ಪ್ರತಿ ತಿಂಗಳ 3ನೆ ಶನಿವಾರ ‘ಬ್ಯಾಗ್ ರಹಿತ ದಿನ’, ಇಳಿಯಲಿದೆ ಶಾಲಾ ಬ್ಯಾಗ್ ಹೊರೆ

Update: 2019-05-04 15:06 GMT

ಬೆಂಗಳೂರು, ಮೇ 4: ರಾಜ್ಯದ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬ್ಯಾಗ್‌ಗಳ ಭಾರವನ್ನು ಇಳಿಸಿದ್ದು, ಬ್ಯಾಗ್‌ನ ತೂಕ ಮಕ್ಕಳ ದೇಹದ ತೂಕದ ಶೇ.10 ಕ್ಕಿಂತ ಅಧಿಕ ಇರಬಾರದು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಡಾ.ವಿ.ಪಿ.ನಿರಂಜನಾರಾಧ್ಯ ನೇತೃತ್ವದ ತಜ್ಞರ ಸಮಿತಿ 2016-17 ನೆ ಸಾಲಿನಲ್ಲಿ ರಾಜ್ಯ ಸರಕಾರ ಶಿಫಾರಸ್ಸು ಸಲ್ಲಿಸಿದ್ದರೂ, ಅದಕ್ಕೆ ಸರಕಾರ ಆದೇಶ ಹೊರಡಿಸಲು ಮುಂದಾಗಿರಲಿಲ್ಲ. ಹೀಗಾಗಿ, ಮಕ್ಕಳಿಗೆ ಹೆಚ್ಚಿನ ಹೊರೆ ಹೊರಿಸುವುದರಿಂದ ಬೆನ್ನು ನೋವು, ಕುತ್ತಿಗೆ ನೋವು ಶಾಶ್ವತವಾಗಿ ಕಾಣಿಸಿಕೊಳ್ಳಲಿವೆ ಎಂಬ ಕಾರಣದಿಂದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಬ್ಯಾಗ್ ಭಾರ ಎಷ್ಟಿರಬೇಕೆಂದು ಸರಕಾರ ಸ್ಪಷ್ಟಪಡಿಸಿದೆ.

ಯಾರಿಗೆ ಎಷ್ಟು ಭಾರ:

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 1 ಮತ್ತು 2ನೇ ತರಗತಿ ವಿದ್ಯಾರ್ಥಿಯ ಬ್ಯಾಗ್ 1.5 ರಿಂದ 2 ಕೆಜಿ, 3 ರಿಂದ 5ನೇ ತರಗತಿ ವಿದ್ಯಾರ್ಥಿಯ ಬ್ಯಾಗ್ 2ರಿಂದ 3 ಕೆಜಿ, 6 ರಿಂದ 8ನೇ ತರಗತಿಯ ವಿದ್ಯಾರ್ಥಿಯ ಬ್ಯಾಗ್ 3ರಿಂದ 4 ಕೆಜಿ, 9 ರಿಂದ 10ನೇ ತರಗತಿಯ ವಿದ್ಯಾರ್ಥಿಯ ಬ್ಯಾಗ್ 4ರಿಂದ 5ಕೆಜಿ ಇರಬೇಕೆಂದು ತಿಳಿಸಿದೆ.

ಮನೆ ಕೆಲಸಕ್ಕೆ ಕಡಿವಾಣ: 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಮನೆ ಕೆಲಸ(ಹೋಂ ವರ್ಕ್) ನೀಡಬಾರದು. ಪ್ರತಿ ತಿಂಗಳ 3ನೆ ಶನಿವಾರವನ್ನು ಬ್ಯಾಗ್ ರಹಿತದಿನ ಆಚರಿಸಬೇಕು. ಈ ದಿನದಲ್ಲಿ ಶಿಕ್ಷಕರು ಪಠ್ಯಪುಸ್ತಕ ಅಥವಾ ಇತರ ಪೂರಕ ಸಾಮಗ್ರಿಗಳ ಅವಶ್ಯಕತೆ ಇಲ್ಲದೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ವಿಜ್ಞಾನ ಪ್ರಯೋಗ ಮತ್ತು ಪ್ರದರ್ಶನಗಳು, ಸಾಮಾನ್ಯ ಜ್ಞಾನ, ದೇಶಭಕ್ತಿ ಗೀತೆಗಳ ಚಟುವಟಿಕೆ, ಶೈಕ್ಷಣಿಕ ಸಂಘದ ಚಟುವಟಿಕೆಗಳು, ಚಿತ್ರಕಲೆ, ಚಿತ್ರಗಳಿಗೆ ಬಣ್ಣ ತುಂಬುವ ಚಟುವಟಿಕೆ, ನಕ್ಷೆ ಓದಿಸುವುದು, ಕ್ರೀಡೆ ಸೇರಿದಂತೆ ಇತರೆ ಶೈಕ್ಷಣಿಕ ಚಟುವಟಿಕೆ ಹಮ್ಮಿಕೊಳ್ಳಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಸೂಚನೆಗಳು:

* ಆಯಾ ದಿನದ ವೇಳಾಪಟ್ಟಿಗೆ ಅನುಗುಣವಾಗಿ ಪಠ್ಯಪುಸ್ತಕ, ನೋಟ್ ಪುಸ್ತಕಗಳನ್ನು ಶಾಲೆಗೆ ತರಲು ಅಗತ್ಯ ಸೂಚನೆ ನೀಡಬೇಕು.

* ಪ್ರತಿ ಶಾಲೆಯಲ್ಲಿಯೂ ಶುದ್ಧ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಬೇಕು.

*ಕಡಿಮೆ ಖರ್ಚಿನ ಹಗುರವಾದ, ದೀರ್ಘಕಾಲ ಬಾಳಿಕೆ ಬರುವಂತಹ ಬ್ಯಾಗ್ ಹಾಗೂ ಇನ್ನಿತರ ಕಲಿಕಾ ಸಾಮಾಗ್ರಿ ಬಳಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕು.

* 100 ಪೇಜ್ ಮೀರಿದ ನೋಟ್ ಪುಸ್ತಕ ನಿಗದಿಗೊಳಿಸಬಾರದು.

* ಶಾಲಾ ಗ್ರಂಥಾಲಯದಲ್ಲಿ ಸಮನಾರ್ಥಕ ಪದಕೋಶ, ಅಟ್ಲಾಸ್, ಜ್ಞಾನವಿಜ್ಞಾನಗಳಂತಹ ಪರಾಮರ್ಶನ ಸಾಮಾಗ್ರಿ ಇಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News