.

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸ್ವೀಕರಿಸಿದ್ದ ಚುನಾವಣಾ ಆಯೋಗಕ್ಕೆ, ಇದೀಗ ಎಸ್‌ಪಿಯಿಂದ ಸ್ಪರ್ಧಿಸುವಾಗ ನಾಮಪತ್ರದಲ್ಲಿ ಲೋಪ ಕಂಡಿದೆ. ಕಳೆದ ಐದು ವರ್ಷಗಳ ಆಡಳಿತದಲ್ಲಿ ರಾಜಕೀಯವಾಗಿ ಸೇನೆಯನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಂಡ ಹೆಗ್ಗಳಿಕೆ ನರೇಂದ್ರ ಮೋದಿಯದು. ಪುಲ್ವಾಮದಲ್ಲಿ ನಲವತ್ತು ಯೋಧರ ಹತ್ಯೆಯ ವೈಫಲ್ಯವನ್ನು ಮುಚ್ಚಿ ಹಾಕಲು ಸರ್ಜಿಕಲ್ ಸ್ಟ್ರೈಕ್ ನಡೆಸಲು ಹೋಗಿ ಸೇನೆಯನ್ನು, ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ತಳ್ಳಿದವರು ಮೋದಿ. ಸೇನೆಯ ಎಲ್ಲ ಹಿರಿಮೆಯನ್ನು ತನ್ನದೆಂದು ಘೋಷಿಸುತ್ತಾ, ತನ್ನನ್ನು ತಾನು ದೇಶ ಕಾಯುವ ಚೌಕಿದಾರ್ ಎಂದು ಸಾರಿ, ಅದನ್ನೇ ಈ ಬಾರಿ ಚುನಾವಣಾ ಪ್ರಚಾರಕ್ಕೂ ಬಳಸಿಕೊಂಡರು. ಕಳೆದ ಚುನಾವಣೆಯಲ್ಲಿ ಚಾಯ್‌ವಾಲಾನ ಹೆಸರಲ್ಲಿ ಮತ ಯಾಚಿಸಿದರೆ, ಈಗ ಚೌಕಿದಾರನ ವೇಷಧರಿಸಿ ಮೋದಿ ಕಣಕ್ಕಿಳಿದಿದ್ದಾರೆ.

ಇದೀಗ ಒಂದು ಸಣ್ಣ ಇಲಿಮರಿ ಈ ನಕಲಿ ಚೌಕಿದಾರನ ಲಾಡಿಯನ್ನು ಕತ್ತರಿಸಿ ಹಾಕಲು ಹೊರಟಿದೆ. ‘ಸೇನೆಯಲ್ಲಿರುವ ಕಳಪೆ ಆಹಾರ’ವನ್ನು ವಿರೋಧಿಸಿ, ಅದನ್ನು ದೇಶಕ್ಕೆ ಪ್ರಕಟಪಡಿಸಿ ವಜಾಗೊಂಡ ತೇಜ್ ಬಹದ್ದೂರ್ ದೇಶದ ‘ನಿಜವಾದ ಚೌಕಿದಾರ್ ಮೋದಿಯಲ್ಲ, ನಾನು’ ಎಂದು ಸಡ್ಡು ಹೊಡೆದಿದ್ದಾರೆ. ಸೇನೆಯ ಹೆಸರು ಬಳಸಿ ದೇಶಾದ್ಯಂತ ಚುನಾವಣಾ ಪ್ರಚಾರಕ್ಕಿಳಿದಿರುವ ನರೇಂದ್ರ ಮೋದಿ, ವಾರಣಾಸಿಯಲ್ಲಿ ಯೋಧನೊಬ್ಬನ ವಿರುದ್ಧವೇ ಚುನಾವಣೆಗೆ ನಿಂತು ಗೆಲ್ಲಬೇಕಾಗಿರುವುದು ಭಾರೀ ಮುಜುಗರವೇ ಸರಿ. ಬಹುಶಃ ಪ್ರಿಯಾಂಕಾಗಾಂಧಿ ಸ್ಪರ್ಧಿಸಿದ್ದರೂ ಮೋದಿ ಸುಲಭದಲ್ಲಿ ನಿವಾರಿಸಿಕೊಳ್ಳುತ್ತಿದ್ದರು. ಆದರೆ ವಾರಣಾಸಿಯಲ್ಲಿ, ‘ಯೋಧನಿಗೆ ಮತನೀಡಬೇಡಿ, ನನಗೆ ನೀಡಿ’ ಎನ್ನುವ ಪರಿಸ್ಥಿತಿ ಮೋದಿಗೆ ದೊಡ್ಡ ಸವಾಲಾಗಿ ಬಿಟ್ಟಿತ್ತು.

