"ನಿಮ್ಮ ತಂದೆ ನಂಬರ್ ವನ್ ಭ್ರಷ್ಟ ಎನಿಸಿಕೊಂಡೇ ಕೊನೆಯುಸಿರೆಳೆದರು"

Update: 2019-05-05 04:16 GMT

ಲಕ್ನೋ, ಮೇ 5: "ನಿಮ್ಮ ತಂದೆ ನಂಬರ್ ವನ್ ಭ್ರಷ್ಟ ಎನಿಸಿಕೊಂಡೇ ಕೊನೆಯುಸಿರೆಳೆದರು" ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಟೀಕೆ ಮಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಫೇಲ್ ಹಗರಣದಲ್ಲಿ ಪ್ರಧಾನಿ ಪಾತ್ರದ ಬಗ್ಗೆ ನಿರಂತರ ಆರೋಪ ಮಾಡುತ್ತಿರುವ ರಾಹುಲ್‌ ಗಾಂಧಿ ವಿರುದ್ಧ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಿಡಿಕಾರಿದ ಮೋದಿ, "ರಾಹುಲ್‌ ಗಾಂಧಿಯ ಏಕೈಕ ಗುರಿ ನನ್ನ ಇಮೇಜ್‌ಗೆ ಧಕ್ಕೆ ತರುವುದು" ಎಂದು ಹೇಳಿದರು.

"ನಿಮ್ಮ ತಂದೆ ಹೊಗಳುಭಟರಿಂದ ಮಿಸ್ಟರ್ ಕ್ಲೀನ್ ಎನಿಸಿಕೊಂಡರು. ಆದರೆ ಅವರ ಜೀವನ ಭ್ರಷ್ಟಾಚಾರಿ ನಂಬರ್ 1 ಆಗಿ ಕೊನೆಗೊಂಡಿತು" ಎಂದು ಮೋದಿ ಪರೋಕ್ಷವಾಗಿ ಬೋಫೋರ್ಸ್ ಹಗರಣವನ್ನು ಪ್ರಸ್ತಾಪಿಸಿದರು.

ಸ್ವೀಡನ್‌ನ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕಂಪೆನಿಯಾದ ಬೊಫೋರ್ಸ್, ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟದ ಒಪ್ಪಂದ ಪಡೆಯಲು ರಾಜೀವ್‌ ಗಾಂಧಿ ಹಾಗೂ ಇತರರಿಗೆ ದೊಡ್ಡ ಮೊತ್ತದ ಕಿಕ್‌ಬ್ಯಾಕ್ ನೀಡಿದೆ ಎಂಬ ಆರೋಪ ದೇಶದ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ ರಾಜೀವ್‌ ಗಾಂಧಿ ಲಂಚ ಪಡೆದಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೈಕೋರ್ಟ್ ಹೇಳಿತ್ತು.

ಈ ವ್ಯಕ್ತಿಗಳು ನನ್ನ ಇಮೇಜ್‌ಗೆ ಧಕ್ಕೆ ತಂದು ದುರ್ಬಲ ಸರ್ಕಾರವನ್ನು ಕೇಂದ್ರದಲ್ಲಿ ಪ್ರತಿಷ್ಠಾಪಿಸಲು ಹೊರಟಿದ್ದಾರೆ ಎಂದು ಮೋದಿ ಆಪಾದಿಸಿದರು. "ನನ್ನ ಇಮೇಜ್‌ಗೆ ಧಕ್ಕೆ ತರುವ ಮೂಲಕ ಹಾಗೂ ನನ್ನನ್ನು ಸಣ್ಣ ವ್ಯಕ್ತಿಯನ್ನಾಗಿ ಬಿಂಬಿಸಿ ಈ ವ್ಯಕ್ತಿಗಳು ಅಸ್ಥಿರ ಮತ್ತು ದುರ್ಬಲ ಸರ್ಕಾರ ರಚಿಸಲು ಹೊರಟಿದ್ದಾರೆ" ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News