ಶ್ರೀನಗರ ಹೋಟೆಲ್ ಪ್ರಕರಣ: ಮೇಜರ್ ಗೊಗೋಯ್‌ ಕಾಶ್ಮೀರದಿಂದ ವರ್ಗಾವಣೆ, 6 ತಿಂಗಳ ಸೇವಾ ಹಿರಿತನ ನಷ್ಟ

Update: 2019-05-05 17:33 GMT

ಹೊಸದಿಲ್ಲಿ, ಮೇ 5: ಕಳೆದ ವರ್ಷದ ಮೇಯಲ್ಲಿ ಕಾಶ್ಮೀರದ ಮಹಿಳೆಯೊಂದಿಗೆ ಶ್ರೀನಗರದ ಹೋಟೆಲ್‌ಗೆ ಪ್ರವೇಶಿಸಲು ಪ್ರಯತ್ನಿಸಿ ವಾಗ್ವಾದ ನಡೆಸಿದ ಕಾರಣಕ್ಕೆ ಜಮ್ಮು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದ ಮೇಜರ್ ಗೊಗೋಯ್‌ಗೆ ಸೇನಾಪಡೆ ತೀವ್ರ ವಾಗ್ದಂಡನೆಯೊಂದಿಗೆ ಪಿಂಚಣಿಗೆ ಆರು ತಿಂಗಳ ಸೇವಾ ಜ್ಯೇಷ್ಠತೆ ಕಡಿತಗೊಳಿಸಿದೆ.

2017ರ ಎಪ್ರಿಲ್‌ನಲ್ಲಿ ಕಾಶ್ಮೀರದ ಬುದ್‌ಗಾಂವ್ ಜಿಲ್ಲೆಯಲ್ಲಿ ‘ಮಾನವ ಗುರಾಣಿ’ ವಿವಾದದ ಕೇಂದ್ರ ಬಿಂದುವಾಗಿದ್ದ ಗೊಗೋಯ್ ವಿರುದ್ಧ ಮತ್ತಷ್ಟು ಕ್ರಮಗಳನ್ನು ಕೈಗೊಂಡಿರುವ ಸೇನಾಪಡೆ ಅವರನ್ನು ಕಾಶ್ಮೀರ ರಾಜ್ಯದಿಂದ ವರ್ಗಾಯಿಸಿದೆ.

ಆದೇಶವನ್ನು ವಿರೋಧಿಸಿ ಮಹಿಳೆಯರೊಂದಿಗೆ ಒಡನಾಟ ಬೆಳೆಸಿರುವುದು ಮತ್ತು ತನ್ನ ಮೇಲಧಿಕಾರಿಗಳ ಅನುಮತಿ ಪಡೆಯದೆ ಕಾರ್ಯಕ್ಷೇತ್ರವನ್ನು ತೊರೆದಿರುವ ಪ್ರಕರಣದ ವಿಚಾರಣೆ ಸೇನಾ ನ್ಯಾಯಾಲಯದಲ್ಲಿ ನಡೆದಿದ್ದು ಮೇಜರ್ ಗೊಗೋಯ್‌ರನ್ನು ದೋಷಿ ಎಂದು ಪರಿಗಣಿಸಲಾಗಿದೆ. ಮೇಜರ್ ಗೊಗೊಯ್‌ಗೆ ವಿಧಿಸಲಾಗಿದ್ದ ಶಿಸ್ತು ಮತ್ತು ಎಚ್ಚರಿಕೆ ನಿಷೇಧವನ್ನು ತೆರವುಗೊಳಿಸಿ ಅವರನ್ನು ಕಾಶ್ಮೀರದಿಂದ ಹೊರಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಶ್ರೀನಗರದ ಗ್ರಾಂಡ್ ಮಮತಾ ಹೋಟೆಲ್‌ಗೆ ಕಾಶ್ಮೀರದ ಮಹಿಳೆ ಹಾಗೂ ಮೂರನೇ ವ್ಯಕ್ತಿಯೊಂದಿಗೆ ಪ್ರವೇಶಿಸಲು ಮುಂದಾಗಿದ್ದ ಮೇಜರ್ ಗೊಗೋಯ್‌ರನ್ನು ಪೊಲೀಸ್ ಸಿಬ್ಬಂದಿಯೊಬ್ಬರು ತಡೆದಿದ್ದರು. ಆಗ ಅವರಿಬ್ಬರೊಳಗೆ ವಾಗ್ವಾದ ಉಂಟಾಗಿದ್ದು ಬಳಿಕ ಸ್ವಲ್ಪ ಹೊತ್ತು ಮೇಜರ್ ಗೊಗೋಯ್ ಕಾಶ್ಮೀರ ಪೊಲೀಸರ ವಶದಲ್ಲಿದ್ದರು. ಈ ಪ್ರಕರಣ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಹೇಳಿಕೆ ನೀಡಿದ್ದ ಸೇನಾ ಮುಖ್ಯಸ್ಥರಾಗಿದ್ದ ಜ ರಾವತ್, ಯಾವುದೇ ಸೇನಾಧಿಕಾರಿ ಕರ್ತವ್ಯಲೋಪ ಎಸಗಿದ್ದಲ್ಲದೆ ತಪ್ಪಿತಸ್ತ ಎಂದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News