‘ಈ ದೇಶದ ನಿಜವಾದ ಚೌಕಿದಾರ ನಾನು’ ತೇಜ್ ಬಹದ್ದೂರ್ ಅವರ ಈ ಹೇಳಿಕೆಯಲ್ಲಿ ಅರ್ಥವಿದೆ. ಸುಮಾರು 18 ವರ್ಷ ತೇಜ್ ಬಹದ್ದೂರ್ ಈ ದೇಶದ ಸೇನೆಯಲ್ಲಿ ಕೆಲಸ ಮಾಡಿದ್ದಾರೆ. ಮಂಜು ಕಣಿವೆಯಲ್ಲಿ ಕುಳಿತು ನಮ್ಮ ಗಡಿಯನ್ನು ರಕ್ಷಿಸಿದ್ದಾರೆ. ಸೈನಿಕರೇ ಈ ದೇಶದ ನಿಜವಾದ ಚೌಕಿದಾರರು. ಇದೇ ಸಂದರ್ಭದಲ್ಲಿ ಅವರು ಸೇನೆಯೊಳಗೆ ನಡೆಯುವ ಭ್ರಷ್ಟಾಚಾರವನ್ನು ಬಹಿರಂಗ ಪಡಿಸಿ ಕೆಲಸವನ್ನು ಕಳೆದುಕೊಂಡರು. ಬಹದ್ದೂರ್ ಅವರನ್ನು ಕರ್ತವ್ಯ ಲೋಪಕ್ಕಾಗಿ ಸೇನೆ ವಜಾಗೊಳಿಸಿದೆ. ಇಷ್ಟಕ್ಕೂ ಅವರು ಎಸಗಿದ ಕರ್ತವ್ಯ ಲೋಪವಾದರು ಏನು? ಎಲ್ಲ ಬೆದರಿಕೆಗಳನ್ನು ಮೀರಿ ಈ ದೇಶದ ಸೈನಿಕರನ್ನು ನಮ್ಮ ಸರಕಾರ ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವುದನ್ನು ಅವರು ಶ್ರೀಸಾಮಾನ್ಯನಿಗೆ ತಿಳಿಸಿದರು. ಕಾಡು ಗುಡ್ಡಗಳಲ್ಲಿ ಮಳೆ, ಚಳಿ, ಬಿಸಿಲೆನ್ನದೆ ಅಲೆಯುವ ಸೈನಿಕರಿಗೆ ಉತ್ತಮ ಆಹಾರವನ್ನು ನೀಡುವುದು ಸರಕಾರದ ಕರ್ತವ್ಯ. ಸೈನಿಕರ ಆಹಾರಕ್ಕೆ ವ್ಯಯವಾಗುವ ಹಣ ದುರುಪಯೋಗವಾಗುತ್ತಿದೆ, ಅವರಿಗೆ ಒಣಗಿದ ರೊಟ್ಟಿ, ಉಪ್ಪು, ಹುಳಿ, ಬೇಳೆಯಿಲ್ಲದ ಸಾರನ್ನು ನೀಡಲಾಗುತ್ತಿದೆ ಎನ್ನುವುದನ್ನು ಅವರು ಸರಕಾರಕ್ಕೆ ಆ ಮೂಲಕ ತಲುಪಿಸಿದರು. ಸರಕಾರ ಯೋಧರ ಸಂಕಟಕ್ಕೆ ತಕ್ಷಣ ಸ್ಪಂದಿಸಿ, ಅದನ್ನು ವಿಚಾರಣೆಗೊಳಪಡಿಸಬೇಕಾಗಿತ್ತು ಮತ್ತು ಅವರಿಗೆ ಅತ್ಯುತ್ತಮ ಆಹಾರ ಸಿಗುವಂತೆ ನೋಡಿಕೊಳ್ಳಬೇಕಾಗಿತ್ತು. ಆದರೆ ಅದಕ್ಕೆ ಬದಲಾಗಿ ದೂರು ಹೇಳಿದ ಸೈನಿಕನನ್ನೇ ಕರ್ತವ್ಯ ಲೋಪದ ಹೆಸರಿನಲ್ಲಿ ವಜಾಗೊಳಿಸಿತು. ಸೈನಿಕರಿಗೆ ಕಳಪೆ ಆಹಾರ ಒದಗಿಸಿದ ಸರಕಾರ ಮಾಡಿರುವುದು ‘ಕರ್ತವ್ಯ ಲೋಪ’ವಲ್ಲವೇ? ಸೈನಿಕರ ಆಹಾರದ ಹಣವನ್ನು ದುರುಪಯೋಗ ಪಡಿಸಿದ ಮೇಲಧಿಕಾರಿಗಳದ್ದು ‘ಕರ್ತವ್ಯ ಲೋಪ’ವಲ್ಲವೇ? ಅವುಗಳು ಕರ್ತವ್ಯ ಲೋಪ ಅಲ್ಲ ಎಂದ ಮೇಲೆ, ಆ ತಪ್ಪನ್ನು ದೇಶಕ್ಕೆ ತೋರಿಸಿಕೊಟ್ಟ ಯೋಧನದ್ದು ಹೇಗೆ ಕರ್ತವ್ಯ ಲೋಪ? ಸೇನೆಯೊಳಗೆ ನಡೆಯುತ್ತಿರುವ ಅವ್ಯವಹಾರಗಳನ್ನು ಹೊರ ತಂದ ಯೋಧನೇ ಅಲ್ಲವೆ ಅಸಲಿಗೆ ಚೌಕಿದಾರ.

