ವಿಶ್ವೇಶ್ವರಯ್ಯರನ್ನು ಟೀಕಿಸುವುದು ಸಲ್ಲ: ಕವಿ ಡಾ.ದೊಡ್ಡರಂಗೇಗೌಡ

Update: 2019-05-05 18:35 GMT

ಬೆಂಗಳೂರು, ಮೇ 5: ನಾಡನ್ನು ಕಟ್ಟಲು ಶ್ರಮಿಸಿದ ಸರ್.ಎಂ.ವಿಶ್ವೇಶ್ವರಯ್ಯರ ಸಾಧನೆಗಳನ್ನು ಕೆಲವು ಸಾಹಿತಿಗಳು ಹಳದಿ ಕಣ್ಣಿನಿಂದ ನೋಡುವುದನ್ನು ಬಿಟ್ಟು, ಸಕಾರಾತ್ಮಕವಾಗಿ ಚಿಂತಿಸಬೇಕೆಂದು ಕವಿ ಡಾ.ದೊಡ್ಡರಂಗೇಗೌಡ ಹೇಳಿದ್ದಾರೆ.

ರವಿವಾರ ನಗರದ ಕಸಾಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 105 ನೆ ಸಂಸ್ಥಾಪಕ ದಿನಾಚರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು-ನಾಡಿನ ಸಾಂಸ್ಕೃತಿಕ ಸಂಪತ್ತು’ ವಿಷಯದ ಕುರಿತ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಗೆ ವಿಶ್ವೇಶ್ವರಯ್ಯನವರ ಪಾತ್ರ ಅಪಾರವಿದ್ದು, ನಾಲ್ವಡಿ ಕೃಷ್ಣರಾಯರೊಡನೆ ಸೇರಿ ಸಂಸ್ಥೆ ಸ್ಥಾಪಿಸಿದ್ದಾರೆ. ಅಲ್ಲದೆ, ನಾಡಿನಲ್ಲಿ ಕನ್ನಂಬಾಡಿ ಕಟ್ಟೆ ಕಟ್ಟುವಲ್ಲಿಯೂ ಅವರ ಪಾತ್ರ ಮಹತ್ತರವಾದುದಾಗಿದೆ. ಆದರೆ, ಇಂದು ಕೆಲವು ಮಡಿವಂತಿಕೆ ಸಾಹಿತಿಗಳು ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಅದು ಸರಿಯಾದ ಕ್ರಮವಲ್ಲ. ಅವರ ಸಾಧನೆಗಳನ್ನು ಹಳದಿ ಕಣ್ಣಿನಿಂದ ನೋಡುವುದು ನಿಲ್ಲಿಸಬೇಕು ಎಂದು ನುಡಿದರು.

ನಾಡು, ನುಡಿ, ಭಾಷೆಯ ರಕ್ಷಣೆಗಾಗಿ ಅಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಕಸಾಪ ಸ್ಥಾಪನೆಗೆ ಬುನಾದಿ ಹಾಕಿದರು. 125 ಸದಸ್ಯರಿಂದ ಆರಂಭವಾಗಿ, ಇಂದು ಮೂರು ಲಕ್ಷದಷ್ಟು ಸದಸ್ಯರನ್ನು ಹೊಂದಿದ್ದು, ಅಂದಿನಿಂದ ಇಂದಿನವರೆಗೂ ಹಲವು ಹಂತಗಳಲ್ಲಿ ಕಸಾಪ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ, ದೇಶ- ವಿದೇಶಗಳಲ್ಲಿ ಕನ್ನಡದ ಅಸ್ಮಿತೆಯನ್ನು ಸಾರಿದೆ. ಸಾವಿರಾರು ಪುಸ್ತಕಗಳನ್ನು ಪ್ರಕಟಿಸಿದೆ. ಅಲ್ಲದೆ, ವಿದೇಶಗಳವರೆಗೂ ಕನ್ನಡದ ಸಾಹಿತ್ಯವನ್ನು ಪರಿಚಯಿಸಿದೆ ಎಂದು ಬಣ್ಣಿಸಿದರು.

ಆಂಗ್ಲ ಮಾಧ್ಯಮ ಭೂತ ಹಿಡಿದಿದೆ: ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕನ್ನಡ ಶಾಲೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟತೆಯಿಲ್ಲ. ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಮಾಡಲು ಮುಂದಾಗಿದ್ದಾರೆ. ಅದು ಸಲ್ಲದು, ಕನ್ನಡ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳ ಮಟ್ಟಕ್ಕೆ ಬೆಳೆಯಬೇಕು ಹೊರತು ಶಾಲೆಗಳನ್ನೇ ಆಂಗ್ಲ ಮಾಧ್ಯಮವಾಗಿ ಬದಲಿಸಲಾಗುತ್ತಿದೆ. ಸಿಎಂಗೆ ಆಂಗ್ಲ ಮಾಧ್ಯಮ ಶಾಲೆಗಳ ಭೂತ ಹಿಡಿದುಕೊಂಡಿದೆ ಎಂದರು.

ಕಸಾಪ ಸ್ವಾಯತ್ತ ಸಂಸ್ಥೆಯಾಗಲಿ: ಕಸಾಪ ಸರಕಾರದಿಂದ ಸಹಾಯ ಪಡೆಯದೇ ಎಂದು ಕಾರ್ಯ ನಿರ್ವಹಿಸುತ್ತದೆಯೋ ಅಂದು ಸ್ವತಂತ್ರ ಸಂಸ್ಥೆಯಾಗುತ್ತದೆ. ಇಲ್ಲದಿದ್ದರೆ, ಸಾಹಿತ್ಯ ಸಮ್ಮೇಳನಗಳಲ್ಲಿ ಜನಪ್ರತಿನಿಧಿಗಳನ್ನು ಆಹ್ವಾನಿಸಿ, ಅವರನ್ನು ಹೊಗಳುವ ಪದ್ಧತಿ ಬೆಳೆಯುತ್ತದೆ. ಅದೊಂದು ಅನಿಷ್ಠ ಪದ್ಧತಿಯಾಗಿದ್ದು, ನಿರ್ಮೂಲನೆಯಾಗಬೇಕು ಎಂದು ಆಶಿಸಿದರು.

ಕಸಾಪ ಅಧ್ಯಕ್ಷ ಮನುಬಳಿಗಾರ್, ಲೇಖಕ ನಾಗರಾಜ್, ಮಲ್ಲಿಕಾರ್ಜುನಪ್ಪ, ರಾಜಶೇಖರ ಹತಗುಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News