ಕಲ್ಪನೆಯೇ ಕವಿಯ ಶಕ್ತಿ: ಸಾಹಿತಿ ಜಯಂತ್ ಕಾಯ್ಕಿಣಿ

Update: 2019-05-05 17:06 GMT

ಬೆಂಗಳೂರು, ಮೇ.5: ಕಲ್ಪನೆಯೇ ಕವಿಯ ಶಕ್ತಿಯ ಚಿಲುಮೆಯಾಗಿರುತ್ತದೆ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟರು.

ರವಿವಾರ ಜಯನಗರದ ಜಯರಾಮ ಸೇವಾ ಮಂಡಳಿಯಲ್ಲಿ ಸಂವಾದ ಟ್ರಸ್ಟ್ ಆಯೋಜಿಸಿದ್ದ ಜಯಂತ್ ಕಾಯ್ಕಿಣಿ ಅವರೊಂದಿಗೆ ಒಂದು ಮುಂಜಾನೆ ಸಾಹಿತ್ಯ ಸಂವಾದದಲ್ಲಿ ಮಾತನಾಡಿದ ಅವರು, ಕವಿಯಾದವರ ಕಲ್ಪನೆ ನೀರಿನ ಮೇಲೆ ಕಲ್ಲು ಎಸೆದಾಗ ಸೃಷ್ಠಿಯಾಗುವ ತರಂಗದ ರೀತಿಯಲ್ಲಿ ಕವಲುಗಳಾಗುತ್ತವೆ. ಕನಸುಗಳು ಮನಸ್ಸಿನಾಳದಲ್ಲಿ ಬಂದಾಗಲೇ ಕವಿತೆಯ ಕಲ್ಪನೆ ಮೂಡುವುದು. ಬಾಲ್ಯದಲ್ಲಿ ನಡೆದ ಘಟನೆಗಳು ಯಾವಾಗಲೋ ಕಲ್ಪನೆಯ ಮೂಲಕ ಕವಿತೆಗಳಾಗಿ ಬಿಡುತ್ತವೆ ಎಂದು ಹೇಳಿದರು.

ನನಗೆ ಹಾಡು ಬರೆಯುವ ತರಬೇತಿ ಶುರುವಾಗಿದ್ದೇ ನಾಟಕಗಳ ಮೂಲಕ, ಸೇವಂತಿ ಪ್ರಸಂಗ ನಾಟಕಕ್ಕಾಗಿ ಎರಡೇ ದಿನಗಳಲ್ಲಿ ಇಪ್ಪತ್ತೈದು ಹಾಡುಗಳನ್ನು ಬರೆದಿದ್ದೆ. ಚಲನಚಿತ್ರದ ನಟ- ನಟಿಯರ ಹೆಸರನ್ನು ಕೇಳಿ ಹಾಡು ಬರೆಯುವುದಕ್ಕೆ ಆಗುವುದಿಲ್ಲ. ಬದಲಿಗೆ ಚಲನಚಿತ್ರದ ಹಿನ್ನೆಲೆ ಹಾಗೂ ಸನ್ನಿವೇಶಗಳನ್ನು ತಿಳಿದುಕೊಂಡು ಹಾಡು ಬರೆಯಲಾಗುತ್ತದೆ ಎಂದು ತಿಳಿಸಿದರು.

ಸಾಹಿತಿ ವಿವೇಕ ಶಾನಭಾಗ್ ಮಾತನಾಡಿ, ಜಯಂತ್ ಕಾಯ್ಕಿಣಿ ವಸ್ತು ವಿಷಯಗಳನ್ನು ಗ್ರಹಿಸಿ ನೋಡುವ ರೀತಿಯೇ ವಿಭಿನ್ನವಾಗಿರುತ್ತದೆ. ಹೀಗಾಗಿಯೇ ಅವರ ಎಲ್ಲ ಕೃತಿಗಳು ಒಂದಕ್ಕಿಂತ ಒಂದು ಮೀರಿಸುವಂತೆ ಇವೆ. ಇಂತಹ ವೈವಿಧ್ಯವಾದ ಬರಹದ ಪರಿವೆಯನ್ನು ಎಲ್ಲರೂ ಅನುಕರಿಸಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಅವರ ಬಗ್ಗೆ ಅಧ್ಯಯನಗಳು ನಡೆಯಬೇಕು ಎಂದು ಸಲಹೆ ನೀಡಿದರು.

ಸಂವಾದದಲ್ಲಿ ಪತ್ರಕರ್ತ ಎಸ್.ದಿವಾಕರ, ಪತ್ರಕರ್ತೆ ಉಮಾ ರಾವ್ ಹಾಗೂ ಸಾಹಿತಿ ಶ್ರೀನಿವಾಸ್ ವೈದ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News