ಕಬ್ಬನ್‌ಪೇಟೆ: ಎಸ್‌ಡಿಪಿಐ ವತಿಯಿಂದ ರಕ್ತದಾನ ಶಿಬಿರ

Update: 2019-05-05 16:22 GMT

ಬೆಂಗಳೂರು, ಮೇ 5: ಎಲ್ಲ ದಾನಕ್ಕಿಂತಲೂ ಶ್ರೇಷ್ಟವಾದ ದಾನ ರಕ್ತದಾನವಾಗಿದ್ದು, ರಕ್ತವನ್ನು ದಾನ ಮಾಡುವುದರಿಂದ ತುರ್ತು ಅವಶ್ಯಕತೆಯುಳ್ಳ ರೋಗಿಯ ಜೀವ ರಕ್ಷಣೆ ಮಾಡಿದಂತಾಗುತ್ತದೆ ಎಂದು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಮುಜಾಹಿದ್ ಪಾಷಾ ಹೇಳಿದರು.

ರವಿವಾರ ನಗರದ ಕಬ್ಬನ್‌ಪೇಟೆಯ ಹಮೀದ್ ಶಾ ಆವರಣದ ಉರ್ದು ಸಭಾಂಗಣದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕರಾವಳಿ ವಿಭಾಗ ಹಾಗೂ ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ, ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ರೋಗಗಳ ಕಾರಣಗಳಿಂದಾಗ ಲಕ್ಷಾಂತರ ರೋಗಿಗಳು ರಕ್ತದ ಕೊರತೆಯಿಂದ ಸಾವನ್ನಪ್ಪುತ್ತಿರುವುದನ್ನು ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ. ಆದ್ದರಿಂದ ರಕ್ತದಾನವನ್ನು ನಮ್ಮ ಸಾಮಾಜಿಕ ಜವಾಬ್ದಾರಿ ಎಂದು ತಿಳಿದು ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ನುಡಿದರು.

ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ರಕ್ತದ ಅವಶ್ಯಕತೆ ನೀಗುತ್ತಿರುವುದು ಇಂತಹ ರಕ್ತದಾನ ಶಿಬಿರದಲ್ಲಿ ಸಂಗ್ರಹವಾಗಿರುವ ರಕ್ತದಾನದಿಂದ. ಹೀಗಾಗಿ, ಮೊದಲು ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಬೇಕೆಂದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದ್ ಶರೀಫ್ ಮಾತನಾಡಿ, ಓರ್ವನ ಪ್ರಾಣ ಉಳಿಸಲು ಅಗತ್ಯವಾಗಿ ಬೇಕಾಗುವ ರಕ್ತವನ್ನು ಇದುವರೆಗೆ ಉತ್ಪಾದಿಸಲು ಮನುಷ್ಯನಿಂದ ಸಾಧ್ಯವಾಗಿಲ್ಲ. ಇಂತಹ ಅಮೂಲ್ಯವಾದ ರಕ್ತವನ್ನು ಇನ್ನೊಬ್ಬರಿಗೆ ದಾನ ಮಾಡುವ ಮೂಲಕ ಅವರ ಪ್ರಾಣ ಉಳಿಸುವುದು ಅತ್ಯಂತ ಪುಣ್ಯದಾಯಕ ಕರ್ಮವಾಗಿದೆ ಎಂದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಕರಾವಳಿ ವಿಭಾಗದ ಅಧ್ಯಕ್ಷ ಇಸ್ಮಾಯಿಲ್, ಮುಖಂಡರಾದ ಹುಸೈನ್ ಹಾಜಿ, ಸಯ್ಯದ್ ಸುಲ್ತಾನ್, ಹಾರಿಸ್ ಸುನ್ನತ್ ಕೆರೆ, ರಿಝ್ವಾನ್, ಅಝರುದ್ದೀನ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News