ನೀಟ್ ಪರೀಕ್ಷೆ ಗೊಂದಲ: ವಿದ್ಯಾರ್ಥಿಗಳ ಪರದಾಟ

Update: 2019-05-05 13:46 GMT

ಬೆಂಗಳೂರು, ಮೇ 5: ಹಂಪಿ ಎಕ್ಸ್‌ಪ್ರೆಸ್ ರೈಲು ವಿಳಂಬ, ಪರೀಕ್ಷಾ ಕೇಂದ್ರಗಳ ಬದಲಾವಣೆಯಿಂದಾಗಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್) ಗೊಂದಲದಿಂದಲೇ ಪೂರ್ಣಗೊಂಡಿದೆ.

ರಾಜ್ಯದ ಮೈಸೂರು, ಕಲಬುರಗಿ, ಬೆಂಗಳೂರು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು ಹಾಗೂ ಉಡುಪಿ ನಗರಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ, ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಹಲವೆಡೆ ಕಳೆದೆರಡು ದಿನಗಳ ಹಿಂದೆಯೇ ಪರೀಕ್ಷಾ ಕೇಂದ್ರಗಳನ್ನು ಬದಲಿಸಲಾಗಿದ್ದರೂ, ವಿದ್ಯಾರ್ಥಿಗಳಿಗೆ ಯಾವುದೇ ಮುನ್ಸೂಚನೆ ನೀಡಿಲ್ಲ. ಹೀಗಾಗಿ, ಪಿಯುಸಿ ಬಳಿಕ ಮೆಡಿಕಲ್ ಮಾಡಬೇಕು ಎಂಬ ಅಭಿಲಾಷೆಯಿಂದ ಪರೀಕ್ಷೆ ಬರೆಯಲು ಬಂದವರು ಪರದಾಡುವಂತಾಯಿತು.

ಕಲಬುರಗಿಯ ಎಸ್‌ಬಿಆರ್ ಪಿಯು ಕಾಲೇಜಿನಲ್ಲಿ ಏಕಾಏಕಿ ಎರಡು ಪರೀಕ್ಷಾ ಕೇಂದ್ರಗಳನ್ನು ಮಾರ್ಪಾಡು ಮಾಡಲಾಗಿತ್ತು. ಮೈಸೂರಿನ ಕೇಂದ್ರೀಯ ವಿದ್ಯಾಲಯದ ಶಾಲೆಯ ಪರೀಕ್ಷಾ ಕೇಂದ್ರವನ್ನು ಅಲ್ಲಿನ ಹೊಸ ಕಟ್ಟಡಕ್ಕೆ ವರ್ಗಾವಣೆ ಮಾಡಿದ್ದರು. ಇನ್ನು ಬೆಂಗಳೂರಿನ ಯಲಹಂಕ ಬಳಿಯ ಆವಲಹಳ್ಳಿ ಪ್ರೆಸಿಡೆನ್ಸಿ ಶಾಲೆಯ ಪರೀಕ್ಷಾ ಕೇಂದ್ರವನ್ನು ಬದಲಾವಣೆ ಮಾಡಿದ್ದರು. ಇದರಿಂದಾಗಿ ವಿದ್ಯಾರ್ಥಿಗಳು ಹೊಸ ಕೇಂದ್ರಗಳನ್ನು ಹುಡುಕಲು ಪರದಾಡಿದರು. ಅಲ್ಲದೆ, ತಡವಾಗಿ ಕೇಂದ್ರ ಪ್ರವೇಶ ಮಾಡಿ, ಸಮಯದ ಅಭಾವದ ಒತ್ತಡಕ್ಕೆ ಒಳಗಾದ ಸ್ಥಿತಿ ನಿರ್ಮಾಣವಾಗಿತ್ತು.

ಬಳ್ಳಾರಿ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದಿಂದ 600 ಕ್ಕೂ ಅಧಿಕ ವಿದ್ಯಾರ್ಥಿಗಳು ಶನಿವಾರ ರಾತ್ರಿ 10 ಗಂಟೆಗೆ ಹೊರಡುವ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಆರಂಭಿಸಿದ್ದರು. ಈ ರೈಲು ಬೆಳಗ್ಗೆ 6 ಗಂಟೆ ವೇಳೆ ಬೆಂಗಳೂರು ತಲುಪಬೇಕಿತ್ತು. ಆದರೆ, ರೈಲು ನಿಗದಿತ ಸಮಯಕ್ಕಿಂತ ಸರಿಸುಮಾರು 10 ಗಂಟೆ ವಿಳಂಬವಾಗಿ ಬೆಂಗಳೂರಿಗೆ ಬಂದ್ದಿರಿಂದ ನೂರಾರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ.