ಆ ಚೌಕಿದಾರನನ್ನು ಕೆಲಸದಿಂದ ವಜಾಗೊಳಿಸಿದಾತನೇ ಇದೀಗ ವಾರಣಾಸಿಯಲ್ಲಿ ‘ಚೌಕಿದಾರ’ನ ವೇಷದಲ್ಲಿ ಮತಯಾಚಿಸಲು ಹೊರಟಿದ್ದಾರೆ. ಅಸಲಿ ಚೌಕಿದಾರನಿಗೆ ನಕಲಿ ಚೌಕಿದಾರರು ಹೆದರಿದ್ದಾರೆ ಮತ್ತು ಆತನನ್ನು ಎದುರಿಸಲು ಸಾಧ್ಯವಾಗದೆ ಚುನಾವಣೆಯಲ್ಲೇ ಸ್ಪರ್ಧಿಸದಂತೆ ಮಾಡಲು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಪಕ್ಷೇತರನಾಗಿ ಸ್ಪರ್ಧಿಸುವ ಸಂದರ್ಭದಲ್ಲಿ ಯಾವುದೇ ಆಕ್ಷೇಪಗಳನ್ನು ವ್ಯಕ್ತಪಡಿಸದ ಚುನಾವಣಾ ಆಯೋಗ, ಸಮಾಜವಾದಿ ಪಕ್ಷದಿಂದ ಸ್ಪರ್ಧಿಸುವ ಸಂದರ್ಭದಲ್ಲಿ ವ್ಯಕ್ತಪಡಿಸಿದೆ. ಏಕಾಏಕಿ ಕೇಂದ್ರ ಚುನಾವಣಾ ಆಯೋಗದಿಂದ ಪತ್ರವನ್ನು ಅಪೇಕ್ಷಿಸಿದೆ. ಅದೂ 24 ಗಂಟೆಯ ಒಳಗೆ. ಇದರ ಅರ್ಥವೇನು. ತೇಜ್ ಬಹದ್ದೂರ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುವುದಷ್ಟೇ ಅದರ ಗುರಿಯಲ್ಲವೇ? ಮಧ್ಯಪ್ರದೇಶದಲ್ಲಿ ಒಬ್ಬ ಶಂಕಿತ ಭಯೋತ್ಪಾದಕಿಯನ್ನು ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚುನಾವಣಾ ಆಯೋಗ ಅನುಮತಿ ನೀಡುತ್ತದೆ. ಇದೇ ಸಂದರ್ಭದಲ್ಲಿ ಈ ದೇಶದ ಗಡಿಯನ್ನು ರಕ್ಷಿಸಿದ, ಸೇನೆಯೊಳಗಿನ ಅವ್ಯವಹಾರವನ್ನು ತನ್ನ ಪ್ರಾಣ ಒತ್ತೆಯಿಟ್ಟು ಬಹಿರಂಗ ಪಡಿಸಿದ ಯೋಧನನ್ನು ಚುನಾವಣೆಗೆ ನಿಲ್ಲದಂತೆ ತಡೆಯುತ್ತಿದೆ. ಇದು ಚುನಾವಣಾ ಆಯೋಗದ ಕರ್ತವ್ಯ ಲೋಪ ವ್ಯಾಪ್ತಿಯಲ್ಲಿ ಬರುವುದಿಲ್ಲವೇ? ಚುನಾವಣೆಯ ಉದ್ದಕ್ಕೂ ಮೋದಿಯ ಕಾಲಾಳುವಿನಂತೆ ಕರ್ತವ್ಯ ನಿರ್ವಹಿಸಿದ ಚುನಾವಣಾ ಆಯೋಗ, ಶಂಕಿತ ಭಯೋತ್ಪಾದಕಿಗೆ ನೀಡಿದ ಗೌರವವನ್ನೂ ಮಾಜಿ ಯೋಧನಿಗೆ ನೀಡಲಿಲ್ಲವೆಂದರೆ, ಈ ಚುನಾವಣೆಯನ್ನು ಪ್ರಜಾಸತ್ತಾತ್ಮಕ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News