ರಿಸರ್ವ್ ಬ್ಯಾಂಕ್ ಸ್ಥಾಪನೆ ಸೇರಿ ಹಲವು ಕಾರ್ಯಗಳು ಅಂಬೇಡ್ಕರ್ ಚಿಂತನೆ ಫಲಗಳು: ಡಾ.ಎಸ್.ಮಾದೇಶ್ವರನ್

Update: 2019-05-05 17:18 GMT

ಬೆಂಗಳೂರು, ಮೇ 5: ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ವಿಭಾಗಗಳ ವತಿಯಿಂದ ಕಾಲೇಜಿನಲ್ಲಿ 128ನೆ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರಾಧ್ಯಾಪಕ ಡಾ.ಎಸ್.ಮಾದೇಶ್ವರನ್ ಮಾತನಾಡಿ, ದೇಶದಲ್ಲಿ ರಿಸರ್ವ್ ಬ್ಯಾಂಕ್ ಸ್ಥಾಪನೆ, ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ ಸಹಿತ ಹಲವಾರು ಜನಹಿತ ಕಾರ್ಯಗಳು ಅಂಬೇಡ್ಕರ್ ಚಿಂತನೆಯ ಫಲಗಳು ಎಂದರು. 

ಅಂಬೇಡ್ಕರ್ ಪ್ರತಿಪಾದಿಸಿದ ಹಿಂದೂ ಕೋಡ್ ಬಿಲ್ ಜಾರಿಗೊಂಡಿದ್ದರೆ ಮಹಿಳೆಯರ ಸಮಸ್ಯೆ ನಿವಾರಣೆಯಾಗಿ ಮಹಿಳಾ ಸಬಲೀಕರಣಕ್ಕೆ ನಾಂದಿಯಾಗುತ್ತಿತ್ತು ಎಂದು ತಿಳಿಸಿದರು. ಕೇವಲ ದಲಿತ ಮಹಿಳೆಯರು ಮಾತ್ರವಲ್ಲ, ಸಮಾಜದ ಎಲ್ಲ ವರ್ಗಗಳ ಮಹಿಳೆಯರನ್ನು ಕಾಡುತ್ತಿದ್ದ ಅನಿಷ್ಠ ಪದ್ಧತಿ ವಿರುದ್ಧ ಧ್ವನಿಯೆತ್ತಿದ್ದರು. ಸ್ತ್ರೀಯರನ್ನು ಶೋಷಣೆಯಿಂದ ಮುಕ್ತಗೊಳಿಸಲು ನಾನಾ ರೀತಿಯ ಹೋರಾಟ ನಡೆಸಿದ ಅಂಬೇಡ್ಕರ್‌ರವರು ಮಹಿಳೆಯರ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ಶ್ರಮಿಸಿದರು. ಆದರೆ, ಹಿಂದೂ ಕೋಡ್ ಬಿಲ್ ಜಾರಿಗೆ ನಡೆಸಿದ ಹೋರಾಟ ದುರಾದೃಷ್ಟವಶಾತ್ ಫಲಿಸಲಿಲ್ಲ ಎಂದರು.

ಬೆಂಗಳೂರು ವಿವಿ ಕುಲಸಚಿವ(ವೌಲ್ಯಮಾಪನ) ಪ್ರೊ.ಸಿ.ಶಿವರಾಜು ಮುಖ್ಯ ಅತಿಥಿಯಾಗಿದ್ದರು. ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಂಜೀವ್‌ರಾಜ್ ಮಾತನಾಡಿದರು. ಪ್ರಾಂಶುಪಾಲ ಪ್ರೊ.ವಿ.ಸುದೇಶ್, ಕಾನೂನು ವಿಭಾಗದ ಮುಖ್ಯಸ್ಥ ಪ್ರೊ.ಡಾ.ಎನ್.ದಶರಥ್ ಕಾರ್ಯಕ್ರಮ ಸಂಯೋಜಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News