ರವಿವಾರ ಮಧ್ಯಾಹ್ನ 2 ರಿಂದ 5 ಗಂಟೆವರೆಗೂ ನೀಟ್ ಪರೀಕ್ಷೆ ನಡೆದಿದ್ದು, ಮಧ್ಯಾಹ್ನ 12-30 ರೊಳಗೆ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರದಲ್ಲಿ ವರದಿ ಮಾಡಿಕೊಳ್ಳಬೇಕಿತ್ತು. ಆದರೆ, ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಬರುತ್ತಿದ್ದ ರೈಲು ಬೆಳಗ್ಗೆ 11.30 ರವರೆಗೂ ಹಿರಿಯೂರು ತಲುಪಿರಲಿಲ್ಲ.

ಮನವಿಗೆ ಸ್ಪಂಧಿಸದ ಅಧಿಕಾರಿಗಳು: ರೈಲ್ವೆ ಇಲಾಖೆಯ ನಿರ್ಲಕ್ಷದಿಂದ ಪರೀಕ್ಷೆಗೆ ತೆರಳಲು ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಅಲ್ಲದೆ, ಕೆಲವರು ರೈಲ್ವೆ ಅಧಿಕಾರಿಗಳನ್ನು ಈ ಸಂಬಂಧ ಸಂಪರ್ಕ ಮಾಡಿ ಮನವಿ ಮಾಡಿದರೂ ಏನೂ ಮಾಡಲಿಲ್ಲ ಎಂದು ಪೋಷಕರು ದೂರಿದ್ದಾರೆ.

ರೈಲ್ವೆ ಇಲಾಖೆ ಸಮರ್ಥನೆ: ರೈಲ್ವೆ ಇಲಾಖೆಯು ರೈಲ್ವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಂಪಿ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಕುರಿತು ರೈಲ್ವೆ ಟಿಕೆಟ್ ಕಾಯ್ದಿರಿಸಿದವರಿಗೆ ಮಾಹಿತಿಯನ್ನೂ ರವಾನಿಸಲಾಗಿತ್ತು ಎಂದು ರೈಲ್ವೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ನೆರವಾಗುವಂತೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೇಂದ್ರ ಸರಕಾರದ ವತಿಯಿಂದ ನಡೆಯುವ ಪರೀಕ್ಷೆ ಇದಾಗಿದ್ದು, ನಾವು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಲು ಎಲ್ಲ ಯತ್ನಗಳನ್ನು ಮಾಡುತ್ತಿದ್ದೇವೆ.

- ಇ.ತುಕಾರಾಂ, ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ

ಸಿದ್ದು ಟೀಕೆ

ಬೇರೆಯವರ ಸಾಧನೆಗೆ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತೀರಲ್ಲಾ, ನಿಮ್ಮ ಸಂಪುಟದ ಸಹುದ್ಯೋಗಿಯ ಅಸಮರ್ಥತೆಯ ಹೊಣೆಯನ್ನೂ ನೀವು ಹೊರಬೇಕು. ರೈಲುಗಳ ವಿಳಂಬದಿಂದ ಕರ್ನಾಟಕದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ನೀಟ್ ಪರೀಕ್ಷೆ ಸಂದರ್ಭದಲ್ಲಿ ರೈಲ್ವೆ ಇಲಾಖೆ ನಿರ್ಲಕ್ಷದಿಂದಾಗಿ ಹಂಪಿ ಎಕ್ಸ್‌ಪ್ರೆಸ್ ರೈಲು ತಡವಾಗಿ ಬಂದಿದ್ದನ್ನು ಖಂಡಿಸಿ ಹಾಗೂ ಕೊನೆಕ್ಷಣದಲ್ಲಿ ಪರೀಕ್ಷಾ ಕೇಂದ್ರವನ್ನು ಬದಲಾವಣೆ ಮಾಡಿದ್ದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News