ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-05-07 13:55 GMT

ಬೆಂಗಳೂರು, ಮೇ 7: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ನಾನೂ ಪ್ರತಿಪಾದಿಸುತ್ತೇನೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂದರೆ ನಾನು ಕಾಯುತ್ತೇನೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಉತ್ತಮ ಕೆಲಸ ಮಾಡಿದ್ದು, ಅನ್ನಭಾಗ್ಯ, ಕ್ಷೀರಭಾಗ್ಯ, ಮೈತ್ರಿ, ಮನಸ್ವಿನಿ ಸೇರಿದಂತೆ ಮಹತ್ವದ ಯೋಜನೆಗಳನ್ನ ಕೊಟ್ಟಿದ್ದಾರೆ. ಬಡವರ ಪರ ಕೆಲಸ ಮಾಡಿದ್ದಾರೆ. ಅವರು ಎರಡನೇ ಬಾರಿ ಸಿಎಂ ಆಗಬೇಕಿತ್ತು. ಆದರೆ, ಜನರ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಅವರಿಗೆ ಮತ್ತೊಮ್ಮೆ ಸಿಎಂ ಆಗುವ ಎಲ್ಲ ಅರ್ಹತೆಗಳಿವೆ ಎಂದು ನುಡಿದರು.

ಬಿಜೆಪಿಯವರಿಂದ ಜೆಡಿಎಸ್‌ಗೆ ಓಟು: ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿಯವರೇ ಮತ ಹಾಕಿದ್ದಾರೆಂದು ಹೇಳಿದ ಎಂ.ಬಿ.ಪಾಟೀಲ್, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 16ರಿಂದ 18 ಸ್ಥಾನಗಳನ್ನು ಗೆಲ್ಲಲಿದೆ. ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ಎಲ್ಲಕ್ಕೂ ಉತ್ತರ ಸಿಗಲಿದೆ ಎಂದರು.

ವರದಿಗೆ ಸೂಚನೆ: ಬೆಂಗಳೂರು ವಿವಿ ಸರಸ್ವತಿ ಮೂರ್ತಿ ತೆರವು ಮಾಡಿ ಬುದ್ಧ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಜಿಪಿಯಿಂದ ವರದಿ ಕೋರಿದ್ದು, ಒಂದು ಪುತ್ಥಳಿ ತೆರವುಗೊಳಿಸಿ ಆ ಸ್ಥಳದಲ್ಲಿ ಮತ್ತೊಂದು ಮೂರ್ತಿ ಸ್ಥಾಪನೆ ಸಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು.

ಬಿಗಿ ಭದ್ರತೆ: ಶ್ರೀಲಂಕಾ ಬಾಂಬ್ ಸ್ಫೋಟ ರೂವಾರಿಗಳು ಬೆಂಗಳೂರಿಗೆ ಬಂದಿದ್ದರು ಎಂಬುದು ಅತ್ಯಂತ ಸೂಕ್ಷ್ಮವಿಚಾರ. ಈ ಬಗ್ಗೆ ಎಚ್ಚರ ವಹಿಸಲಾಗಿದೆ. ಇದರಲ್ಲಿ ಕೇಂದ್ರ ಸರಕಾರದ ಪಾತ್ರ ಹೆಚ್ಚಿದೆ. ಅವರ ಸೂಚನೆಗಳನ್ನು ಪಾಲಿಸುತ್ತೇವೆ ಎಂದು ಪಾಟೀಲ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಯಡಿಯೂರಪ್ಪರ ಆಪರೇಷನ್ ಆಡಿಯೋ ತನಿಖೆಗೆ ತಂಡ ರಚನೆ ಮಾಡಬೇಕು ಎಂದು ತೀರ್ಮಾನಿಸುವ ವೇಳೆಗೆ ಲೋಕಸಭೆ ಚುನಾವಣೆ ಬಂದಿದ್ದು, ರಚನೆ ವಿಳಂಬವಾಗಿದೆ ಎಂದ ಅವರು, ಮೇ 23ರ ಬಳಿಕ ತನಿಖಾ ತಂಡ ರಚನೆ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News